ರೈತರು, ಕೃಷಿಕರಿಗೆ ಅತ್ಯಗತ್ಯವಾಗಿ ಬೇಕಾಗಿರುವ ಶೂನ್ಯ ಬಡ್ಡಿ, ರಿಯಾಯಿತಿ ಬಡ್ಡಿದರದ ಕೃಷಿ ಸಾಲಗಳನ್ನು ವಿತರಿಸಲು ಅಗತ್ಯವಾದ ಅನುದಾನವನ್ನು ನಬಾರ್ಡ್ ಈ ಬಾರಿ ಕಡಿಮೆ ಮಾಡಿರುವುದರಿಂದ ರಾಜ್ಯದ ಕೃಷಿಕರಿಗೆ ತೊಂದರೆಯಾಗಲಿದೆ. ಕೆಲವೆಡೆ ಕೃಷಿಕರಿಗೆ ಇದು ಈಗಾಗಲೇ ಅನುಭವಕ್ಕೆ ಬಂದಿದೆ. ರಾಜ್ಯದ ರೈತರ ಹಿತವನ್ನು ಕಾಯಲು ರಾಜ್ಯ ಸರಕಾರವು ಈ ವಿಷಯವನ್ನು ಕೇವಲ ರಾಜಕೀಯ ದೃಷ್ಟಿಯಿಂದ ಮಾತ್ರ ನೋಡದೆ ಅಗತ್ಯ ಅನುದಾನವನ್ನು ಪಡೆಯುವುದಕ್ಕಾಗಿ ಸೂಕ್ತ ಮಾರ್ಗೋಪಾಯಗಳ ಮೂಲಕ ಶ್ರಮಿಸಬೇಕಾಗಿದೆ.
ಕೃಷಿ ಎನ್ನುವುದು ವ್ಯಾಪಾರದಂತಲ್ಲ. ಎಲ್ಲ ಕೃಷಿಕರು ಮತ್ತು ರೈತರು ವಿವಿಧ ಕೃಷಿ ಕಾರ್ಯಗಳಿಗಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಸಹಕಾರಿ ಬ್ಯಾಂಕ್ಗಳು, ಇತರ ಬ್ಯಾಂಕ್ಗಳಿಂದ ಸಾಲ ಪಡೆಯಲೇ ಬೇಕಾಗುತ್ತದೆ. ಕೃಷಿ ವಿಸ್ತರಣೆ, ಬಿತ್ತನೆ ಬೀಜ, ರಸಗೊಬ್ಬರ ಖರೀದಿ, ಕೃಷಿಯಲ್ಲಿ ಕಾಲಕಾಲಕ್ಕೆ ಆಗಬೇಕಾದ ಕೆಲಸಾವಳಿಗಳಿಗಾಗಿ ಈ ಸಾಲದ ಮೊತ್ತ ಅಗತ್ಯ.
ಇಂತಹ ಸಂದರ್ಭದಲ್ಲಿ ಅವರಿಗೆ ಶೂನ್ಯ ಬಡ್ಡಿದರ, ರಿಯಾಯಿತಿ ಬಡ್ಡಿದರದ ಸಾಲ ನೆರವಾಗುತ್ತದೆ. ಪ್ರತೀ ವರ್ಷ ಈ ಸಾಲವನ್ನು ಬಹುತೇಕ ಕೃಷಿಕರು, ರೈತರು ನಿಗದಿತ ಅವಧಿಯೊಳಗೆ ಮರುಪಾವತಿಸಿ ಸಾಲವನ್ನು ನವೀಕರಣಗೊಳಿಸಿಕೊಳ್ಳುತ್ತಾರೆ. ಸಹಕಾರಿ ಸೊಸೈಟಿಗಳ ಅಸ್ತಿತ್ವದ ಮೂಲ ಸೆಲೆಗಳಲ್ಲಿ ಈ ಕೃಷಿ ಸಾಲ ವಿತರಣೆಯೂ ಒಂದಾಗಿದೆ. ಹೀಗಾಗಿ ರಾಜ್ಯದ ಕೋಟ್ಯಂತರ ರೈತರು, ಕೃಷಿಕರು ಈ ಕೃಷಿ ಸಾಲದ ಮೇಲೆ ಅವಲಂಬಿತರಾಗಿದ್ದಾರೆ.
ಈ ಸಾಲ ವಿತರಣೆಗೆ ಅಪೆಕ್ಸ್ ಬ್ಯಾಂಕ್ಗೆ ಅನುದಾನ ಒದಗಿಸುವುದು ನಬಾರ್ಡ್ ಅಥವಾ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್. ಹೆಸರೇ ಹೇಳುವಂತೆ ಈ ಕೇಂದ್ರ ಬ್ಯಾಂಕ್ನ ಉದ್ದೇಶವೇ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ ಅಗತ್ಯ ಹಣಕಾಸು ನೆರವನ್ನು ಒದಗಿಸಿಕೊಡುವುದು. ಈ ಬಾರಿ ರಾಜ್ಯಕ್ಕೆ ನಬಾರ್ಡ್ನಿಂದ ಒದಗಿರುವ ಅನುದಾನದಲ್ಲಿ ಕಡಿತವಾಗಿದೆ ಎಂಬುದು ಈಗಿರುವ ಮಾಹಿತಿ.
ಇದರಿಂದಾಗಿ ಶೂನ್ಯ ಬಡ್ಡಿದರ, ರಿಯಾಯಿತಿ ಬಡ್ಡಿದರದ ಸಾಲ ವಿತರಣೆಗೆ ಕಷ್ಟವಾಗಲಿದೆ ಎಂಬ ಕಳವಳ ಉಂಟಾಗಿದೆ. ಭಾನುವಾರವಷ್ಟೇ ರಾಜ್ಯ ಮಟ್ಟದ ಸಹಕಾರಿ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಷಯವನ್ನು ಪ್ರಸ್ತಾವಿಸಿದ್ದಾರೆ. ಕಳೆದ ವರ್ಷ ನಬಾರ್ಡ್ನಿಂದ 5,600 ಕೋಟಿ ರೂ. ಅನುದಾನ ಲಭಿಸಿದ್ದು, ಈ ಬಾರಿ ಕೇವಲ 2,340 ಕೋಟಿ ರೂ. ಮಾತ್ರ ಲಭ್ಯವಾಗಿದೆ.
ಇದರಿಂದ ಕೃಷಿ ಸಾಲ ವಿತರಣೆ ಮತ್ತಿತರ ಕಾರ್ಯಗಳಿಗೆ ತೊಡಕಾಗಲಿದೆ ಎಂದಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ಈಗಾಗಲೇ ಕರಾವಳಿಯ ಹಲವು ಕಡೆಗಳಲ್ಲಿ ಈ ಕೃಷಿ ಸಾಲ ವಿತರಣೆಯಲ್ಲಿ ತೊಂದರೆ ಎದುರಾಗಿದ್ದು, ಶೂನ್ಯ ಬಡ್ಡಿದರದ್ದು ಎಂದು ವಿತರಿಸಲಾದ ಕೃಷಿ ಸಾಲಕ್ಕೆ ಬಡ್ಡಿ ಕಟ್ಟುವಂತೆ ಕೃಷಿಕರಿಗೆ ಸಹಕಾರಿ ಸಂಘಗಳಿಂದ ಸೂಚನೆ ರವಾನೆಯಾಗಿದೆ. ಸಹಜವಾಗಿಯೇ ಕೃಷಿಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಈಗ ಆಗಬೇಕಾಗಿರುವುದು ನಬಾರ್ಡ್ನಿಂದ ಯಾಕೆ ಅನುದಾನ ಕೊರತೆ ಆಗಿದೆ ಎಂಬುದನ್ನು ಕಂಡುಕೊಂಡು ಅದನ್ನು ಬಗೆಹರಿಸಿ ಸೂಕ್ತ ಪ್ರಮಾಣದ ಮೊತ್ತವನ್ನು ದೊರಕಿಸಿಕೊಳ್ಳುವ ಕ್ರಮ. ಈ ವಿಷಯವನ್ನು ರಾಜಕೀಯ ದಾಳ ಮಾತ್ರವಾಗಿ ಬಳಸಿಕೊಳ್ಳದೆ ರಾಜ್ಯ ಮತ್ತು ಕೇಂದ್ರ ಸರಕಾರಗಳೆರಡೂ ರೈತರ ಹಿತವನ್ನು ಲಕ್ಷ್ಯದಲ್ಲಿ ಇರಿಸಿಕೊಂಡು ಅಗತ್ಯ ಪ್ರಮಾಣದ ಅನುದಾನವನ್ನು ಒದಗಿಸಿಕೊಡುವ ಕೆಲಸ ಮಾಡಬೇಕು. ಏಕೆಂದರೆ ಅಂತಿಮವಾಗಿ ಇದರಲ್ಲಿ ರೈತರು, ಕೃಷಿಕರ ಭವಿಷ್ಯದ ವಿಷಯ ಅಡಗಿದೆ.