Advertisement
ಕಾಂಗ್ರೆಸ್ ಪಕ್ಷ ಕೆಸರಿನಲ್ಲಿ ಮೀನು ಹಿಡಿಯುವ ಅಥವಾ ಬೆಂಕಿಗೆ ತುಪ್ಪ ಸುರಿಯುವ ಮತ್ತು ಜನರಲ್ಲಿ ಅಶಾಂತಿ ಸೃಷ್ಟಿಸುವ ತನ್ನ ಹಳೆಯ ಚಾಳಿಯನ್ನು ಮುಂದುವರಿಸಿದೆ. ಮಧ್ಯಪ್ರದೇಶದ ಮಂಡ್‌ಸೋರ್‌ನಲ್ಲಿ ರೈತರ ಹಿಂಸಾತ್ಮಕ ಪ್ರತಿಭಟನೆಯ ಹಿನ್ನೆಲೆಯಲ್ಲಿ ನಡೆದ ಗೋಲಿಬಾರಿಗೆ ಐವರು ಬಲಿಯಾದ ದುರದೃಷ್ಟಕರ ಘಟನೆಯನ್ನು ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ. ಹಿಂಸಾಚಾರ ಜನರ ಜೀವಹಾನಿಗೆ ಕಾರಣವಾಗಿರುವುದು ತೀವ್ರ ನೋವಿನ ಸಂಗತಿ. ಕೇಂದ್ರದ ಎನ್‌ಡಿಎ ಸರ್ಕಾರ ಹಾಗೂ ಬಿಜೆಪಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು ರೈತರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿವೆ. ಆದರೆ ಕಾಂಗ್ರೆಸ್ ಈ ಘಟನೆಯನ್ನು ರಾಜಕೀಯಗೊಳಿಸುತ್ತಿದ್ದು, ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮಾತ್ರ ರೈತ ಸಮುದಾಯ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂಬಂತೆ ಬಿಂಬಿಸುತ್ತಿದೆ.
Related Articles
Advertisement
ಇನ್ನೊಂದು ಪ್ರಮುಖ ಯೋಜನೆಯಾದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಪ್ರತಿ ಕೃಷಿಭೂಮಿಗೆ ನೀರುಣಿಸಲು ಉದ್ದೇಶಿಸಲಾಗಿದ್ದು ಇದಕ್ಕಾಗಿ 50,000 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ. 14 ಲಕ್ಷ ಕೋಟಿ ಮಣ್ಣಿನ ಆರೋಗ್ಯ ಕಾರ್ಡ್ ವಿತರಿಸುವ ಗುರಿ ಹೊಂದಲಾಗಿದ್ದು ಆ ಪೈಕಿ ಸುಮಾರು 7.1 ಕೋಟಿ ಕಾರ್ಡ್‌ಗಳನ್ನು ಈಗಾಗಲೇ ವಿತರಿಸಲಾಗಿದೆ. ಇ-ನ್ಯಾಮ್ ಯೋಜನೆ ಎಲ್ಲ ಕೃಷಿ ಮಾರುಕಟ್ಟೆಗಳ ನಡುವೆ ಸಂಪರ್ಕ ಕಲ್ಪಿಸುವುದರಿಂದ ರೈತರು ಯೋಗ್ಯ ದರದ ಬಗ್ಗೆ ತಿಳಿದುಕೊಂಡು ತಮ್ಮ ಉತ್ಪನ್ನಗಳನ್ನು ಆ ದರದಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಿದೆ. ಜತೆಗೆ ವಿವಿಧ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಆಮೂಲಾಗ್ರವಾಗಿ ಹೆಚ್ಚಿಸಲಾಗಿದೆ. ಸರ್ಕಾರ ಕೈಗೊಂಡ ಕ್ರಮಗಳು ಬೇಳೆ ಕಾಳುಗಳ ಉತ್ಪಾದನೆ ಹೆಚ್ಚಳಕ್ಕೆ ಸಹಕಾರಿಯಾಗಿವೆ. 2016-17ನೇ ಸಾಲಿಗಾಗಿ ಮುಂಗಾರು ಹಂಗಾಮಿನ ಬೇಳೆ ಕಾಳುಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಲಾಗಿದೆ. ತೊಗರಿ ಬೇಳೆಯ ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಾಲ್‌ಗೆ 4,625 ರೂ.ಯಿಂದ 5,050 ರೂ.ಉದ್ದಿನ ಬೇಳೆ 4,625 ರೂ.ನಿಂದ 5,000 ರೂ.ಗೆ ಹೆಚ್ಚಿಸಲಾಗಿದೆ.
ವಿದ್ಯುತ್ ಸಂಪರ್ಕವಿಲ್ಲದ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಪ್ರಮುಖ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ರೈತರು ಕೃಷಿ ಉತ್ಪನ್ನಗಳನ್ನು ಬೇಗನೆ ಸಾಗಿಸಲು ಅನುಕೂಲವಾಗುವಂತೆ ಗ್ರಾಮೀಣ ರಸ್ತೆ ಸಂಪರ್ಕ ಜಾಲ ಬಲವರ್ಧನೆಗೆ ಒತ್ತು ನೀಡಲಾಗಿದೆ. ಕೃಷಿ ಸಾಲಕ್ಕೆ ಆದ್ಯತೆ ಕಲ್ಪಿಸಲಾಗಿದ್ದು ಈ ವರ್ಷದ ಮುಂಗಡಪತ್ರದಲ್ಲಿ 10 ಲಕ್ಷ ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಹೊಸ ತಂತ್ರಜ್ಞಾನಗಳ ಬಗ್ಗೆ ರೈತರಿಗೆ ತಿಳಿಸಲು ದೂರದರ್ಶನ ಪ್ರತ್ಯೇಕ ‘ಕಿಸಾನ್ ವಾಹಿನಿ’ ಆರಂಭಿಸಿದೆ.
ಐವರು ರೈತರ ಸಾವಿನ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯಿಸುತ್ತಿರುವುದು ಅದರ ರಾಜಕೀಯ ದಿವಾಳಿಕೋರತನವನ್ನು ಸ್ಪಷ್ಟವಾಗಿ ಬಿಂಬಿಸುತ್ತದೆ. ಆ ರಾಜ್ಯದಲ್ಲಿ ದಿಗ್ವಿಜಯ್ ಸಿಂಗ್ ಮುಖ್ಯಮಂತ್ರಿಯಾಗಿದ್ದಾಗ 1998ರಲ್ಲಿ ಬೆತೂಲ್ ಜಿಲ್ಲೆಯ ಮುಲ್ತಾನಿಯಲ್ಲಿ ಸಂಭವಿಸಿದ ಪೊಲೀಸ್ ಗೋಲಿಬಾರಿಗೆ 24 ಮಂದಿ ರೈತರು ಬಲಿಯಾಗಿದ್ದರು. ಆಗ ಅವರು ರಾಜೀನಾಮೆ ನೀಡಿರಲಿಲ್ಲವೇಕೆ ಎಂಬುದು ಸರಳ ಪ್ರಶ್ನೆ. ಆಗ ಕಾಂಗ್ರೆಸ್ ಅವರ ರಾಜೀನಾಮೆಗೆ ಒತ್ತಾಯಿಸಿತ್ತೇ ಅಥವಾ ಆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸ್ಥಳಕ್ಕೆ ಭೇಟಿ ನೀಡಿದ್ದರೇ?
ಮಧ್ಯಪ್ರದೇಶ ಈಗ ಅತ್ಯಂತ ರೈತಸ್ನೇಹಿ ಮುಖ್ಯಮಂತ್ರಿ ಚೌಹಾಣ್ ಅವರನ್ನು ಹೊಂದಿದೆ. ಅವರು ಕೃಷಿರಂಗಕ್ಕೆ ಒತ್ತು ನೀಡಿದ್ದರಿಂದಾಗಿ ಆ ರಾಜ್ಯದಲ್ಲಿ ಕಳೆದ ಕೆಲ ವರ್ಷಗಳಿಂದ ಕೃಷಿ ಕ್ಷೇತ್ರದಲ್ಲಿ ಶೇ.20ಕ್ಕಿಂತ ಹೆಚ್ಚಿನ ಪ್ರಗತಿದರ ದಾಖಲಾಗಿದೆ. ಇದು ಇತರ ಯಾವುದೇ ರಾಜ್ಯಗಳಿಗೆ ಹೋಲಿಸಿದರೆ ಅದ್ವಿತೀಯವೆನಿಸಿದೆ. ಕೃಷಿ ಸಾಲಕ್ಕೆ ಶೂನ್ಯ ಬಡ್ಡಿ, ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ 4,500 ಕೋಟಿ ರೂ. ಸಬ್ಸಿಡಿ, ಕೃಷಿ ವಲಯಕ್ಕೆ 10 ಗಂಟೆಗಳ ಕಾಲ ಅಡೆತಡೆಯಿಲ್ಲದ ವಿದ್ಯುತ್ ಮುಂತಾದ ಅನೇಕ ರೈತಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ನೀರಾವರಿಯನ್ನು 7.5 ಲಕ್ಷ ಹೆಕ್ಟೇರ್‌ನಿಂದ 40 ಲಕ್ಷ ಹೆಕ್ಟೇರಿಗೆ ಹೆಚ್ಚಿಸಲಾಗಿದೆ. ಎಲ್ಲ ಬೆಳೆಗಳಿಗೆ ಯೋಗ್ಯ ಬೆಲೆ ಸಿಗುವಂತಾಗಲು ಬೆಲೆ ಸ್ಥಿರೀಕರಣ ನಿಧಿ ಸ್ಥಾಪಿಸಲು ಮಧ್ಯಪ್ರದೇಶ ಸರ್ಕಾರ ಉದ್ದೇಶಿಸಿದೆ.
ನರ್ಮದಾ ನದಿಯ ಅಚ್ಚುಕಟ್ಟು ಪ್ರದೇಶವಾದ ಮಾಲ್ವಾದಲ್ಲಿ ಮುಂಚೂಣಿ ಯೋಜನೆಯೊಂದನ್ನು ಮಧ್ಯಪ್ರದೇಶ ಸರ್ಕಾರ ಕೈಗೆತ್ತಿಕೊಂಡಿದ್ದು ಈಗಾಗಲೆ ನರ್ಮದಾವನ್ನು ಕ್ಷಿಪ್ರಾ ನದಿಯೊಂದಿಗೆ ಜೋಡಿಸಲಾಗಿದೆ. ಒಂದು ಲಕ್ಷ ಕಿ.ಮೀ.ಗೂ ಅಧಿಕ ಉದ್ದದ ಗ್ರಾಮೀಣ ರಸ್ತೆ ಸಂಪರ್ಕ ಜಾಲವನ್ನು ಅಭಿವೃದ್ಧಿಪಡಿಸಲಾಗಿದೆ. ಬೆಳೆ ವಿಮೆಗೆ ಒತ್ತುನೀಡಲಾಗಿದ್ದು ಹಿಂಗಾರು ಹಂಗಾಮಿಗೆ ಸಂಬಂಧಿಸಿ 4,060 ಕೋಟಿ ರೂ. ಹಾಗೂ ಮುಂಗಾರು ಹಂಗಾಮಿಗೆ ಸಂಬಂಧಿಸಿ 4,416 ಕೋಟಿ ರೂ. ಪರಿಹಾರ ಬೇಡಿಕೆ ಸ್ವೀಕರಿಸಲಾಗಿದೆ.
ಮಧ್ಯಪ್ರದೇಶದ ಸದ್ಯದ ಸಮಸ್ಯೆ ವಿವಿಧ ಬೆಳೆಗಳ ಉತ್ಪಾದನೆಯಲ್ಲಿ ಆಗಿರುವ ಹೆಚ್ಚಳದಿಂದಾಗಿ ತಲೆದೋರಿದೆ. ಬೇಳೆಕಾಳುಗಳು, ಈರುಳ್ಳಿ ಹಾಗೂ ಸೋಯಾಬೀನ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗಿದ್ದು ರೈತರಿಗೆ ಲಾಭದಾಯಕ ಬೆಲೆ ದೊರೆಯುತ್ತಿಲ್ಲ. ಸರ್ಕಾರ ಈ ಸಮಸ್ಯೆಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದು ಇದನ್ನು ಬಗೆಹರಿಸಲು ಪ್ರಯತ್ನಿಸುತ್ತಿದೆ. ರೈತರ ಸಂಘಟನೆಗಳು ಮುಂದಿಟ್ಟಿರುವ 13 ಬೇಡಿಕೆಗಳ ಪೈಕಿ 11 ಬೇಡಿಕೆಗಳ ಈಡೇರಿಕೆಗೆ ಮುಖ್ಯಮಂತ್ರಿ ಅವರು ಸಮ್ಮತಿಸಿದ್ದಾರೆ. ದುರದೃಷ್ಟವಶಾತ್ ಪ್ರತಿಪಕ್ಷಗಳು ರೈತರನ್ನು ಪ್ರಚೋದಿಸಲು ಪ್ರಯತ್ನಿಸುತ್ತಿವೆ, ಕೆಲ ಸಮಾಜಘಾತುಕ ಶಕ್ತಿಗಳು ಪರಿಸ್ಥಿಯ ದುರ್ಲಾಭ ಪಡೆಯಲು ಮುಂದಾಗುತ್ತಿವೆ. ಪರಿಸ್ಥಿತಿಯನ್ನು ತಿಳಿಗೊಳಿಸಲು ಸರ್ಕಾರದೊಂದಿಗೆ ಕೈಜೋಡಿಸುವ ಬದಲು ಪ್ರತಿಪಕ್ಷಗಳು ಬಂದ್‌ಕರೆನೀಡಿದ್ದು ಅತ್ಯಂತ ಬೇಜವಾಬ್ದಾರಿಯುತ, ಖಂಡನೀಯ ನಡೆ.
ಗೋಲಿಬಾರಿನಲ್ಲಿ ಮೃತಪಟ್ಟವರ ಕುಟುಂಬದವರಿಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಈಗಾಗಲೆ ತಲಾ ಒಂದು ಕೋಟಿ ರೂಪಾಯಿ ಪರಿಹಾರ ಹಾಗೂ ಪ್ರತಿ ಕುಟುಂಬದ ಅರ್ಹ ಸದಸ್ಯರೊಬ್ಬರಿಗೆ ಉದ್ಯೋಗ ನೀಡುವುದಾಗಿ ಪ್ರಕಟಿಸಿದ್ದಾರೆ. ರೈತರು ಸ್ವಹಿತಾಸಕ್ತಿ ಹೊಂದಿರುವ ರಾಜಕಾರಣಿಗಳ ಮಾತಿಗೆ ಕಿವಿಗೊಡದಂತೆ ನಾನು ಮನವಿ ಮಾಡುತ್ತೇನೆ. ದೇಶ ಅತ್ಯಂತ ರೈತಸ್ನೇಹಿ ಪ್ರಧಾನಮಂತ್ರಿಯ ಕೈಯಲ್ಲಿದೆ ಹಾಗೂ ಮಧ್ಯಪ್ರದೇಶ ಅತ್ಯಂತ ರೈತಸ್ನೇಹಿ ಮುಖ್ಯಮಂತ್ರಿಯನ್ನು ಹೊಂದಿದೆ ಎಂಬುದನ್ನು ಮನಗಾಣಬೇಕಿದೆ. ರೈತರು ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ದೀರ್ಘಾವಧಿಯ ಪರಿಹಾರ ಕಂಡುಕೊಳ್ಳಬೇಕಿದ್ದರೆ ಕೇಂದ್ರ ಮತ್ತು ಎಲ್ಲ ರಾಜ್ಯಗಳು ಸತತವಾಗಿ, ಸಂಯೋಜಿತ ರೀತಿಯಲ್ಲಿ ಪ್ರಯತ್ನಿಸಬೇಕಿದೆ.
ಅನೇಕ ದಶಕಗಳ ಕಾಲ ಕೃಷಿರಂಗವನ್ನು ಕಡೆಗಣಿಸಿದ್ದರಿಂದಾಗಿ ಆ ವಲಯದಲ್ಲಿನ ಸಮಸ್ಯೆಗಳು ಉಲ್ಬಣಿಸಿದ್ದು, ಅವು ದಿನಬೆಳಗಾಗುವಷ್ಟರಲ್ಲಿ ಬಗೆಹರಿಯಬೇಕೆಂದು ಅಪೇಕ್ಷಿಸುವುದು ಸೂಕ್ತವೆನಿಸದು. ಆದರೆ ಎನ್‌ಡಿಎ ಸರ್ಕಾರ ಎಲ್ಲ ಸಮಸ್ಯೆಗಳನ್ನು ಆಮೂಲಾಗ್ರವಾಗಿ ಬಗೆಹರಿಸಲು ಎಲ್ಲ ರೀತಿಯಲ್ಲಿ ಪ್ರಯತ್ನಿಸುತ್ತಿದ್ದು ಹೆಚ್ಚು ಗೋದಾಮುಗಳ ನಿರ್ಮಾಣ, ಶೀತಾಗಾರ ಸರಪಳಿ, ಶೀತಲ ವ್ಯಾನುಗಳು, ಆಹಾರ ಸಂಸ್ಕರಣೆ ಘಟಕಗಳ ಮೂಲಕ ಮೌಲ್ಯವರ್ಧನೆ, ಸಾರ್ವತ್ರಿಕ ಬೆಳೆ ವಿಮೆ, ಅಡೆತಡೆಯಿಲ್ಲದ ವಿದ್ಯುತ್ ಪೂರೈಕೆ, ಸಕಾಲದಲ್ಲಿ ಸುಲಭ ಬಡ್ಡಿದರದಲ್ಲಿ ಸಾಲ, ಮಾರುಕಟ್ಟೆ ಮಾಹಿತಿಯ ಲಭ್ಯತೆ ಮುಂತಾದವುಗಳಿಗೆ ಒತ್ತುನೀಡಿದೆ. ರೈತರ ಸ್ಥಿತಿಗತಿ ಸುಧಾರಣೆಯ ಜತೆಗೆ ಮುಂಬರುವ ವರ್ಷಗಳಲ್ಲಿ ಅವರ ಆದಾಯ ದುಪ್ಪಟ್ಟು ಮಾಡಲು ಪ್ರಧಾನಮಂತ್ರಿ ದೃಢಸಂಕಲ್ಪ ಮಾಡಿದ್ದಾರೆ.
– ಎಂ. ವೆಂಕಯ್ಯ ನಾಯ್ಡು ; ಕೇಂದ್ರ ವಾರ್ತಾ- ಪ್ರಸಾರ ಸಚಿವರು