Advertisement

ಪಾರ್ಕಿಂಗ್‌ ಜಾಗ ಕೇಳ್ಬೇಡಿ; ದಂಡ ಮರೀಬೇಡಿ!

01:32 AM Sep 07, 2019 | Lakshmi GovindaRaju |

ಬೆಂಗಳೂರು: ಕೇಂದ್ರ ಸರ್ಕಾರದ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಅನ್ವಯ ಸಂಚಾರ ಪೊಲೀಸರು, ನಿಷೇಧಿತ ಪ್ರದೇಶದಲ್ಲಿ ನಿಲುಗಡೆಯಾಗುವ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಭಾರೀ ದಂಡ ಪ್ರಯೋಗದಲ್ಲಿ ಸಕ್ರಿಯರಾಗಿದ್ದಾರೆ. ಆದರೆ, ಸ್ಥಳೀಯ ಆಡಳಿತ ಸಂಸ್ಥೆಗಳು ನಗರದಲ್ಲಿ ವಾಹನ ನಿಲುಗಡೆಗೆ ಸೌಲಭ್ಯಗಳನ್ನೇ ಕಲ್ಪಿಸಿಲ್ಲ. ಈ ಹಿನ್ನೆಲೆಯಲ್ಲಿ ವಾಹನ ಸವಾರರು ಮತ್ತು ನಗರ ತಜ್ಞರಿಂದ ಈ ಧೋರಣೆ ಬಗ್ಗೆ ಅಪಸ್ವರ ಕೇಳಿಬರುತ್ತಿದೆ.

Advertisement

ಸಂಚಾರ ಪೊಲೀಸರ ಮಾಹಿತಿ ಪ್ರಕಾರ ನಗರದಲ್ಲಿ ಸಂಚರಿಸುವ ಲಕ್ಷಾಂತರ ವಾಹನ ನಿಲುಗಡೆಗೆ ಸರಿಸುಮಾರು ನೂರು ಎಕರೆ ಜಾಗದ ಅಗತ್ಯವಿದೆ. ಆದರೆ, ಬಹುತೇಕ ಪ್ರದೇಶ ಹಾಗೂ ಹೃದಯ ಭಾಗದಲ್ಲೇ ಜಾಗದ ಕೊರತೆ ಇದೆ. ಹೀಗಾಗಿ ವಾಹನ ಸವಾರರು ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುತ್ತಿದ್ದಾರೆ. ಇದರಿಂದ ತಮ್ಮದಲ್ಲದ ತಪ್ಪಿಗೆ ಸಾವಿರಾರು ರೂಪಾಯಿ ದಂಡ ಪಾವತಿಸುವಂತಾಗಿದೆ.

ನಗರದಲ್ಲಿ ಸುಮಾರು 80 ಲಕ್ಷಕ್ಕೂ ಹೆಚ್ಚು ವಾಹನಗಳಿದ್ದು, ಇದರೊಂದಿಗೆ ನಿತ್ಯ ಸರಾಸರಿ 1,700 ಹೊಸ ವಾಹನಗಳ ನೋಂದಣಿ ಆಗುತ್ತಿದೆ. ಆದರೆ, ಈ ಎಲ್ಲ ವಾಹನಗಳಿಗೆ ನಿಲುಗಡೆಗೆ ಸೂಕ್ತ ಸೌಲಭ್ಯಗಳು ನಗರದಲ್ಲಿ ಇಲ್ಲ. ವಾಹನ ಮಾಲಿಕರು ಮನೆ ಮುಂದೆ ಹಾಗೂ ಕಚೇರಿ ಮುಂದೆ ನಿಲ್ಲಿಸುತ್ತಿದ್ದಾರೆ. ಇದು ಇತರೆ ವಾಹನಗಳ ಸಂಚಾರಕ್ಕೆ ತೀವ್ರ ಕಿರಿಕಿರಿಯಾಗಿ ಪರಿಣಮಿಸಿದೆ. ಈ ಬಗ್ಗೆ ಕ್ರಮಕೈಗೊಳ್ಳಬೇಕಾದ ಬಿಬಿಎಂಪಿ ಹಾಗೂ ಸ್ಥಳೀಯ ಆಡಳಿತ ಸಂಸ್ಥೆಗಳು ಕೈಚೆಲ್ಲಿ ಕುಳಿತಿವೆ. ಮತ್ತೂಂದೆಡೆ ಸಾವಿರಾರು ಶಿಕ್ಷಣ ಸಂಸ್ಥೆಗಳು ಸಹ ತಮ್ಮ ವಾಹನಗಳನ್ನು ರಸ್ತೆ ಮಧ್ಯೆ ನಿಲ್ಲಿಸಿ, ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿವೆ ಎಂದು ಸಾರಿಗೆ ತಜ್ಞರು ಆರೋಪಿಸುತ್ತಾರೆ.

ಫ‌ಲಿಸಲಿಲ್ಲ ಬಿಬಿಎಂಪಿ ಯೋಜನೆ: ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುತ್ತಿದ್ದವರ ವಿರುದ್ಧ ಕಠಿಣ ಕ್ರಮಕ್ಕೆ ಬಿಬಿಎಂಪಿ ಮುಂದಾಗಿತ್ತು. ಸ್ವಂತ ಸ್ಥಳ ಇಲ್ಲದೆ ಮನೆ ಮುಂದೆ ವಾಹನಗಳ ನಿಲುಗಡೆ ಮಾಡುವ ಮಾಲಿಕರು ನಿತ್ಯ ಇಂತಿಷ್ಟು ಪಾರ್ಕಿಂಗ್‌ ಶುಲ್ಕ ಪಾವತಿಸಬೇಕು ಎಂದು ಸೂಚಿಸಿತ್ತು. ಆರಂಭದಲ್ಲಿ ಆಕ್ಷೇಪಣೆಗಳು ವ್ಯಕ್ತವಾದರೂ ಬಳಿಕ ಜಾರಿಗೆ ತರಲಾಗಿತ್ತು. ಆದರೆ, ಈವರೆಗೂ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ.

ಈ ನಡುವೆ ಭವಿಷ್ಯದಲ್ಲಿ ಉಂಟಾಗಬಹುದಾದ ಪಾರ್ಕಿಂಗ್‌ ಸಂಘರ್ಷ ಕುರಿತು ಚಿಂತನೆ ನಡೆಸಿದ್ದ ಸಂಚಾರ ವಿಭಾಗದ ಈ ಹಿಂದಿನ ಹೆಚ್ಚುವರಿ ಪೊಲೀಸ್‌ ಆಯುಕ್ತ ಪಿ.ಹರಿಶೇಖರನ್‌, ವಾಹನಗಳ ಪಾರ್ಕಿಂಗ್‌ ಮಾಡಲು ಸೂಕ್ತವಾದ ಸರ್ಕಾರಿ ಜಾಗವನ್ನು ಪತ್ತೆ ಹಚ್ಚಿ ವರದಿ ನೀಡುವಂತೆ ಸೂಚಿಸಿದ್ದರು. ಇದೀಗ ನಗರದಾದ್ಯಂತ ಇರುವ 82 ಪಾರ್ಕಿಂಗ್‌ ಸ್ಥಳಗಳನ್ನು ಗುರುತಿಸಿರುವ ಸಂಚಾರ ಪೊಲೀಸರು, ಬಿಬಿಎಂಪಿಗೆ ಸರ್ವೇ ನಂಬರ್‌ ಹಾಗೂ ಸ್ಥಳದ ವಿವರ ಸಹಿತ ವರದಿ ನೀಡಿದೆ. ಬಿಬಿಎಂಪಿ ಸಹ ಅನುಮೊದನೆ ನೀಡಿ ಸರ್ಕಾರಕ್ಕೆ ಕಳುಹಿಸಿಕೊಟ್ಟಿದೆ ಎಂದು ಮೂಲಗಳು ತಿಳಿಸಿವೆ.

Advertisement

ಪಾರ್ಕಿಂಗ್‌ ನೀತಿ ಜಾರಿ ಅಗತ್ಯ: ಪಾರ್ಕಿಂಗ್‌ ಸಮಸ್ಯೆ ನಿವಾರಣೆಗೆ ಬೆಂಗಳೂರಿನಲ್ಲಿ ಪಾರ್ಕಿಂಗ್‌ ನೀತಿ ಜಾರಿಗೆ ತರಬೇಕು. ಆದರೆ, ಅದಕ್ಕೆ ಬಹಳಷ್ಟು ಸಮಯ ಬೇಕಾಗುತ್ತದೆ. ಒಂದು ವೇಳೆ ಸ್ಥಳೀಯ ಆಡಳಿತ ಸಂಸ್ಥೆಗಳು ಪಾರ್ಕಿಂಗ್‌ ನೀತಿ ಜಾರಿಗೆ ತಂದರೆ ಹಲವು ಲಾಭಗಳಿವೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇರುವ ಕಡೆ ಪಾರ್ಕಿಂಗ್‌ ವ್ಯವಸ್ಥೆ ಮಾಡಬೇಕಾಗುತ್ತದೆ. ಅದರಿಂದ ವಾಹನಗಳ ನಿಲುಗಡೆಗೆ ಸೂಕ್ತ ಸ್ಥಳ ನೀಡಿದಂತಾಗುತ್ತದೆ, ಸಾರ್ವಜನಿಕ ಸಾರಿಗೆಗೆ ಕೂಡ ಆದ್ಯತೆ ಕೊಟ್ಟಂತಾಗುತ್ತದೆ.

ಜತೆಗೆ ಬಿಬಿಎಂಪಿಗೂ ಆದಾಯ ಬರುತ್ತದೆ ಎನ್ನುತ್ತಾರೆ ಸಿಟಿಜನ್‌ ಫಾರ್‌ ಬೆಂಗಳೂರು ಸದಸ್ಯ ಶ್ರೀನಿವಾಸ ಅಲವಳ್ಳಿ. ಕೆಲ ಸಾಫ್ಟ್ವೇರ್‌ ಕಂಪನಿಗಳು ಹೊರತುಪಡಿಸಿ ಇತರೆ ಕಂಪನಿಗಳು ಪಾರ್ಕಿಂಗ್‌ ವ್ಯವಸ್ಥೆ ಮಾಡಿಕೊಂಡಿಲ್ಲ. ಹೀಗಾಗಿ ಹೊಸ ಪಾರ್ಕಿಂಗ್‌ ನೀತಿ ಜಾರಿಗೆ ತಂದರೆ, ನಗರದಲ್ಲಿ ಖಾಸಗಿ ಕಂಪನಿಗಳು ತಮ್ಮ ಸಿಬ್ಬಂದಿಗೆ ಅನಿವಾರ್ಯವಾಗಿ ವಾಹನ ಪಾರ್ಕಿಂಗ್‌ಗೆ ಅವಕಾಶ ಕೊಡಬೇಕಾಗುತ್ತದೆ. ಅದರಿಂದ ನಗರದಲ್ಲಿ ಪಾರ್ಕಿಂಗ್‌ ಸಮಸ್ಯೆ ಕಡಿಮೆ ಆಗಬಹುದು ಎಂದು ಹೇಳಿದರು.

14.33 ಲಕ್ಷ ರೂ. ಸಂಗ್ರಹ: ಜುಲೈ 24ರಿಂದ ಆ.7ರವರೆಗೆ 1,433 (ನೋ ಪಾರ್ಕಿಂಗ್‌, ಅಪಾಯಕಾರಿ ವಾಹನ ನಿಲುಗಡೆ, ನಿಷೇಧಿತ ಪ್ರದೇಶದಲ್ಲಿ ವಾಹನ ನಿಲುಗಡೆ) ಪ್ರಕರಣಗಳನ್ನು ದಾಖಲಿಸಿ, 14,33,000 ರೂ. ಸಂಗ್ರಹ ಮಾಡಲಾಗಿದೆ.

ಸಂಚಾರ ಪೊಲೀಸ್‌ ವಿಭಾಗದಿಂದ ವಾಹನಗಳ ಪಾರ್ಕಿಂಗ್‌ ಮಾಡಬಹುದಾದ 82 ಸ್ಥಳಗಳನ್ನು ಗುರುತಿಸಿ, ಆ ಸ್ಥಳಗಳ ಮಾಹಿತಿಯನ್ನು ಬಿಬಿಎಂಪಿಗೆ ಸಲ್ಲಿಸಲಾಗಿದೆ.
-ರವಿಕಾಂತೇಗೌಡ, ಜಂಟಿ ಪೊಲೀಸ್‌ ಆಯುಕ್ತ (ಸಂಚಾರ)

ಬುಧವಾರ ರಾಜಕುಮಾರ್‌ ರಸ್ತೆಯಲ್ಲಿ ಮೆಡಿಕಲ್‌ ಸ್ಟೋರ್‌ಗೆ ಹೋದಾಗ ನೋ ಪಾರ್ಕಿಂಗ್‌ನಲ್ಲಿ ವಾಹನ ನಿಲ್ಲಿಸಿದ್ದೀರಿ ಎಂದು ಬೈಕ್‌ ಟೋ ಮಾಡಿದ್ದರು. ಬಳಿಕ 1,700 ರೂ. ಪಾವತಿಸಿ ಬಿಡಿಸಿಕೊಂಡೆ. ಯಾವ ರಸ್ತೆಯಲ್ಲಿ ಹೋದರೂ ನೋಪಾರ್ಕಿಂಗ್‌ ಬೋರ್ಡ್‌ ಹಾಕಿರುತ್ತಾರೆ. ವಾಹನ ನಿಲ್ಲಿಸುವುದಾದರೂ ಎಲ್ಲಿ?
-ನಾಗರಾಜ್‌, ಮಂಜುನಾಥನಗರ ನಿವಾಸಿ

* ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next