ಬೆಡ್‌ಮಿನ್‌ಸ್ಟರ್: ಸಮರೋತ್ಸಾಹ ತೋರುತ್ತಿರುವ ಉತ್ತರ ಕೋರಿಯಾ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆಂಡ ಕಾರಿದ್ದು, ‘ಸುಟ್ಟು ಕರಕಲಾಗುತ್ತೀರಿ. ಇದುವರೆಗೆ ವಿಶ್ವವೇ ಕಂಡರಿಯದ ರೀತಿಯಲ್ಲಿ ದಾಳಿ ಮಾಡಬೇಕಾಗುತ್ತದೆ’ ಎಂದು ಮಂಗಳವಾರ ದಿಟ್ಟ ಎಚ್ಚರಿಕೆ ನೀಡಿದ್ದಾರೆ.
ನ್ಯೂಕ್ಲಿಯರ್ ಪರೀಕ್ಷೆ , ಖಂಡಾತರ್ಗಾಮಿ ಕ್ಷಿಪಣಿ ಪರೀಕ್ಷೆ ನಡೆಸುವ ಮೂಲಕ ಅಮೆರಿಕಕ್ಕೆ ಸವಾಲು ಎಸೆದಿದ್ದ ಉತ್ತರ ಕೊರಿಯಾ ‘ನಾವು ಅಮೆರಿಕ ಸೇನಾ ಕಾರ್ಯಾಚರಣೆ ನಡೆಸಿದರೆ ಪರಮಾಣು ಶಕ್ತಿಯ ಮೂಲಕ ವಾಷಿಂಗ್ಟನ್‌ಗೆ ಪಾಠ ಕಲಿಸಲು ಶಕ್ತರಿದ್ದೇವೆ’ ಎಂದಿತ್ತು.
ಟ್ರಂಪ್ ನ್ಯಾಷನಲ್ ಗಾಲ್ಫ್ ಕ್ಲಬ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಪ್ಯೋಂಗ್‌ಯಾಂಗ್‌ನ ಸಂದೇಶಕ್ಕೆ ಕಿಡಿ ಕಾರಿ ‘ಮತ್ತೆ ಅಮೆರಿಕಕ್ಕೆ ಬೆದರಿಕೆ ಹಾಕಿದರೆ ವಿಶ್ವವೇ ಕಂಡಿರದ ರೀತಿಯಲ್ಲಿ ಉತ್ತರ ಕೊಡುತ್ತೇವೆ’ ಎಂದು ಗುಡುಗಿದ್ದಾರೆ.
ಈಗಾಗಲೇ ವಿಶ್ವಸಂಸ್ಥೆ ಯ ಭದ್ರತಾ ಮಂಡಳಿ ಉತ್ತರ ಕೊರಿಯಾ ವಿರುದ್ಧ ಕಠಿಣ ಆರ್ಥಿಕ ದಿಗ್ಬಂಧನ ಹೇರಿದೆ. ಈ ನಿರ್ಧಾರವನ್ನು ಟ್ರಂಪ್ ಸೇರಿದಂತೆ 15 ರಾಷ್ಟ್ರಗಳು ಸ್ವಾಗತಿಸಿವೆ. ಆರ್ಥಿಕ ದಿಗ್ಬಂಧನದಿಂದಾಗಿ ಉತ್ತರ ಕೊರಿಯಾ ಆದಾಯಕ್ಕೆ ಭಾರೀ ಪೆಟ್ಟು ಬಿದ್ದಿದೆ.
ಉತ್ತರಕೋರಿಯಾ ಮತ್ತೆ ಕೆಣಕಿದರೆ ಬದ್ಧ ವೈರಿ ದಕ್ಷಿಣ ಕೊರಿಯಾ ಮತ್ತು ಜಪಾನ್‌ನ ಜೊತೆಗೂಡಿ ಅಮೆರಿಕ ಭಾರೀ ದಾಳಿ ನಡೆಸುವ ಸಾಧ್ಯತೆಗಳಿವೆ.