ಏಷ್ಯಾಕಪ್ ಮತ್ತು ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗಳು ಒಂದಿಲ್ಲೊಂದು ವಿವಾದಗಳಿಂದಾಗಿ ಸದಾ ಸುದ್ದಿಯಲ್ಲಿವೆ. ಮೊದಲಿಗೆ ಏಷ್ಯಾಕಪ್ ನಡೆಸುವ ಕುರಿತಂತೆ ಎದ್ದಿದ್ದ ಗೊಂದಲ, ಕಡೆಗೆ ಪಾಕಿಸ್ಥಾನ ಮತ್ತು ಶ್ರೀಲಂಕಾಗೆ ಪಂದ್ಯಗಳನ್ನು ಹಂಚಿದ ಅನಂತರ ಬಗೆಹರಿಯಿತು. ಇದಾದ ಬಳಿಕ ವಿಶ್ವಕಪ್ ಪಂದ್ಯಾವಳಿಯ ವೇಳಾಪಟ್ಟಿಯಲ್ಲಿ ಗೊಂದಲ ಕಾಣಿಸಿಕೊಂಡಿದ್ದು, ಇದರಿಂದಾಗಿ ಭಾರತದಲ್ಲಿನ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಕಿರಿಕಿರಿ ಅನುಭವಿಸುವಂತಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.
ಕ್ರೀಡೆಯಲ್ಲಿ ರಾಜಕೀಯ ಸಲ್ಲದು ಎಂದು ಹೇಳಲಾಗುತ್ತಿದೆಯಾದರೂ, ಪಾಕಿಸ್ಥಾನ ಜತೆಗಿನ ಪಂದ್ಯ ಆಯೋಜನೆ ವೇಳೆ, ದೇಶದ ಹಿತಾಸಕ್ತಿಯನ್ನು ಗಮನಿಸುವ ಸ್ಥಿತಿ ಎದುರಾಗಿದೆ. ಪಾಕಿಸ್ಥಾನದ ಜತೆಗಿನ ಕ್ರಿಕೆಟ್ ಸಂಬಂಧ ಭಾವನಾತ್ಮಕವಾಗಿಯೂ ಬೆಸೆದಿರುವುದರಿಂದ ಅಷ್ಟು ಸುಲಭವಾಗಿ ಈ ದೇಶದ ಜತೆಗೆ ಕ್ರಿಕೆಟ್ ಆಡುವುದು ಕಷ್ಟಕರ. ಆದರೂ ಐಸಿಸಿ ನಡೆಸುವ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಅನಿವಾರ್ಯವಾಗಿ ಭಾರತ ಮತ್ತು ಪಾಕಿಸ್ಥಾನ ಎದುರಾಗಲೇಬೇಕಾಗುತ್ತದೆ. ಸದ್ಯವೇ ಆರಂಭವಾಗಲಿರುವ ಏಷ್ಯಾಕಪ್‌ನಲ್ಲಿಯೂ ಉಭಯ ತಂಡಗಳು ಎದುರಾಳಿಗಳಾಗಲಿವೆ.
ಏಷ್ಯಾಕಪ್ ವಿಚಾರದಲ್ಲಿ ಆರಂಭದಿಂದಲೂ ಸಮಸ್ಯೆ ತಲೆದೋರಿತ್ತು. ಈ ಬಾರಿಯ ಪಂದ್ಯಾವಳಿಯ ಆತಿಥ್ಯವನ್ನು ಪಾಕಿಸ್ಥಾನ ವಹಿಸಿಕೊಂಡಿದ್ದು, ಭಾರತ ಪಾಕಿಸ್ಥಾನಕ್ಕೆ ಹೋಗುವುದಿಲ್ಲ ಎಂದು ಪಟ್ಟು ಹಿಡಿಯಿತು. ಇದು ನಾನಾ ಸಮಸ್ಯೆಗಳಿಗೂ ಕಾರಣವಾಗಿ, ಭಾರತ ಪಾಕಿಸ್ಥಾನಕ್ಕೆ ಬರದಿದ್ದರೆ, ನಾವೂ ವಿಶ್ವಕಪ್ ಪಂದ್ಯಾವಳಿಗಾಗಿ ಭಾರತಕ್ಕೆ ಹೋಗುವುದಿಲ್ಲ ಎಂದು ಪಾಕಿಸ್ಥಾನ ಕ್ರಿಕೆಟ್ ಮಂಡಳಿ ಹೇಳಿತ್ತು. ಕಡೆಗೆ, ಒಂದಿಲ್ಲೊಂದು ಒತ್ತಡಕ್ಕೆ ಮಣಿದ ಪಾಕಿಸ್ಥಾನ ಅನಿವಾರ್ಯವಾಗಿ, ತನ್ನಲ್ಲಿ ನಾಲ್ಕು ಪಂದ್ಯ, ಉಳಿದವುಗಳನ್ನು ಶ್ರೀಲಂಕಾದಲ್ಲಿ ನಡೆಸಲು ಮುಂದಾಯಿತು. ಈ ಗೊಂದಲ ಬಗೆಹರಿದಿದೆಯಾದರೂ, ಇದರ ಮತ್ತೂಂದು ರೂಪದ ಗೊಂದಲ ವಿಶ್ವಕಪ್ ಪಂದ್ಯಾವಳಿಯಲ್ಲೂ ಮುಂದುವರಿದಿದೆ. ವೇಳಾಪಟ್ಟಿ ವಿಚಾರದಲ್ಲಿ ಪಾಕಿಸ್ಥಾನ ಆರಂಭದಿಂದಲೂ ಕಿರಿಕ್ ಮಾಡಿಕೊಂಡು ಬರುತ್ತಿದೆ. ತನಗೆ ಇಂಥವೇ ಕ್ರೀಡಾಂಗಣ ಬೇಕು, ಅಹ್ಮದಾಬಾದ್‌ನಲ್ಲಿ ಆಡುವುದಿಲ್ಲ ಎಂದು ಪಾಕಿಸ್ಥಾನ ಹೇಳಿತ್ತು. ಆದರೆ ಈ ಬೇಡಿಕೆಗೆ ಒಪ್ಪಿಕೊಳ್ಳದಿರುವುದರಿಂದ ಅನಿವಾರ್ಯವಾಗಿ ಪಾಕ್ ಅಹ್ಮದಾಬಾದ್‌ನಲ್ಲಿ ಆಡಲು ಮುಂದಾಯಿತು. ಕ್ರೀಡಾಂಗಣದ ವಿಚಾರ ಬಗೆಹರಿಯಿತಾದರೂ, ಹಬ್ಬಗಳ ಕಾರಣದಿಂದಾಗಿ, ಕೆಲವೊಂದು ಪಂದ್ಯಗಳ ವೇಳಾಪಟ್ಟಿ ಬದಲಿಸಲಾಗಿದೆ. ಒಟ್ಟಾರೆಯಾಗಿ 9 ಪಂದ್ಯಗಳ ವೇಳಾಪಟ್ಟಿ ಬದಲಾಗಿದೆ. ಈ ಬದಲಾವಣೆಯಿಂದಾಗಿ ಹೈದರಾಬಾದ್‌ನಲ್ಲಿ ಮತ್ತೂಂದು ಸಮಸ್ಯೆ ಶುರುವಾಗಿದೆ. ಅ. 9 ಮತ್ತು ಅ. 10ರಂದು ಹೈದರಾಬಾದ್‌ನಲ್ಲಿ ಎರಡು ಪಂದ್ಯಗಳು ನಡೆಯಬೇಕಾಗಿದೆ. ಇದರಿಂದಾಗಿ ಭದ್ರತಾ ಸಮಸ್ಯೆಯಾಗಬಹುದು ಎಂಬುದು ಅಲ್ಲಿನ ಕ್ರಿಕೆಟ್ ಸಂಸ್ಥೆಯ ಆರೋಪ. ಮೊದಲು ಪ್ರಕಟಿಸಿದ್ದ ವೇಳಾಪಟ್ಟಿಯಲ್ಲಿ ಈ ಗೊಂದಲಗಳು ಇರಲಿಲ್ಲ. ಆದರೆ ಬದಲಾವಣೆ ಮಾಡಿದ ಮೇಲೆ ನಮಗೆ ಸಮಸ್ಯೆಯಾಯಿತು ಎಂದು ಹೇಳಿಕೊಂಡಿದೆ.
ಆಯಾ ರಾಜ್ಯಗಳ ಕ್ರಿಕೆಟ್ ಸಂಸ್ಥೆಗಳು ಪಂದ್ಯಗಳಿಗಾಗಿ ಎಲ್ಲ ರೀತಿಯ ಸಿದ್ಧತೆ ನಡೆಸಿಕೊಳ್ಳಬೇಕು. ಅಲ್ಲದೆ ವಿಶ್ವಕಪ್ ಪಂದ್ಯಗಳು ನಡೆಯುವ ವೇಳೆ ಅಲ್ಲಿನ ಪ್ರವಾಸೋದ್ಯಮವೂ ವೃದ್ಧಿಯಾಗುತ್ತದೆ. ಈಗಾಗಲೇ ಕೆಲವು ಬದಲಾವಣೆಗಳಿಂದಾಗಿ ಹೊಟೇಲ್ ಉದ್ಯಮಕ್ಕೂ ನಷ್ಟವಾಗಿದೆ. ಈ ಅಂಶಗಳನ್ನು ನೋಡಿಕೊಂಡು ಬಿಸಿಸಿಐ ಮುಂದಡಿ ಇಡಬೇಕಾಗಿದೆ.