ಬೀದರ: ನೂಲಿಯ ಚಂದಯ್ಯ ತಮ್ಮ ಕಾಯಕ ನಿಷ್ಠೆಯಿಂದಲೇ 12ನೇ ಶತಮಾನದ ಬಸವಣ್ಣನವರ ಅಮರ ಗಣಗಳಲ್ಲಿ ಇವರು ಕೂಡ ಒಬ್ಬರು ಆಗಿದ್ದರು ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.
ನಗರದ ರಂಗ ಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ನೂಲಿಯ ಚಂದಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನೂಲಿಯ ಚಂದಯ್ಯನವರು ನಿತ್ಯ ಹಳ್ಳಕ್ಕೆ ಹೋಗಿ ಹುಲ್ಲನ್ನು ಕೊಯ್ದು ತಂದು ಹಗ್ಗವನ್ನು ಮಾರಾಟ ಮಾಡಿ ಬಂದಿದ್ದ ಹಣದಲ್ಲಿ ತಮ್ಮ ಜೀವನ ನಡೆಸುವುದರ ಜೊತೆಗೆ ದಾಸೋಹ ಮಾಡುತ್ತಿದ್ದರು. ದಾನಿಗಳಾದವರು ಶ್ರೀಮಂತರೇ ಇರಬೇಕೆಂದಿಲ್ಲ. ದಾನ ಮಾಡುವ ಗುಣವಿರಬೇಕು ಎಂಬುವುದು ಈ ಶರಣರಿಂದ ನಾವು ಕಲಿಯಬೇಕು ಎಂದರು.
12ನೇ ಶತಮಾನದಲ್ಲಿ ಬಸವಣ್ಣನವರು ಕಾಯಕವೇ ಕೈಲಾಸ ಎಂದು ಹೇಳಿದ್ದರು. ಎಲ್ಲರಿಗೂ ಕೊಡುವ ಮನಸ್ಸು ಅಂದಿನ ಶರಣರಲ್ಲಿತ್ತು. ಆದರೆ, ಕೇಳುವವರು ಇರಲಿಲ್ಲ. ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೊಡುವುದಕ್ಕಿಂತ ಬೇಡುವ ಮನಸ್ಥಿತಿಗಳೇ ಹೆಚ್ಚಾಗಿವೆ ಎಂದು ಹೇಳಿದ ಅವರು, ಕಾಯಕದಿಂದ ನಮ್ಮ ಶಕ್ತಿ, ಆರೋಗ್ಯ ಚೆನ್ನಾಗಿರುವುದರ ಜೊತೆಗೆ ನಮ್ಮ ಸಮಾಜವನ್ನು ಆರೋಗ್ಯದಿಂದ ನಾವು ನೋಡಿಕೊಳ್ಳುತ್ತೇವೆ ಎಂಬುವುದನ್ನು ಶರಣರಿಂದಲೇ ನಾವು ಕಲಿಯಬೇಕಾಗಿದೆ ಮತ್ತು ಅವರ ತತ್ವ-ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಕೆಎಸ್‌ಐಐಡಿಸಿ ಅಧ್ಯಕ್ಷ ಡಾ| ಶೈಲೇಂದ್ರ ಬೆಲ್ದಾಳೆ ಮಾತನಾಡಿ, 12ನೇ ಶತಮಾನದ 770 ಅಮರ ಗಣಗಳಲ್ಲಿ ನೂಲಿಯ ಚಂದಯ್ಯನವರು ಒಬ್ಬರಾಗಿದ್ದರು. ಅಂದಿನ ಶರಣರು ತಮ್ಮ ಸತ್ಯ ಶುದ್ಧ ಕಾಯಕ ದಾಸೋಹ ಮತ್ತು ಭಕ್ತಿಯಿಂದ ಸಮಾಜದ ಒಳಿತಿಗಾಗಿ ದುಡಿದಿದ್ದರು ಎಂದರು.
ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣತಾಯಿ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅಗ್ರ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬುಡಾ ಅಧ್ಯಕ್ಷ ಬಾಬು ವಾಲಿ, ಅಪರ ಜಿಲ್ಲಾಧಿಕಾರಿ ಶಿವುಕುಮಾರ ಶೀಲವಂತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ, ಜಿಲ್ಲಾ ಕೋರವ ಸಮಾಜದ ಅಧ್ಯಕ್ಷ ಸಂತೋಷ ಕೋರವ, ಪ್ರಮುಖರಾದ ಸಂಜುಕುಮಾರ ಬೇಲೂರ, ವಿಶ್ವನಾಥ ಜಾಧವ, ಮಹಾಂತೇಶ ಭಜಂತ್ರಿ, ಡಾ| ಶಿವಶರಣಪ್ಪ ಹುಗ್ಗೆ ಪಾಟೀಲ, ವೈಜನಾಥ ಸಾಳೆ ಇದ್ದರು.