Advertisement

ವಿದ್ಯಾರ್ಥಿಗಳನ್ನು ಗ್ಯಾಜೆಟ್‌ ದಾಸರಾಗಲು ಬಿಡಬೇಡಿ

12:44 AM Jan 28, 2023 | Team Udayavani |

ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತೀ ವರ್ಷ ನಡೆಸುತ್ತ ಬಂದಿರುವ “ಪರೀಕ್ಷಾ ಪೇ ಚರ್ಚಾ’ ಸರಣಿಯ ಆರನೇ ಆವೃತ್ತಿ ಶುಕ್ರವಾರ ನಡೆಯಿತು. ಈ ಬಾರಿ ವಿದ್ಯಾರ್ಥಿಗಳ ಜತೆಗಿನ ಸಂವಾದದ ವೇಳೆ ಪ್ರಧಾನಿ ಮೋದಿ ಅವರು ವಿದ್ಯಾರ್ಥಿಗಳು ಮತ್ತು ಯುವಸಮುದಾಯವನ್ನು ಕಾಡುತ್ತಿರುವ ಡಿಜಿಟಲ್‌ ಸಾಧನಗಳ ಬಳಕೆಯ ಗೀಳಿನ ಕುರಿತಂತೆ ಎಚ್ಚರಿಕೆಯ ಮಾತುಗಳನ್ನಾಡುವ ಮೂಲಕ ಇಂದಿನ ವಸ್ತುಸ್ಥಿತಿಗೆ ಕನ್ನಡಿ ಹಿಡಿದರು.

Advertisement

ಮೊಬೈಲ್‌, ಡಿಜಿಟಲ್‌ ಸಾಧನಗಳು ಮತ್ತು ಗ್ಯಾಜೆಟ್‌ಗಳ ಬಳಕೆಯ ಕುರಿತಂತೆ ವಿದ್ಯಾರ್ಥಿಯೋರ್ವರ ಪ್ರಶ್ನೆಗೆ ಮುಕ್ತವಾಗಿ ಉತ್ತರಿಸಿದ ಅವರು, ಇವೆಲ್ಲದರ ಅತಿಯಾದ ಅವಲಂಬನೆ ಸರಿಯಲ್ಲ. ಹಾಗೆಂದು ಇವುಗಳಿಂದ ದೂರವಿರಿ ಎಂದು ಹೇಳಲಾರೆ. ಆದರೆ ದಿನದ ಬಹುತೇಕ ಸಮಯವನ್ನು ಇವುಗಳ ಬಳಕೆಯಲ್ಲಿಯೇ ಕಳೆದರೆ ವಿದ್ಯಾರ್ಥಿಗಳು ಗ್ಯಾಜೆಟ್‌ ದಾಸರಾಗುವ ಅಪಾಯವಿದೆ. ಇದು ನೈಜ ಕೆಲಸ-ಕಾರ್ಯಗಳಿಂದ ದೂರವುಳಿಯುವಂತೆ ಮಾಡಿ ಅವರೇ ಗ್ಯಾಜೆಟ್‌ಗಳಾಗಿ ಬಿಡುವ ಸಾಧ್ಯತೆ ಇದೆ. ಅದರಲ್ಲೂ ಈಗ ಪರೀಕ್ಷಾ ಸಮಯವಾಗಿರುವುದರಿಂದ ಮೊದಲ ಆದ್ಯತೆ ಏನಿದ್ದರೂ ಓದು ಮತ್ತು ಅಧ್ಯಯನವೇ ಆಗಿರಬೇಕು. ದಿನದ ಅತ್ಯಂತ ಕನಿಷ್ಠ ಸಮಯವನ್ನು ಮೊಬೈಲ್‌ ಅಥವಾ ಇನ್ನಿತರ ಡಿಜಿಟಲ್‌ ಸಾಧನಗಳಿಗೆ ಮೀಸಲಿಡಬೇಕು. ವಾರದಲ್ಲಿ ಒಂದು ದಿನ ಇವುಗಳ ಬಳಕೆಗೆ ವಿರಾಮ ನೀಡಿದರೆ ಮನೆಯವರೊಂದಿಗೆ, ಕುಟುಂಬ ಸದಸ್ಯರೊಂದಿಗೆ ಹೆಚ್ಚಿನ ಸಮಯ ಕಳೆಯಲು ಅನುಕೂಲವಾಗಲಿದೆ ಎನ್ನುವ ಮೂಲಕ ಪ್ರಧಾನಿ ಅವರು ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿ, ಯುವಸಮೂಹವನ್ನು ತನ್ನ ಕಬಂಧಬಾಹುಗಳಿಂದ ಹಿಡಿದಿಟ್ಟಿರುವ ಡಿಜಿಟಲ್‌ ಸಾಧನಗಳಿಂದ ಹೇಗೆ ಮುಕ್ತಿ ಪಡೆಯಬಹುದು ಎಂಬ ಬಗ್ಗೆ ಪರಿಹಾರೋಪಾಯವನ್ನು ಹೇಳಿದರು.

ವಿದ್ಯಾರ್ಥಿಗಳು ತಮ್ಮೆಲ್ಲ ಬುದ್ಧಿವಂತಿಕೆಯನ್ನು ಓದಿನತ್ತ ಕೇಂದ್ರೀಕರಿಸಬೇಕು. ವಿದ್ಯಾ ರ್ಥಿಗಳು ತಮ್ಮ “ಸ್ಮಾರ್ಟ್‌ನೆಸ್‌’ ಅನ್ನು “ಸ್ಮಾರ್ಟ್‌ಪೋನ್‌’ ಬಳಕೆ ಅಥವಾ ಪರೀಕ್ಷೆ ಯಲ್ಲಿ ಅಕ್ರಮಗಳನ್ನು ಎಸಗಲು ಬಳಸದೆ ಅಧ್ಯಯನವನ್ನು ಎಷ್ಟು ಸಮರ್ಪ ಕವಾಗಿ ಮತ್ತು ಫ‌ಲಪ್ರದವನ್ನಾಗಿಸಿಕೊಳ್ಳಲು ಸಾಧ್ಯ ಎಂಬುದನ್ನು ಕಂಡುಕೊಳ್ಳಲು ಬಳಸಬೇಕು. ವಿದ್ಯಾರ್ಥಿಗಳು ತಮ್ಮಲ್ಲಿನ ಸೃಜನಶೀಲತೆಯನ್ನು ಅಧ್ಯಯನಕ್ಕೆ ಬಳಸಿಕೊಂಡಲ್ಲಿ ಯಶಸ್ಸು ತನ್ನಿಂತಾನೆ ಲಭಿಸುತ್ತದೆ. ಜೀವನದಲ್ಲಿ ಒಳದಾರಿಗಿಂತ ನೇರ ದಾರಿಯೇ ಹೆಚ್ಚು ಸೂಕ್ತವಾದ ಆಯ್ಕೆಯಾಗಿರುತ್ತದೆ ಎನ್ನುವ ಮೂಲಕ ಅಕ್ರಮ ಮಾರ್ಗದಲ್ಲಿ ಪರೀಕ್ಷೆ ಬರೆಯಲು ಮುಂದಾಗುವ ವಿದ್ಯಾರ್ಥಿಗಳಿಗೆ ನೇರವಾಗಿ ಚಾಟಿ ಬೀಸಿದರು.

ವಿದ್ಯಾರ್ಥಿಗಳು ತಮ್ಮ ಅಮ್ಮಂದಿರ ದೈನಂದಿನ ಕೆಲಸಕಾರ್ಯಗಳತ್ತ ಒಂದಿಷ್ಟು ಗಮನ ಹರಿಸಿದರೆ ಅವರಿಗೆ ಪರೀಕ್ಷೆಯ ಸಂದರ್ಭದಲ್ಲಿ ಸಮಯ ನಿರ್ವಹಣೆ ದೊಡ್ಡ ಸಮಸ್ಯೆಯಾಗಲಾರದು ಎಂಬ ಪ್ರಧಾನಿಯವರ ಸಲಹೆ ವಿದ್ಯಾರ್ಥಿಗಳ ಮನಮುಟ್ಟುವಂತಿತ್ತು. ಪ್ರತಿಯೋರ್ವ ಹೆತ್ತವರಿಗೂ ತಮ್ಮ ಮಕ್ಕಳ ಭವಿಷ್ಯದ ಬಗೆಗೆ ಅಪಾರ ಆಕಾಂಕ್ಷೆ, ನಿರೀಕ್ಷೆಗಳಿರುವುದು ಸಹಜ. ಹಾಗೆಂದು ಅವುಗಳನ್ನು ಈಡೇರಿಸಿ ಕೊಳ್ಳುವ ಭರದಲ್ಲಿ ಮಕ್ಕಳ ಮೇಲೆ ತೀವ್ರ ತೆರನಾದ ಒತ್ತಡ ಹೇರುವುದು ಸರಿಯಲ್ಲ. ಇದು ಮಕ್ಕಳ ಓದು, ಅಧ್ಯಯನದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ ಎಂದು ಕಿವಿಮಾತು ಹೇಳುವ ಮೂಲಕ ವಿದ್ಯಾರ್ಥಿಗಳ ಯಶಸ್ಸಿನಲ್ಲಿ ಮಕ್ಕಳ ಹೆತ್ತವರು ಮತ್ತು ಪೋಷಕರ ಪಾತ್ರದ ಬಗೆಗೂ ಬೆಳಕು ಚೆಲ್ಲಿದರು.

ಒಟ್ಟಿನಲ್ಲಿ ಈ ಬಾರಿಯ ಪರೀಕ್ಷಾ ಪೇ ಚರ್ಚಾ ಆವೃತ್ತಿಯಲ್ಲಿ ಪ್ರಧಾನಿ ಮೋದಿ ಅವರು ಮಕ್ಕಳು ಮತ್ತು ಹೆತ್ತವರನ್ನು ಬಾಧಿಸುತ್ತಿರುವ ಸಮಸ್ಯೆಗಳ ಬಗೆಗೆ ಪ್ರಸ್ತಾವಿಸಿದ್ದೇ ಅಲ್ಲದೆ ಪ್ರತಿಯೊಂದಕ್ಕೂ ತಮ್ಮದೇ ಆದ ಧಾಟಿಯಲ್ಲಿ, ಸ್ವತಃ ತಮ್ಮನ್ನೇ, ಕ್ರಿಕೆಟ್‌, ಅಮ್ಮಂದಿರು… ಹೀಗೆ ಮಕ್ಕಳಿಗೆ ಹೆಚ್ಚು ಅತ್ಯಾಪ್ತ ಎನಿಸಿಕೊಳ್ಳುವ ಉದಾಹರಣೆಗಳನ್ನು ನೀಡುವ ಮೂಲಕ ಪರೀಕ್ಷೆಯನ್ನು ಎದುರಿಸಲು ಸಜ್ಜಾಗುವಂತೆ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next