ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ ಒಂದು ಹಂತವನ್ನು ಮೀರಿ ಮುಂದೆ ಹೋಗಿದೆ. ಬುಧವಾರ ಆರಂಭವಾದ ಸಂಸತ್ ಅಧಿವೇಶನದಲ್ಲೂ ಈ ವಿಚಾರವನ್ನು ಪ್ರಸ್ತಾವಿಸುವ ಮೂಲಕ ಮಹಾರಾಷ್ಟ್ರದ ರಾಜಕಾರಣಿಗಳು ಇದನ್ನು ರಾಷ್ಟ್ರೀಯ ವಿಷಯ ಎಂಬಂತೆ ಬಿಂಬಿಸಹೊರಟಿದ್ದಾರೆ. ಹಾಗೆ ನೋಡಿದರೆ ಇದು ಈ ಗಡಿ ವಿವಾದ ಎಂದೋ ಮುಗಿದುಹೋದ ವಿಚಾರ.
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಹೇಳಿರುವ ಮಹಾಜನ್ ವರದಿಯನ್ನು ಎಲ್ಲೆಡೆ ಒಪ್ಪಿಕೊಳ್ಳಲಾಗಿದೆ. ಇಷ್ಟಾದರೂ ಅಗತ್ಯ ಬಿದ್ದಾಗ ಮತ್ತೆ ಪ್ರಸ್ತಾವಿಸುವ ಮಹಾರಾಷ್ಟ್ರ ವಿನಾ ಕಾರಣ ಗೊಂದಲವನ್ನು ಸೃಷ್ಟಿಸುತ್ತಲೇ ಇರುವುದು ಖಂಡನೀಯ. ಬೆಳಗಾವಿ ಹೋರಾಟವನ್ನೇ ಅಲ್ಲಿನ ಮುಖ್ಯಮಂತ್ರಿ ಏಣಿಯಾಗಿ ಮಾಡಿಕೊಂಡಿದ್ದನ್ನು ಮರೆಯುವ ಹಾಗಿಲ್ಲ. ಈ ಬಾರಿಯಂತೂ ಯಾವುದೇ ಪ್ರಚೋದನೆ ಇಲ್ಲದೆ ಮಹಾರಾಷ್ಟ್ರ ಸರಕಾರ ಸುಪ್ರೀಂಗೆ ಅರ್ಜಿ ಸಲ್ಲಿಸಿ ಮತ್ತೆ ನ್ಯಾಯಾಂಗವನ್ನು ಎಳೆದುತರಲು ಮುಂದಾಗಿದೆ. ಅಷ್ಟೇ ಆಗಿದ್ದರೆ ಚಿಂತೆ ಇರಲಿಲ್ಲ. ಕಾನೂನು ಮಟ್ಟದಲ್ಲಿ ಹೋರಾಟಕ್ಕೆ ಕರ್ನಾಟಕವೂ ಸಜ್ಜಾಗಬಹುದಿತ್ತು. ಆದರೆ ಲಕ್ಷ್ಮಣ ರೇಖೆಯನ್ನು ದಾಟಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಮಹಾರಾಷ್ಟ್ರ, ಇಬ್ಬರು ಸಚಿವರನ್ನು ಬೆಳಗಾವಿಗೆ ಕಳುಹಿಸಲು ನಿರ್ಧರಿಸಿದ್ದು ಅತಿರೇಕವೇ. ತನ್ನ ವ್ಯಾಪ್ತಿಯಲ್ಲಿಲ್ಲದ ಪ್ರದೇಶಕ್ಕೆ ತನ್ನ ಸಚಿವರನ್ನು ಕಳುಹಿಸಿ ಅಲ್ಲಿ ಬೆಂಕಿ ಹಚ್ಚುವ ಪ್ರಯತ್ನಕ್ಕೆ ಕೈ ಹಾಕುವುದನ್ನು ಯಾವ ಒಕ್ಕೂಟ ವ್ಯವಸ್ಥೆಯಲ್ಲೂ ಸಹಿಸಿಕೊಳ್ಳುವಂಥದ್ದಲ್ಲ.
ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಅವರು ಕಠಿನ ನಿಲುವು ತೆಗೆದುಕೊಂಡು ಮಹಾರಾಷ್ಟ್ರ ಸಚಿವರ ಭೇಟಿಗೆ ಆಕ್ಷೇಪ ವ್ಯಕ್ತಪಡಿಸದೆ ಇದ್ದಿದ್ದರೆ ಉಭಯ ರಾಜ್ಯಗಳ ಗಡಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿತ್ತು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಈ ನಡುವೆ ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ ಅವರು, ಮಹಾರಾಷ್ಟ್ರ ನಾಗರಿಕರ ಮೇಲೆ ಕನ್ನಡಿಗರಿಂದ ಹಲ್ಲೆಯಾಗಿದೆ; ಕರ್ನಾಟಕ ಸಿಎಂ ಪ್ರಚೋದನೆ ಇದಕ್ಕೆಲ್ಲ ಕಾರಣ ಎಂಬರ್ಥದಲ್ಲಿ ಲೋಕಸಭೆಯಲ್ಲಿ ಮಾತನಾಡಿರುವುದು ಖಂಡನಾರ್ಹ. ಇನ್ನೊಂದೆಡೆ ಮಹಾರಾಷ್ಟ್ರ ಡಿಸಿಎಂ ಫಡ್ನವೀಸ್ ಅವರು ಕೇಂದ್ರ ಗೃಹ ಸಚಿವರ ಬಳಿ ತಮ್ಮ ಅಹವಾಲನ್ನು ಮುಂದಿರಿಸಿದ್ದಾರೆ. ಇದು ಉಭಯ ರಾಜ್ಯಗಳ ಗಡಿ ವಿಚಾರವನ್ನು ರಾಷ್ಟ್ರೀಯ ವಿಷಯವನ್ನಾಗಿ ಮಾಡುವ ಮೂಲಕ ಮತ್ತಷ್ಟು ದಿನ ಈ ವಿವಾದ ಹೊತ್ತಿ ಉರಿಯುವಂತೆ ಮಾಡುವ ಹುನ್ನಾರ ಮಹಾರಾಷ್ಟ್ರದ್ದಾಗಿದೆ. ಈ ವಿಚಾರದಲ್ಲಿ ಶಿವಕುಮಾರ್ ಉದಾಸಿ ಬಿಟ್ಟರೆ ರಾಜ್ಯದ ಬೇರಾವ ಸಂಸದರು ಮಾತನಾಡಿಲ್ಲ. ನಾಡು-ನುಡಿ ವಿಚಾರದಲ್ಲಿ ಸಂಸದರ ಮೌನ ಉತ್ತಮ ನಡೆ ಅಲ್ಲವೇ ಅಲ್ಲ.
ಗಡಿ ವಿಚಾರದಲ್ಲಿ ರಾಜಕೀಯ ಮಧ್ಯಪ್ರವೇಶ ಮಾಡುವುದನ್ನು ತತ್‌ಕ್ಷಣ ನಿಲ್ಲಿಸಬೇಕು. ಎರಡೂ ರಾಜ್ಯಗಳಲ್ಲೂ ಬಿಜೆಪಿ ಆಡಳಿತದಲ್ಲಿರುವುದ ರಿಂದ ಉಭಯ ರಾಜ್ಯಗಳ ನಡುವೆ ಸೌಹಾರ್ದತೆ ಮೂಡಿಸಲು ಅವಕಾಶ ಹೆಚ್ಚು. ಈ ಅವಕಾಶವನ್ನು ಬಳಸಿಕೊಂಡು ಕರ್ನಾಟಕ ತನ್ನ ನಿಲುವನ್ನು ಖಚಿತ ದನಿಯಲ್ಲಿ ಮಹಾರಾಷ್ಟ್ರಕ್ಕೆ ಮನವರಿಕೆ ಮಾಡಿಕೊಡಬೇಕು. ಒಂದೆಡೆ ಕಾನೂನು ಹೋರಾಟಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವುದರ ಜತೆಗೆ ಈ ವಿಚಾರವನ್ನು ಮತ್ತಷ್ಟು ಎಳೆಯದಂತೆ ಮಹಾರಾಷ್ಟ್ರಕ್ಕೆ ಪಕ್ಷದ ನಾಯಕತ್ವದ ಮೂಲಕವಾದರೂ ತಿಳಿ ಹೇಳಬೇಕಿರುವುದು ರಾಜ್ಯ ಬಿಜೆಪಿ ಹೊಣೆಗಾರಿಕೆಯೂ ಹೌದು. ಗಡಿ ವಿವಾದದಿಂದ ಜನರ ಬದುಕು ನಿರ್ವಹಣೆಗೆ ಅಡ್ಡಿಯಾಗದಂತೆ ನೋಡಿಕೊಳ್ಳುವುದು ಜವಾಬ್ದಾರಿಯಾಗಿದೆ.