ರಿಯಾಧ್ : ಭಾರತವು ಭಯೋತ್ಪಾದನೆಗೆ ಬಲಿಪಶುವಾಗಿರುವ ದೇಶವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅರಬ್ ಮತ್ತು ಇಸ್ಲಾಮಿಕ್ ನಾಯಕರು “ಇಸ್ಲಾಮಿಕ್ ಭಯೋತ್ಪಾದನೆ’ಯನ್ನು ಮಟ್ಟ ಹಾಕುವಲ್ಲಿ ತಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ಮಾಡಬೇಕು ಎಂದು ಟ್ರಂಪ್ ಕರೆ ನೀಡಿದ್ದಾರೆ.
ಟ್ರಂಪ್ ಅವರು ನಿನ್ನೆ ಭಾನುವಾರ ರಿಯಾಧ್‌ನಲ್ಲಿ ಅರಬ್ ಇಸ್ಲಾಮಿಕ್ ಅಮೆರಿಕನ್ ಶೃಂಗ ಸಭೆಯಲ್ಲಿ ಮಾತನಾಡುತ್ತಿದ್ದರು.
ಪಾಕಿಸ್ಥಾನವನ್ನು ನೇರವಾಗಿ ಹೆಸರಿಸದೇ, ಎಲ್ಲ ಇಸ್ಲಾಮಿಕ್ ದೇಶಗಳು ತಮ್ಮ ನೆಲದಲ್ಲಿ ಇಸ್ಲಾಮಿಕ್ ಉಗ್ರರಿಗೆ ಯಾವುದೇ ರೀತಿಯ ಆಸರೆಯನ್ನು ನೀಡಬಾರದು; ಭಯೋತ್ಪಾದಕರ ಬಗ್ಗೆ ಯಾವುದೇ ತಾರತಮ್ಯ ತೋರದೆ ಎಲ್ಲ ಉಗ್ರರನ್ನು ಸದೆ ಬಡಿಯಬೇಕು ಎಂದು ಟ್ರಂಪ್ ಹೇಳಿದರು.
ಭಾರತವು ಭಯೋತ್ಪಾದನೆಗೆ ಬಲಿಪಶುವಾಗಿರುವ ದೇಶವಾಗಿದೆ; ಅರಬ್ ಮತ್ತು ಇಸ್ಲಾಮಿಕ್ ನಾಯಕರು ಭಯೋತ್ಪಾದನೆಯನ್ನು ಸೋಲಿಸಲು ತಮ್ಮ ನೆಲದಲ್ಲಿ ಅವುಗಳಿಗೆ ಯಾವುದೇ ನೆಲೆಯನ್ನು ಕಲ್ಪಿಸಕೂಡದು ಮತ್ತು ಭಯೋತ್ಪಾದನೆಯ ವಿರುದ್ಧ ಸಂಘಟಿತರಾಗಿ ಹೋರಾಡಬೇಕು ಎಂದು ಟ್ರಂಪ್ ಕರೆ ನೀಡಿದರು.
ಮುಸ್ಲಿಮರ ವಿರುದ್ಧ ಯಾವುದೇ ಕಟುವಾದ ಮಾತುಗಳನ್ನು ಆಡದಿದ್ದ ಟ್ರಂಪ್, ಇಸ್ಲಾಮಿಕ್ ಭಯೋತ್ಪಾದನೆಯನ್ನು ಅರಬ್ ಹಾಗೂ ಇಸ್ಲಾಮಿಕ್ ನಾಯಕರು ತಮ್ಮ ದೇಶಗಳಿಂದ ಹೊರಗಟ್ಟುವ ಕೆಲಸವನ್ನು ಮುಲಾಜಿಲ್ಲದೆ ಮಾಡಬೇಕು ಎಂದು ಹೇಳಿದರು. ಭಯೋತ್ಪಾದನೆಯನ್ನು ಮಟ್ಟ ಹಾಕುವುದಕ್ಕೆ ಅಮೆರಿಕ ಪೂರ್ಣ ಸಹಕಾರ ನೀಡಲಿದೆ ಎಂದು ಹೇಳಿದರು.