Advertisement

ರೈತ ವಿರೋಧಿ ನೀತಿ ರೂಪಿಸಿ ರೊಚ್ಚಿಗೇಳಿಸಬೇಡಿ; ಕುರುಬೂರು

06:15 PM May 20, 2022 | Team Udayavani |

ತಿ.ನರಸೀಪುರ: ಯಾವುದೇ ಚರ್ಚೆ ಇಲ್ಲದೇ ತಮ್ಮ ವೇತನ, ಸಾರಿಗೆ ಭತ್ಯೆ ಹೆಚ್ಚಿಸಿಕೊಳ್ಳುವ ಶಾಸಕರಿಗೆ, ರೈತರ ಬೆಳೆಗಳಿಗೆ ಬೆಲೆ ಹೆಚ್ಚಿಸುವ ಆಸಕ್ತಿ ಇಲ್ಲ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ಆರೋಪಿಸಿದರು.

Advertisement

ತಾಲೂಕಿನ ಮೂಗೂರು ಹೋಬಳಿ ವಾಟಾಳು ಪುರ ಗ್ರಾಮದಲ್ಲಿ ಗ್ರಾಮ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ರೈತ ಬೆಳೆದ ಭತ್ತ, ಕಬ್ಬು ಇನ್ನಿತರ ಬೆಳೆಗಳಿಗೆ ಭಿಕ್ಷೆ ರೂಪದಲ್ಲಿ ದರ ಏರಿಸುವ ಸರ್ಕಾರ, ಜನಪ್ರತಿನಿಧಿಗಳ ವೇತನ ಮಾತ್ರ ಮನಸೋಇಚ್ಛೆ ಹೆಚ್ಚಿಸುತ್ತದೆ. ಜನಪ್ರತಿನಿಧಿಗಳಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಹೇಳಿದರು.

ಸರ್ಕಾರ ಮನಗಾಣಲಿ: ರೈತ ವಿರೋಧಿ ನೀತಿ ರೂಪಿಸುವ ಸರ್ಕಾರ, ರೈತರನ್ನು ಉಳಿಸುವ ಬದಲು ಸಮಾಧಿ ತೋಡುತ್ತಿದೆ. ಇಂತಹ ಕಾರ್ಯದಿಂದಲೇ ನೆರೆಯ ಶ್ರೀಲಂಕಾದಲ್ಲಿ ಜನರು ದಂಗೆ ಎದ್ದು ಪ್ರಧಾನಿ ಮನೆಗೆ ಬೆಂಕಿ ಹಚ್ಚಿದ್ದಾರೆ. ಜನರನ್ನು ರೊಚ್ಚಿ ಗೇಳಿಸುವ ಕಾರ್ಯ ಮಾಡಬಾರದು ಎಂಬುದನ್ನು ಸರ್ಕಾರ ಮನಗಾಣಬೇಕು ಎಂದು ತಿಳಿಸಿದರು.

ರೈತರ ಉತ್ಪಾದನಾ ವೆಚ್ಚ ಏರಿಕೆ:
ಸೂರ್ಯಕಾಂತಿ ಬಿತ್ತನೆ ಬೀಜದ ಬೆಲೆ 1100 ರಿಂದ 2,300ಕ್ಕೇರಿದರೆ, ರಸಗೊಬ್ಬರ ಬೆಲೆ 850 ರಿಂದ 1,700ಕ್ಕೆ ಸೇರಿ ಇಂಧನ, ಅಡುಗೆ ಅನಿಲ, ಕೀಟನಾಶಕ ವಸ್ತುಗಳ ಬೆಲೆ ಹೆಚ್ಚಾಗಿದೆ. ರೈತರಿಗೆ ಉತ್ಪಾದನಾ ವೆಚ್ಚ ಏರಿಕೆಯಾಗಿ ಉತ್ಪನ್ನದ ಬೆಲೆ ಮಾತ್ರ ಕುಸಿಯುತ್ತಿದೆ ಎಂದು ವಿಷಾದಿಸಿದರು.

ಆಹಾರ ಪೂರೈಸುವ ಶಕ್ತಿ ಇದೆ: ಅಮೆರಿಕಾದ ಗೋಧಿಗೆ ಭಿಕ್ಷೆ ಬೇಡುತ್ತಿದ್ದ ಕಾಲ ದೂರವಾಗಿ 300 ಲಕ್ಷ ಮಿಲಿಯನ್‌ ಟನ್‌ ಆಹಾರ ಉತ್ಪಾದಿಸುವ ಸಾಮರ್ಥ್ಯ ರೈತರಿಗೆ ಬಂದಿದೆ. ನಾವೇ ವಿದೇಶಗಳಿಗೆ ಆಹಾರ ಪೂರೈಸುವ ಶಕ್ತಿ ಇದೆ. ಇದನ್ನು ಕೇಂದ್ರ ಸರ್ಕಾರ ಮರೆತು ರೈತರನ್ನು ಬಲಿಕೊಡುವ ಕೆಲಸ ಮಾಡಬಾರದು ಎಂದು ವಿವರಿಸಿದರು.

Advertisement

ರೈತರು ಎಚ್ಚೆತ್ತುಕೊಳ್ಳಬೇಕು:
ಮಾಧ್ಯಮಗಳಲ್ಲಿ ಮಾತ್ರ ಆಕರ್ಷಣೀಯವಾಗಿ ಮಾತನಾಡುವ ಮಂತ್ರಿಗಳು, ಜನಪ್ರತಿನಿಧಿಗಳು ರೈತರ ನೋವಿನ ಬಗ್ಗೆ ಚಕಾರ ಎತ್ತುವುದಿಲ್ಲ, ಭೂ ಮಾಫಿಯಾ, ಹಣ ಬಲವುಳ್ಳವರು ಅಧಿಕಾರ ಹಿಡಿಯುತ್ತಿದ್ದು,ಕಾನೂನುಗಳನ್ನು ಗಾಳಿಗೆ ತೂರಿದ್ದಾರೆ. ಈ ಬಗ್ಗೆ ರೈತರು ಎಚ್ಚೆತ್ತುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ರೈತರು ಸಂಘಟಿತರಾಗಲಿ: ಕಬ್ಬಿನ ಸಸಿಗೆ ನೀರೆರೆದು ಘಟಕ ಉದ್ಘಾಟಿಸಿದ ವಾಟಾಳು ಮಠದ ಡಾ.ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ರೈತರು ಸಂಘ ಟಿತರಾಗಲು, ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಲು ಗ್ರಾಮ ಘಟಕಗಳ ಸಂಘಟನೆ ಅಗತ್ಯವಿದೆ. ರೈತರ ಪ್ರತಿನಿಧಿ ಶಾಸನ ಸಭೆಯಲ್ಲಿದ್ದರೆ ಮಾತ್ರ ರೈತರ ಶಕ್ತಿ ಹೆಚ್ಚುತ್ತದೆ ಎಂದು ಹೇಳಿದರು. ಸಂಘದ ಮುಖಂಡರಾದ ಅತ್ತಳ್ಳಿ ದೇವರಾಜ್‌, ಹಳ್ಳಿಕೆರೆಹುಂಡಿ ಭಾಗ್ಯರಾಜ್‌, ಕಿರಗಸೂರು ಶಂಕರ್‌ ಮಾತನಾಡಿ, ಸಂಘಟನೆಯ ಮಹತ್ವದ ಬಗ್ಗೆ ತಿಳಿಸಿದರು. ಸಭೆಯಲ್ಲಿ ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್‌, ವಾಟಾಳುಪುರದ ನಾಗೇಶ್‌, ಶಂಭುಲಿಂಗಪ್ಪ, ಚಿನ್ನಸ್ವಾಮಿ, ಸುರೇಶ್‌ ಶಿವಕುಮಾರಸ್ವಾಮಿ, ಹಾಡ್ಯರವಿ, ಬರಡನಪುರ ನಾಗರಾಜ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next