Advertisement

ಚರ್ಮದಾನ

06:55 AM Sep 03, 2017 | |

ಸಾಮಾನ್ಯವಾಗಿ ಉದ್ಭವಿಸುವ ಪ್ರಶ್ನೆಗಳು
1. ಒಬ್ಟಾತ ಯಾವಾಗ ಚರ್ಮದಾನ ಮಾಡಬಹುದು?
ಒಬ್ಟಾತನ ಮರಣಾನಂತರ, ಆರು ತಾಸುಗಳ ಒಳಗಾಗಿ ಚರ್ಮದಾನ ಮಾಡಬಹುದು.
 
2. ಯಾರು ಚರ್ಮದಾನ ಮಾಡಬಹುದು?
ಲಿಂಗ ಮತ್ತು ರಕ್ತದ ಗುಂಪುಗಳ ಭೇದವಿಲ್ಲದೆ, ಯಾರು ಕೂಡ ಚರ್ಮದಾನ ಮಾಡಬಹುದು. ಇದಕ್ಕೆ ಕನಿಷ್ಠ ವಯೋಮಿತಿ 18 ವರ್ಷಗಳಾದರೆ, ಗರಿಷ್ಠ ವಯೋಮಿತಿ ಇಲ್ಲ. ಶತಾಯುಷಿ ವ್ಯಕ್ತಿಯೂ ಚರ್ಮವನ್ನು ದಾನ ಮಾಡಬಹುದಾಗಿದ್ದು, ಅದನ್ನು ಕೂಡ ಚಿಕಿತ್ಸೆಗೆ ಬಳಸಬಹುದಾಗಿದೆ.
 
3. ಇಡೀ ಪ್ರಕ್ರಿಯೆಗೆ ಎಷ್ಟು ಕಾಲಾವಧಿ ತಗಲುತ್ತದೆ?
ಇಡೀ ಪ್ರಕ್ರಿಯೆಗೆ ಒಟ್ಟು 30ರಿಂದ 45 ನಿಮಿಷಗಳು ತಗಲುತ್ತವೆ.

Advertisement

4. ದಾನಿಯನ್ನು ಮರಣಾನಂತರ ಆಸ್ಪತ್ರೆಗೆ ಸಾಗಿಸಬೇಕಾದ ಆವಶ್ಯಕತೆ ಇದೆಯೇ?
ಇಲ್ಲ, ಚರ್ಮನಿಧಿಯ ತಂಡವೇ ದಾನಿಯ ನಿವಾಸ, ಆಸ್ಪತ್ರೆ ಅಥವಾ ಶವಾಗಾರ – ದಾನಿಯ ದೇಹವನ್ನು ಎಲ್ಲಿರಿಸಲಾಗಿದೆಯೋ ಅಲ್ಲಿಗೆ ಆಗಮಿಸುತ್ತದೆ. ದಾನಿಯ ದೇಹವನ್ನು ಶಸ್ತ್ರಚಿಕಿತ್ಸಾ ಕೊಠಡಿ, ಆಸ್ಪತ್ರೆ ಅಥವಾ ಆ್ಯಂಬುಲೆನ್ಸ್‌ಗೆ ಸ್ಥಳಾಂತರಿಸಬೇಕಾದ ಆವಶ್ಯಕತೆ ಇಲ್ಲ.
 
5. ಚರ್ಮವನ್ನು ತೆಗೆಯುವ ಪ್ರಕ್ರಿಯೆಯನ್ನು ಯಾರು ನಡೆಸುತ್ತಾರೆ?
ದಾನಿಯಿಂದ ದೇಹದಿಂದ ಚರ್ಮವನ್ನು ತೆಗೆಯುವ ಪ್ರಕ್ರಿಯೆಯನ್ನು ಚರ್ಮ ನಿಧಿಯ ತಂಡ ನಡೆಸುತ್ತದೆ. ಈ ತಂಡದಲ್ಲಿ ವೈದ್ಯರು, ದಾದಿಯರು, ಬಯೋಟೆಕ್ನಾಲಜಿ ವಿಶೇಷಜ್ಞರು ಮತ್ತು ಸಮಾಜ ಕಾರ್ಯಕರ್ತರು ಇರುತ್ತಾರೆ. 

6. ಚರ್ಮವನ್ನು ಹೇಗೆ ತೆಗೆಯಲಾಗುತ್ತದೆ?
ಅವಶ್ಯವಾದಷ್ಟು ದಪ್ಪನೆಯ ಚರ್ಮವನ್ನು ನಿರ್ದಿಷ್ಟ ಪ್ರದೇಶದಿಂದ ತೆಗೆಯಲು ವಿನ್ಯಾಸಗೊಳಿಸಲಾದ ವಿಶೇಷ ವೈದ್ಯಕೀಯ ಸಲಕರಣೆಗಳನ್ನು ಉಪಯೋಗಿಸಲಾಗುತ್ತದೆ. ತರಬೇತುಗೊಂಡಿರುವ ವೃತ್ತಿಪರರು, ಮೃತ ದಾನಿಯ ಕುಟುಂಬ ವರ್ಗದವರ ಸಂತಾಪವನ್ನು ಗಮನದಲ್ಲಿ ಇರಿಸಿಕೊಂಡು ಈ ಕಾರ್ಯವನ್ನು ನಡೆಸುತ್ತಾರೆ. ಈ ಎಲ್ಲ ಪ್ರಕ್ರಿಯೆಯ ಸಂದರ್ಭದಲ್ಲಿ ಮೃತ ದಾನಿಯ ಘನತೆಯನ್ನು ಕಾಪಾಡಿಕೊಳ್ಳಲಾಗುತ್ತದೆ. 

7. ಚರ್ಮ ತೆಗೆಯುವ ಪ್ರಕ್ರಿಯೆಗೆ ಮುನ್ನ ಸಮ್ಮತಿಯನ್ನು ಪಡೆಯಲಾಗುತ್ತದೆಯೇ?
ಹೌದು. ಈ ಪ್ರಕ್ರಿಯೆ ಆರಂಭವಾಗುವುದಕ್ಕೆ ಮುನ್ನ ಮೃತ ದಾನಿಯ ಅತಿ ಸಮೀಪ ಬಂಧು ಮತ್ತು ಸಾಕ್ಷಿಯೊಬ್ಬರು ಸಮ್ಮತಿ ಪತ್ರಕ್ಕೆ ಸಹಿ ಹಾಕಬೇಕಾಗುತ್ತದೆ. ಚರ್ಮ ತೆಗೆಯುವುದಕ್ಕೆ ಮುನ್ನ ಇಡಿಯ ಪ್ರಕ್ರಿಯೆಯನ್ನು ಅವರಿಗೆ ವಿವರಿಸಲಾಗುತ್ತದೆ.

8. ದೇಹದ ಯಾವ ಭಾಗದಿಂದ ಚರ್ಮವನ್ನು ತೆಗೆಯಲಾಗುತ್ತದೆ?
ಎರಡೂ ಕಾಲುಗಳು, ಎರಡೂ ತೊಡೆಗಳು ಮತ್ತು ಬೆನ್ನಿನಿಂದ ಚರ್ಮವನ್ನು ಪಡೆಯಲಾಗುತ್ತದೆ. 

Advertisement

9. ಇಡೀ ಚರ್ಮವನ್ನು ತೆಗೆಯಲಾಗುತ್ತದೆಯೇ?
ಇಲ್ಲ. ಚರ್ಮದಲ್ಲಿ ಹಲವು ಪದರಗಳಿವೆ. ಅತ್ಯಂತ ಮೇಲ್ಪದರದ ಚರ್ಮವನ್ನು ಮಾತ್ರ ತೆಗೆಯಲಾಗುತ್ತದೆ.
 
10. ರಕ್ತಸ್ರಾವ ಉಂಟಾಗುತ್ತದೆಯೇ ಅಥವಾ ಮೃತದೇಹ ವಿರೂಪಗೊಳ್ಳುವುದೇ?
ಇಲ್ಲ. ಚರ್ಮ ತೆಗೆದ ಭಾಗದಿಂದ ರಕ್ತಸ್ರಾವ ಉಂಟಾಗುವುದಿಲ್ಲ. ಅಲ್ಲದೆ, ಮೃತದೇಹ ವಿರೂಪಗೊಳ್ಳುವುದೂ ಇಲ್ಲ. ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಈ ಭಾಗಗಳನ್ನು ಸೂಕ್ತವಾಗಿ ಶುಚಿಗೊಳಿಸಿ, ಬ್ಯಾಂಡೇಜ್‌ ಮಾಡಿ ಚರ್ಮ ತೆಗೆದಿರುವುದು ದೃಷ್ಟಿಗೋಚರವಾಗದಂತೆ ಮುಚ್ಚಲಾಗುತ್ತದೆ. 

11. ಚರ್ಮ ದಾನಕ್ಕೆ ಅನರ್ಹವಾಗುವುದು ಯಾವಾಗ?
ಕೆಲವು ನಿರ್ದಿಷ್ಟ ಸಾಮಾನ್ಯ ಸೋಂಕುಗಳು, ಸೆಪ್ಸಿಸ್‌, ಯಾವುದೇ ವಿಧವಾದ ಚರ್ಮದ ಸೋಂಕು, ವಿವಿಧ ಬಗೆಯ ಕ್ಯಾನ್ಸರ್‌ಗಳು, ಅದರಲ್ಲೂ ಚರ್ಮದ ಕ್ಯಾನ್ಸರ್‌ ಉಳ್ಳವರ ಚರ್ಮ ದಾನಕ್ಕೆ ಅನರ್ಹವಾಗುತ್ತದೆ. 

12. ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಉಳ್ಳವರ ಚರ್ಮ ಅರ್ಹವೇ, ಅನರ್ಹವೇ?
ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಉಳ್ಳವರೂ ಚರ್ಮದಾನ ಮಾಡಬಹುದು. 

13. ನನ್ನ ಚರ್ಮದಾನವನ್ನು ಹೇಗೆ ಉಪಯೋಗಿಸಿಕೊಳ್ಳಲಾಗುತ್ತದೆ?
ಚರ್ಮವನ್ನು ತೆಗೆದ ಬಳಿಕ ಅದನ್ನು ವಿಶ್ಲೇಷಿಸಲಾಗುತ್ತದೆ, ಸಂಸ್ಕರಿಸಲಾಗುತ್ತದೆ, ತಪಾಸಿಸಲಾಗುತ್ತದೆ ಮತ್ತು ಚರ್ಮನಿಧಿಯಲ್ಲಿ ದಾಸ್ತಾನು ಮಾಡಿಡಲಾಗುತ್ತದೆ. ಆ ಬಳಿಕ ಆವಶ್ಯಕತೆಗೆ ಅನುಗುಣವಾಗಿ ಸುಟ್ಟಗಾಯಗಳಿಗೀಡಾದ ರೋಗಿಗಳಿಗೆ ಕಸಿ ಮಾಡುವುದಕ್ಕಾಗಿ ಸುಟ್ಟಗಾಯಗಳ ಶಸ್ತ್ರಕ್ರಿಯಾ ತಜ್ಞರಿಗೆ ಸರಬರಾಜು ಮಾಡಲಾಗುತ್ತದೆ.

14. ಚರ್ಮವನ್ನು ಹೇಗೆ ದಾಸ್ತಾನು ಮಾಡಲಾಗುತ್ತದೆ ಮತ್ತು ಎಷ್ಟು ಕಾಲ ದಾಸ್ತಾನು ಮಾಡಬಹುದಾಗಿದೆ?
ಚರ್ಮವನ್ನು ಚರ್ಮನಿಧಿಯಲ್ಲಿ ಶೇ.85 ಗ್ಲಿಸರಾಲ್‌ ದ್ರಾವಣದಲ್ಲಿ, 4ರಿಂದ 8 ಡಿಗ್ರಿ ಸೆಲ್ಸಿಯಸ್‌ ಉಷ್ಣತೆಯಲ್ಲಿ ದಾಸ್ತಾನಿಡಲಾಗುತ್ತದೆ, ಚರ್ಮವನ್ನು ಈ ಸ್ಥಿತಿಯಲ್ಲಿ ಐದು ವರ್ಷಗಳ ತನಕ ಕಾಪಿಡಬಹುದಾಗಿದೆ. 

15. ಚರ್ಮ ನಿಧಿ ತಂಡಕ್ಕೆ ಹಣ ಪಾವತಿ ಮಾಡಬೇಕಾಗಿದೆಯೇ?
ಇಲ್ಲ, ಚರ್ಮ ನಿಧಿಯ ತಂಡಕ್ಕೆ ಹಣ ಪಾವತಿ ಮಾಡಬೇಕಾಗಿಲ್ಲ. ಅಂಗಾಂಗಗಳನ್ನು ಖರೀದಿಸುವುದು ಹಾಗೂ ಮಾರಾಟ ಮಾಡುವುದು ಅಕ್ರಮವಾಗಿದೆ. 

16. ಚರ್ಮನಿಧಿಯ ತಂಡ ಆಗಮಿಸಿದಾಗ ಯಾವುದಾದರೂ ಪ್ರಮಾಣಪತ್ರ, ದಾಖಲೆಗಳನ್ನು ಒದಗಿಸಬೇಕೇ?
ಹೌದು, ಚರ್ಮ ದಾನ ಪ್ರಕ್ರಿಯೆ ಆರಂಭವಾಗುವುದಕ್ಕೆ ಮುನ್ನ ಮೃತ ದಾನಿಯ ಮರಣ ಪ್ರಮಾಣ ಪತ್ರ ಮತ್ತು ಅದರ ನೆರಳಚ್ಚು ಪ್ರತಿಯನ್ನು ಪರಿಶೀಲನೆಗಾಗಿ ಚರ್ಮನಿಧಿಯ ತಂಡಕ್ಕೆ ಒದಗಿಸಬೇಕು. 

17. ಚರ್ಮ ಕಸಿಗೆ ದಾನಿ – ದಾನಪಾತ್ರರ ನಡುವೆ ಯಾವುದಾದರೂ ಹೊಂದಿಕೆ ಅಗತ್ಯವಿದೆಯೇ?
ಇಲ್ಲ, ಯಾರ ಚರ್ಮವನ್ನು ಯಾವುದೇ ವ್ಯಕ್ತಿಗೆ ಕಸಿ ಮಾಡಬಹುದಾಗಿದೆ. ಇಲ್ಲಿ ರಕ್ತದ ಗುಂಪು, ಬಣ್ಣ, ವಯಸ್ಸುಗಳು ಹೊಂದಿಕೆಯಾಗಬೇಕಾದ ಆವಶ್ಯಕತೆ ಇಲ್ಲ. ರಕ್ತದ ಪರೀಕ್ಷೆಯ ಫ‌ಲಿತಾಂಶಗಳು ನೆಗೆಟಿವ್‌ ಎಂದು ಬಂದ ಪಕ್ಷದಲ್ಲಿ ಚರ್ಮದ ಕಸಿಯನ್ನು ಮುಕ್ತವಾಗಿ ನಡೆಸಬಹುದಾಗಿದೆ.
 
18. ನಾವು ಚರ್ಮವನ್ನು ದಾನ ಮಾಡಲು ಬಯಸಿದರೆ, ಚರ್ಮನಿಧಿಗೆ ವಾಗ್ಧಾನ ಮಾಡುವುದು ಅಥವಾ ನೋಂದಾಯಿಸಿಕೊಳ್ಳುವುದು ಕಡ್ಡಾಯವೇ?
ಇಲ್ಲ, ಯಾವುದೇ ಚರ್ಮನಿಧಿಗೆ ವಾಗ್ಧಾನ ಮಾಡುವುದು ಅಥವಾ ನೋಂದಾಯಿಸಿಕೊಳ್ಳುವುದು ಕಡ್ಡಾಯವಲ್ಲ. ನೀವು ನೋಂದಾಯಿಸಿಕೊಳ್ಳದೆ ಇದ್ದರೂ ಚರ್ಮದಾನ ಮಾಡಬಹುದು, ಅದಕ್ಕೊಂದು ದೂರವಾಣಿ ಕರೆಯಷ್ಟೇ ಸಾಕು. ಆದರೆ, ನೀವು ನೋಂದಾಯಿಸಿಕೊಂಡಿರಿ ಎಂದಾದರೆ ಚರ್ಮನಿಧಿಯು ನಿಮಗೊಂದು ದಾನಿ ಗುರುತು ಪತ್ರ, ಚರ್ಮದಾನದ ಅಯಸ್ಕಾಂತೀಯ ಸ್ಟಿಕರ್‌ ಮತ್ತು “ನಾನು ಚರ್ಮದಾನಿ’ ಎಂದು ಉಲ್ಲೇಖೀಸಲಾದ ಪಾಕೆಟ್‌ ಕಾರ್ಡ್‌ ಗಳನ್ನು ಒದಗಿಸುತ್ತದೆ. ಇವು ನಿಮ್ಮ ಭವಿಷ್ಯತ್ತಿನ ಉಪಯೋಗಕ್ಕೆ. ನೀವು ಡಿಡಿಡಿ.skಜಿnಛಟnಚಠಿಜಿಟn.ಜಿn ಮೂಲಕ ಆನ್‌ಲೈನ್‌ ಆಗಿಯೂ ನೋಂದಾಯಿಸಿಕೊಳ್ಳ ಬಹುದಾಗಿದೆ.
 
19. ನಾವು ಚರ್ಮದಾನ ಮಾಡಬಯಸಿದರೆ, ಏನು ಮಾಡಬೇಕು?
ಆರು ತಾಸುಗಳ ಒಳಗಾಗಿ ನೀವಿದ್ದೆಡೆಗೆ ತನ್ನ ತಂಡವನ್ನು ಕಳುಹಿಸಬಲ್ಲಷ್ಟು ಸನಿಹವುಳ್ಳ ಚರ್ಮ ನಿಧಿಯನ್ನು ಸಂಪರ್ಕಿಸಿ. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ಶೀಘ್ರದಲ್ಲಿಯೇ ತನ್ನದೇ ಆದ ಚರ್ಮನಿಧಿಯನ್ನು ಸ್ಥಾಪಿಸಲಿದೆ. ಹೆಚ್ಚುವರಿ ಮಾಹಿತಿಗಾಗಿ ಅಲ್ಲಿನ ಸಹಾಯವಾಣಿಯನ್ನು ಸಂಪರ್ಕಿಸಿ.

Advertisement

Udayavani is now on Telegram. Click here to join our channel and stay updated with the latest news.

Next