ಹಾಸನ: ಸಾರ್ವಜನಿಕರು ಕೊರೊನಾ ವೈರಾಣು ಬಗ್ಗೆ ಆತಂಕ ಪಡಬೇಕಾಗಿಲ್ಲ ಸೋಂಕು ಬಾರದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು. ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ (ಹಿಮ್ಸ್) ಆಸ್ಪತ್ರೆಗೆ ಭಾನುವಾರ ಭೇಟಿ ನೀಡಿ, ಕೊರೊನಾ ಸೋಂಕು ಶಂಕಿತರಿಗೆ ಹಾಗೂ ಸೋಂಕಿತರಿಗಾಗಿ ಸಿದ್ಧಪಡಿಸಲಾಗಿರುವ ಪ್ರತ್ಯೇಕ ವಾರ್ಡ್‌ಗಳನ್ನು ವೀಕ್ಷಣೆ ಮಾಡಿ ಮಾತನಾಡಿದರು.
ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಅಧಿಕಾರಿಗಳು ಎಲ್ಲಾ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಿಕೊಂಡಿದ್ದಾರೆ. ಸಿದ್ಧಪಡಿಸಿರುವ ಪ್ರತ್ಯೇಕ ವಾರ್ಡ್‌ಗಳಲ್ಲಿ 75 ಹಾಸಿಗೆ ಸೋಂಕಿತರಿಗೆ ಹಾಗೂ 25 ಹಾಸಿಗೆ ಶಂಕಿತರಿಗಾಗಿ ಪ್ರತ್ಯೇಕವಾಗಿ ಮೀಸಲಿಡಲಾಗಿದೆ. ಇದರಿಂದ ಶಂಕಿತರಿಗೆ ಸೋಂಕಿತರಿಂದ ವೈರಸ್ ಹರಡುವುದು ತಪ್ಪುತ್ತದೆ ಎಂದು ತಿಳಿಸಿದರು.
ಬಸ್, ರೈಲು ನಿಲ್ದಾಣದಲ್ಲಿ ಥರ್ಮಲ್ ಸ್ಕ್ಯಾನರ್: ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ. ಸಾರ್ವಜನಿಕರು ರೋಗದ ಲಕ್ಷಣಗಳು ಕಂಡು ಬಂದಲ್ಲಿ ನಿರ್ಲಕ್ಷ್ಯ ಮಾಡದೇ ತಕ್ಷಣ ಆಸ್ಪತ್ರೆಗೆ ಬಂದು ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕೊರೊನಾ ಸೋಂಕು ಪತ್ತೆ ಹಚ್ಚಲು ಥರ್ಮಲ್ ಸ್ಕ್ಯಾನರ್ಸ್‌ಗಳನ್ನು ಎಲ್ಲಾ ತಾಲೂಕುಗಳ ಬಸ್, ರೈಲು ನಿಲ್ದಾಣ ಹಾಗೂ ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಅವರಿಗೆ ಸೂಚನೆ ನೀಡಿದರು.
ತಾಲೂಕು ಆಸ್ಪತ್ರೆಯಲ್ಲಿ ಮಾಸ್ಕ್ ಮಾರಾಟ: ಪ್ರಸ್ತುತ ಮಾಸ್ಕ್ ಖರೀದಿಸಲು ಸಾರ್ವಜನಿಕರಿಗೆ ಸಮಸ್ಯೆ ಆಗುತ್ತಿದೆ. ಮಾರಾಟಗಾರರು ಈ ಅವಕಾಶ ಉಪಯೋಗಿಸಿಕೊಂಡು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಹಾಗಾಗಿ ಸರ್ಕಾರವೇ ಮಾಸ್ಕ್ಗಳನ್ನು ನೇರ ಖರೀದಿಸಿ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗೆ ನಿಗದಿತ ಬೆಲೆಯಲ್ಲಿಯೇ ಒದಗಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಆರ್.ಕೃಷ್ಣಮೂರ್ತಿ, ಹಿಮ್ಸ್ ನಿರ್ದೇಶಕ ಡಾ. ಬಿ.ಸಿ. ರವಿಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಹಿರಣ್ಣಯ್ಯ, ಡಾ. ಈಶ್ವರ್ ಪ್ರಸಾದ್, ತಾಲೂಕು ಆರೋಗ್ಯ ಅಧಿಕಾರಿ ಡಾ. ವಿಜಯ್ ಹಾಜರಿದ್ದರು.
ವಂದತಿಗಳಿಗೆ ಕಿವಿಗೊಡಬೇಡಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಿದ್ದಾರೆ ಎಂಬ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಸಾರ್ವಜನಿಕರು ವಂದತಿಗಳಿಗೆ ಕಿವಿಗೊಡಬಾರದು ಹಾಗೂ ಭಯಬೀತರಾಗುವ ಅಗತ್ಯವಿಲ್ಲ. ಶಂಕಿತರ ವೈದ್ಯಕೀಯ ವರದಿ ನೆಗೆಟಿವ್ ಎಂದು ಬಂದಿದೆ. ಹಾಗಾಗಿ ಯಾರು ಭಯ ಪಡುವ ಅಗತ್ಯವಿಲ್ಲ. ಹೊರಗೆ ಹೋಗಿ ಬಂದ ನಂತರ ಅಥವಾ ಏನಾದರೂ ಮುಟ್ಟಿದ ಸಂದರ್ಭದಲ್ಲಿ ಕೈಗಳನ್ನು ಸೋಪ್‌ನಲ್ಲಿ ಚೆನ್ನಾಗಿ ತೊಳೆದುಕೊಳ್ಳಬೇಕು. ಹೆಚ್ಚು ಜನರು ಸೇರುವ ಸ್ಥಳಗಳಿಗೆ ಹೋಗುವುದನ್ನು ಕಡಿಮೆ ಮಾಡುವುದರಿಂದ ಸೋಂಕು ಬಾರದಂತೆ ತಡೆಗಟ್ಟಬಹುದು ಎಂದು ಪ್ರಜ್ವಲ್ ರೇವಣ್ಣ ಹೇಳಿದರು.