Advertisement

‘ಶಿರಾಡಿ ಜತೆಗೇ ಬಿಸಿಲೆ ಘಾಟಿ ಬಂದ್‌ ಬೇಡ’

11:17 AM Feb 04, 2018 | Team Udayavani |

ಸುಬ್ರಹ್ಮಣ್ಯ: ದುರಸ್ತಿಗಾಗಿ ಏಕಕಾಲದಲ್ಲಿ ಶಿರಾಡಿ ಘಾಟಿ ಮತ್ತು ಬಿಸಿಲೆ ಘಾಟಿ ಎರಡೂ ಸಂಪರ್ಕ ರಸ್ತೆ ಬಂದ್‌ ಮಾಡುವ ಹಾಸನ ಜಿಲ್ಲಾಡಳಿತದ ನಿರ್ಧಾರ ಹಾಗೂ ಈ ವಿಚಾರದಲ್ಲಿ ಎರಡು ಜಿಲ್ಲೆಗಳ ಜನಪ್ರತಿನಿಧಿಗಳ ಮೌನದ ವಿರುದ್ಧ ಮಲೆನಾಡು ಜನಹಿತ ರಕ್ಷಣ ವೇದಿಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

Advertisement

ರಾಷ್ಟ್ರೀಯ ಹೆದ್ದಾರಿ ಶಿರಾಟಿ ಘಾಟಿ ದುರಸ್ತಿ ಕಾಮಗಾರಿಗಾಗಿ ಈಗಾಗಲೇ ಬಂದ್‌ ಆಗಿದೆ. ಇದೇ ಅವಧಿಯಲ್ಲಿ ಜಿಲ್ಲೆಗೆ ಅದರಲ್ಲೂ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಂಪರ್ಕ ಸಾಧಿಸುವ ಪರ್ಯಾಯ ರಸ್ತೆ ಬಿಸಿಲೆ ಘಾಟಿ – ಸುಬ್ರಹ್ಮಣ್ಯ ರಸ್ತೆಯ ಕಾಮಗಾರಿ ಕೈಗೆತ್ತಿಕೊಂಡು ಫೆ. 15ರಿಂದ ಬಂದ್‌ ಮಾಡುವ ಕುರಿತು ಹಾಸನ ಜಿಲ್ಲಾಡಳಿತ ನಿರ್ಧರಿಸಿರುವ ಮಾಹಿತಿ ಇದೆ. ಈ ನಿರ್ಧಾರವನ್ನು ಖಂಡಿಸುವುದಾಗಿ ಮಲೆನಾಡು ಜನಹಿತ ರಕ್ಷಣ ವೇದಿಕೆ ಸಂಚಾಲಕ ಕಿಶೋರು ಶಿರಾಡಿ ತಿಳಿಸಿದ್ದಾರೆ.

ಬಿಸಿಲೆ ಘಾಟಿ ರಸ್ತೆ ಕಾಮಗಾರಿ ನಡೆಸಲು ಫೆ. 15ರಿಂದ ಬಂದ್‌ ಮಾಡುವ ನಿರ್ಧಾರದ ಸುಳಿವು ಅರಿತ ಮಲೆನಾಡು ರೈತ ಹಿತರಕ್ಷಣ ವೇದಿಕೆ ಸದಸ್ಯರು ಶುಕ್ರವಾರ ಬಿಸಿಲೆ ಘಾಟಿ ಚಲೋ ಕಾರ್ಯಕ್ರಮ ನಡೆಸಿದ್ದರು. ಬಿಸಿಲೆ ಘಾಟಿ ರಸ್ತೆಯಲ್ಲಿ ಪ್ರಯಾಣ ಬೆಳೆಸಿ ಹಾಸನ ವಿಭಾಗದ ಯಸಳೂರು ಚೆಕ್‌ಪೋಸ್ಟ್‌ ತನಕ ತೆರಳಿ ಈ ರಸ್ತೆಯ ವಾಸ್ತವ ಸ್ಥಿತಿಯ ಅಧ್ಯಯನ ನಡೆಸಿದರು.

ಯಸಳೂರು ಗೇಟ್‌ ಬಳಿ ದಿಢೀರ್‌ ಪ್ರತಿಭಟನೆ ನಡೆಸಿದ ವೇದಿಕೆ ಸದಸ್ಯರು ಈ ರಸ್ತೆಯಲ್ಲಿ ಲಘುವಾಹನ ಜತೆ ಘನವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುವುದಕ್ಕೆ ಚೆಕ್‌ಪೋಸ್ಟ್‌ ಸಿಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಲಘು ವಾಹನ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸುವಂತೆ ತಾಕೀತು ಮಾಡಿದರು. 

ಶಿರಾಡಿ ಘಾಟಿ ಬಂದ್‌ ಬಳಿಕ ಬೆಂಗಳೂರು, ಹಾಸನ, ಬಿಸಿಲೆ ಇತ್ಯಾದಿ ಕಡೆಗಳಿಂದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ, ಕುಕ್ಕೆ ಸುಬ್ರಹ್ಮಣ್ಯದ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ನಡೆಸುವವರಿಗೆ, ಬಿಸಿಲೆ ಘಾಟಿ ಪರಿಸರದ 80ಕ್ಕೂ ಅಧಿಕ ಕುಟುಂಬಗಳಿಗೆ ಈ ರಸ್ತೆ ಸಂಪರ್ಕ ಉಪಯುಕ್ತವಾಗಿದೆ. ಇದನ್ನು ಬಂದ್‌ ಮಾಡಿದಲ್ಲಿ ಸಮಸ್ಯೆಯಾಗಲಿದೆ. ಹೀಗಾಗಿ ಶಿರಾಡಿ ಘಾಟಿ ರಸ್ತೆ ಸಂಪರ್ಕಕ್ಕೆ ಮುಕ್ತವಾದ ಬಳಿಕವೇ ಈ ರಸ್ತೆ ಅಭಿವೃದ್ಧಿಗೊಳಿಸಬೇಕು. ಕಾಮಗಾರಿ ಕೈಗೆತ್ತಿಕೊಂಡರೂ ರಸ್ತೆ ಬಂದ್‌ ಮಾಡಬಾರದು ಎಂಬ ಆಗ್ರಹವನ್ನು ವೇದಿಕೆ ಮಾಡಿದೆ.

Advertisement

ಬಿಸಿಲೆ ಘಾಟಿಯ 8 ಕಿ.ಮೀ. ರಸ್ತೆ ಕಾಮಗಾರಿ ಬಾಕಿ ಉಳಿದಿದೆ. ಈ ಭಾಗದ 6 ಕಿ.ಮೀ. ಕಾಮಗಾರಿ ನಡೆಸಲು ಆದೇಶ ದೊರಕಿದೆ. ಆದುದರಿಂದ ಬಿಸಿಲೆಯಿಂದ 2 ಕಿ.ಮೀ. ಡಾಮರು ರಸ್ತೆ ನಿರ್ಮಿಸಲಾಗುವುದು. ಮುಂದೆ 4 ಕಿ.ಮೀ. ಕಾಂಕ್ರಿಟ್‌ ರಸ್ತೆ ಆಗಲಿದೆ. ರಸ್ತೆಯ ಕಾಮಗಾರಿಯನ್ನು ಶೀಘ್ರ ಆರಂಭಿಸಬೇಕಾಗಿರುವುದರಿಂದ ಬಿಸಿಲೆ ಘಾಟಿ ರಸ್ತೆಯನ್ನು ಫೆ. 15ರಿಂದ ಬಂದ್‌ ಮಾಡಲಾಗುತ್ತದೆ. ಕಳೆದ ವರ್ಷ ಬೇಗ ಮಳೆ ಬಂದು ಕಾಮಗಾರಿ ನಡೆಸಲಾಗಿಲ್ಲ. ಈ ಬಾರಿ ಕಾಮಗಾರಿ ಉದ್ದೇಶಕ್ಕೆ ರಸ್ತೆ ಬಂದ್‌ ಮಾಡಬೇಕಾಗುತ್ತದೆ ಎಂದು ಸ್ಥಳದಲ್ಲಿದ್ದ ಲೋಕೋಪಯೋಗಿ ಇಲಾಖೆಯ ಸುಪರ್‌ ವೈಸರ್‌ ಶಂಭು ಮಾಹಿತಿ ನೀಡಿದರು.

ಭೇಟಿ ವೇಳೆ ಮಲೆನಾಡು ಜನಹಿತ ರಕ್ಷಣ ವೇದಿಕೆಯ ಚಿದಾನಂದ ಕಂದಡ್ಕ, ದಾಮೋದರ ಗುಂಡ್ಯ, ಮಧುಸೂದನ್‌, ಮೋನಪ್ಪ ಮಾನಾಡು, ದಿನೇಶ್‌ ಸಂಪ್ಯಾಡಿ, ಜಯಪ್ರಕಾಶ್‌ ಕೂಜುಗೋಡು, ಗ್ರಾ.ಪಂ. ಸದಸ್ಯ ಪ್ರಶಾಂತ್‌ ಭಟ್‌ ಮಾಣಿಲ, ಕುಮಾರ್‌ ನಾಯರ್‌ ಮತ್ತು ಜಯಪ್ರಕಾಶ್‌ ಅಗೋಳಿಕಜೆ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next