ಕುಳಗೇರಿ ಕ್ರಾಸ್: ಕನ್ನಡಿಗರು ಮೊದಲು ಕನ್ನಡ ಭಾಷೆ ಪ್ರೀತಿಸಿ-ಗೌರವಿಸಬೇಕು. ಪ್ರತಿಷ್ಠೆಗಾಗಿ ಆಂಗ್ಲಭಾಷೆ ವ್ಯಾಮೋಹದಿಂದ ಮಾತೃ ಭಾಷೆ ಮರೆಯುತ್ತಿರುವುದು ದುರ್ದೈವದ ಸಂಗತಿ ಎಂದು ಧಾರವಾಡ ಹಿರಿಯ ಸಾಹಿತಿ ಡಾ| ಚಂದ್ರಮೌಳಿ ನಾಯ್ಕರ ಅಭಿಪ್ರಾಯಪಟ್ಟರು.
ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ನುಡಿ ವೈಭವ-2022 ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಸರ್ಕಾರ ವೈದ್ಯಕೀಯ, ಎಂಜಿನಿಯರಿಂಗ್‌ನಂತಹ ಹಲವಾರು ವೃತ್ತಿಪರ ಶಿಕ್ಷಣ ಕನ್ನಡ ಭಾಷೆಯಲ್ಲಿಯೇ ನೀಡುವ ಇಂಗಿತ ವ್ಯಕ್ತಪಡಿಸಿದ್ದು ಸಂತಸದ ಸಂಗತಿ. ಕನ್ನಡ ಬರೀ ಭಾಷೆಯಲ್ಲ, ಅದು ಬಹುದೊಡ್ಡ ಶಕ್ತಿ. ಮಹಾರಾಷ್ಟ್ರದವರು ಅನುಸರಿಸುತ್ತಿರುವ ಕುಹಕ ಬುದ್ಧಿಗೆ ಕನ್ನಡಿಗರೆಲ್ಲರೂ ಜಾತಿ-ಮತ-ಪಂಥ ಬಿಟ್ಟು ಒಂದಾಗಿ ಕರ್ನಾಟಕದ ಗಡಿಯನ್ನು ಸೈನಿಕರಂತೆ ಕಾಯಬೇಕಿದೆ ಎಂದು ಹೇಳಿದರು.
ಶಾಂತಲಿಂಗ ಶ್ರೀಗಳು ಸಾನ್ನಿಧ್ಯವಹಿಸಿ ಮಾತನಾಡಿ, ಮಾತೃಭಾಷೆಯಲ್ಲಿ ಶಿಕ್ಷಣ ನೀಡಿದರೆ ಪರಿಣಾಮಕಾರಿಯಾಗಿ ಅಧ್ಯಯನ ಮಾಡಲು ಸಾಧ್ಯ. ಜೊತೆಗೆ ಮಾನವೀಯ ಮೌಲ್ಯ ಕಲಿಯಲು ಸಾಧ್ಯವಾಗುತ್ತದೆ. ಮಾತೃ ಭಾಷೆಯಲ್ಲಿ ಶಿಕ್ಷಣ ಕೊಡಿಸದಿದ್ದರೆ ಯಾವ ಮಗುವೂ ಜೀವನದಲ್ಲಿ ಪರಿಪೂರ್ಣನಾಗಲು ಸಾಧ್ಯವಿಲ್ಲ ಎಂದರು.
ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾದ ದಾನಯ್ಯ ಗಣಾಚಾರಿ ಹಾಗೂ ನರೇಗಲ್ಲಿನ ದತ್ತಾತ್ರೇಯ ಕುಲಕರ್ಣಿ ಅವರನ್ನು ಮಠದಿಂದ ಸತ್ಕರಿಸಲಾಯಿತು. ಗದುಗಿನ ದಿನಪತ್ರಿಕೆ ಹಂಚಿಕೆದಾರ ಪ್ರಭುಶಂಕರ ತಡಸದ ಮಠದ ಗ್ರಂಥಾಲಯಕ್ಕೆ ಪುಸ್ತಕಗಳನ್ನು ದೇಣಿಗೆ ನೀಡಿದರು.
ಚೆನ್ನಬಸಪ್ಪ ಕಂಠಿ ಪ್ರಾಸ್ತಾವಿಕ ಮಾತನಾಡಿದರು. ಕುಡುಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಶಿವಕುಮಾರಗೌಡ ಪಾಟೀಲ, ಜಿ.ಕೆ. ಭದ್ರಗೌಡ್ರ, ದತ್ತಾತ್ರೇಯ ಕುಲಕರ್ಣಿ, ದಾನಯ್ಯ ಗಣಾಚಾರಿ ಮಾತನಾಡಿದರು.
ಈ ವೇಳೆ ಉಪನ್ಯಾಸಕ ಪ್ರೊ| ಪಿ.ಎಸ್. ಅಣ್ಣಿಗೇರಿ, ಪ್ರೊ| ಆರ್ .ಬಿ. ಪಾಟೀಲ, ಶಂಕ್ರಗೌಡ ಪಾಟೀಲ, ಸೋಮು ಹೊಂಗಲ್, ಶಂಕ್ರಗೌಡ ಶಿರಿಯಪ್ಪಗೌಡ್ರ, ಶಿವಪ್ಪ ಬೋಳಶೆಟ್ಟಿ, ಪ್ರೊ| ಎಂ.ಪಿ. ಖ್ಯಾತನಗೌಡ್ರ, ಉಪನ್ಯಾಸಕಿ ಪವಿತ್ರಾ ಎಸ್, ಅಶೋಕ ಬಂಡೆಪ್ಪನವರ ಇತರರಿದ್ದರು. ಪ್ರೊ| ಆರ್.ಬಿ. ಚಿನಿವಾಲರ ನಿರೂಪಿಸಿದರು. ಪ್ರೊ| ಆರ್.ಕೆ. ಐನಾಪೂರ ಸ್ವಾಗತಿಸಿದರು. ಮಹಾಂತೇಶ ಹಿರೇಮಠ ವಂದಿಸಿದರು.