ದುಬಾೖ/ಕರಾಚಿ: ವಿಶ್ವಕಪ್ ಇತಿಹಾಸದಲ್ಲಿ ಮೊದಲ ಸಲ ಭಾರತವನ್ನು ಸೋಲಿಸಿದ ಬಳಿಕ ಪಾಕಿಸ್ಥಾನದೆಲ್ಲೆಡೆ ವಿಪರೀತ ಸಂಭ್ರಮ ಮನೆಮಾಡಿದೆ.
ಕರಾಚಿ, ಲಾಹೋರ್ ಮೊದಲಾದ ಪ್ರಮುಖ ನಗರಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ಗೆಲುವಿನ ಮೆರವಣಿಗೆ ಮಾಡಿದ್ದಾರೆ. ಮಾಧ್ಯಮಗಳು ಬಾಬರ್ ಪಡೆಯ ಸಾಹಸವನ್ನು ಕೊಂಡಾಡಿವೆ.
ಪ್ರಧಾನಿ ಹಾಗೂ ಮಾಜಿ ನಾಯಕ ಇಮ್ರಾನ್ ಖಾನ್ ಸೇರಿದಂತೆ ಪಾಕಿಸ್ಥಾನದ ಮಾಜಿ ಕ್ರಿಕೆಟಿಗರು ತಂಡವನ್ನು ಅಭಿನಂದಿಸಿದ್ದಾರೆ. ಆದರೆ ನಾಯಕ ಬಾಬರ್ ಆಜಂ ಮಾತ್ರ ಸಂಭ್ರಮದ ಅತಿರೇಕ ಬೇಡ ಎಂದು ತಂಡವನ್ನು ಎಚ್ಚರಿಸಿದ್ದಾರೆ.
“ಸಂಭ್ರಮಿಸೋಣ. ಹೊಟೇಲಿಗೆ ಮರಳಿ ತಮ್ಮ ಕುಟುಂಬದವರೊಂದಿಗೆ ಈ ಕ್ಷಣವನ್ನು ಸವಿಯೋಣ. ಆದರೆ ಸಂಭ್ರಮದ ಅತಿರೇಕ ಬೇಡ. ಆದರೆ ನೆನಪಿಡಿ, ಇದು ಆರಂಭ ಮಾತ್ರ. ಇಲ್ಲಿಗೆ ಎಲ್ಲವೂ ಮುಗಿದಿಲ್ಲ. ಮುಂದಿನ ಪಂದ್ಯಗಳಿಗೆ ನಾವು ಸೂಕ್ತ ತಯಾರಿ ಮಾಡಿಕೊಳ್ಳಬೇಕಿದೆ’ ಎಂದು ಬಾಬರ್ ಹೇಳಿದ್ದಾರೆ. ಇದರ ವೀಡಿಯೋವನ್ನು ಪಿಸಿಬಿ ಬಿಡುಗಡೆ ಮಾಡಿದೆ.
ಇದನ್ನೂ ಓದಿ:ಟಿ20 ವಿಶ್ವಕಪ್: ಅಫ್ಘಾನ್‌ಗೆ ಭರ್ಜರಿ ಗೆಲುವು
“ನಾವಿಲ್ಲಿ ಕೇವಲ ಭಾರತದ ವಿರುದ್ಧ ಗೆಲ್ಲುವುದಕ್ಕಷ್ಟೇ ಬಂದವರಲ್ಲ. ನೆನಪಿಡಿ, ನಮ್ಮ ಗುರಿ ವಿಶ್ವಕಪ್. ಇಂಥದೇ ಶಿಸ್ತಿನ ಆಟವನ್ನು ನಾವು ಮುಂದುವರಿಸಬೇಕಿದೆ’ ಎಂದು ಬಾಬರ್ ಹೇಳಿದರು.
ಪಾಕ್ ಕ್ರಿಕೆಟಿಗರು ಎಲ್ಲೂ ಗೆಲುವಿನ ಉನ್ಮಾದವಾಗಲಿ, ಅತಿರೇಕವಾಗಲಿ ತೋರಲಿಲ್ಲ ಎಂಬುದು ವಿಶೇಷ.