Advertisement

ಟ್ರಂಪ್‌ ಶ್ವೇತ ಭವನದೊಳಗೆ ಸುರಕ್ಷಿತರಲ್ಲ: ಮಾಜಿ ಸೀಕ್ರೆಟ್‌ ಏಜಂಟ್‌

04:49 PM Mar 18, 2017 | Team Udayavani |

ವಾಷಿಂಗ್ಟನ್‌ : ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಶ್ವೇತ ಭವನದೊಳಗೇ ಸುರಕ್ಷಿತರಾಗಿಲ್ಲ. ಶ್ವೇತ ಭವನದ ಮೇಲೆ ಒಂದೊಮ್ಮೆ ಭಯೋತ್ಪಾದಕ ದಾಳಿ ನಡೆದಲ್ಲಿ  ಸೀಕ್ರೆಟ್‌ ಸರ್ವಿಸ್‌ ದಳಕ್ಕೆ  ಕೂಡ ಟ್ರಂಪ್‌ ಅವರನ್ನು ರಕ್ಷಿಸಲು ಸಾಧ್ಯವಾಗದು ಎಂದು ಅಮೆರಿಕದ ಮಾಜಿ ಸೀಕ್ರೆಟ್‌ ಸರ್ವಿಸ್‌ ಏಜಂಟ್‌ ಡ್ಯಾನ್‌ ಬಾಂಗಿನೋ ಎಚ್ಚರಿಸಿದ್ದಾರೆ.

Advertisement

ಈಚೆಗೆ ವ್ಯಕ್ತಿಯೋರ್ವ ಅತ್ಯಂತ ಬಿಗಿ ಭದ್ರತೆಯ ಶ್ವೇತ ಭವನ ಆವರಣದ ಗೋಡೆ ಹಾರಿ ಒಳಬಂದು ಸುಮಾರು 15 ನಿಮಿಷಗಳ ಕಾಲ ಶ್ವೇತ ಭವನ ಆವರಣದ ತುಂಬೆಲ್ಲ ಓಡಾಡಿದ್ದು ಅದಾಗಿ ವಾರದ ಬಳಿಕ ಡ್ಯಾನ್‌ ಬಾಂಗಿನೋ  ಅವರು ಈ ಎಚ್ಚರಿಕೆಯನ್ನು ಕೊಟ್ಟಿರುವುದು ಗಮನಾರ್ಹವಾಗಿದೆ.

“ಆಗಂತುಕನು ಶ್ವೇತ ಭವನ ಆವರಣದ ಗೋಡೆ ಹಾರಿ ಒಳಪ್ರವೇಶಿಸಿ ಬಳಿಕ ಹಲವು ಹಂತಗಳ ಎಚ್ಚರಿಕೆಯ ಗಂಟೆ ಸದ್ದು ಮಾಡಿದೆ. ಈ ಆಗಂತುಕನನ್ನು  ಶ್ವೇತ ಭವನದ ಭದ್ರತಾ ಅಧಿಕಾರಿಗಳು ಕಂಡಿದ್ದಾರೆ. ಆದರೂ ಅವರು ಇದನ್ನು ಶ್ವೇತ ಭವನಕ್ಕೆ ಒದಗಿರುವ ಅಪಾಯದ ಮುನ್ನೆಚ್ಚರಿಕೆ ಎಂದು ತಿಳಿದಿಲ್ಲ; ಇದು ನಿಜಕ್ಕೂ ಒಂದು ದೊಡ್ಡ ಸಂಗತಿ’ ಎಂದು ಡ್ಯಾನ್‌ ಹೇಳಿರುವುದನ್ನು ಫಾಕ್ಸ್‌ ನ್ಯೂಸ ವರದಿ ಮಾಡಿದೆ.

ಬಾಂಗಿನೋ ಅವರು ಈ ಹಿಂದೆ ಅಮೆರಿಕದ ಅಧ್ಯಕ್ಷರಾಗಿದ್ದ ಬರಾಕ್‌ ಒಬಾಮಾ ಮತ್ತು ಜಾರ್ಜ್‌ ಡಬ್ಲ್ಯು ಬುಶ್‌ ಅವರಿಗೆ ಸೇವೆ ಸಲ್ಲಿಸಿದ್ದ ಸೀಕ್ರೆಟ್‌ ಸರ್ವಿಸ್‌ ಏಜಂಟ್‌ ಆಗಿದ್ದರು. 

“ಶ್ವೇತ ಭವನದ ಆವರಣ ಗೋಡೆ  ಹಾರಿ ಒಳ ಪ್ರವೇಶಿಸಿದ ಒಬ್ಬ ವ್ಯಕ್ತಿಯನ್ನು ಮಟ್ಟ ಹಾಕಲು ಸೀಕ್ರೆಟ್‌ ಸರ್ವಿಸ್‌ಗೆ ಸಾಧ್ಯವಾಗಿಲ್ಲ ಎಂದಾದರೆ 40 ಭಯೋತ್ಪಾದಕರು ಶ್ವೇತ ಭವನದ ಮೇಲೆ ದಾಳಿ ಮಾಡಿದರೆ ಅವರದನ್ನು ಹೇಗೆ ನಿಭಾಯಿಸಲು ಸಾಧ್ಯ ? ನನ್ನನ್ನು ನೀವು ನಂಬುವುದಾದರೆ, ನಾನು ಹೇಳುತ್ತೇನೆ, ಭಯೋತ್ಪಾದಕರು ಈಗಾಗಲೇ ಆ ರೀತಿಯಲ್ಲಿ  ಶ್ವೇತ ಭವನದ ಮೇಲೆ ದಾಳಿ ನಡೆಸಲು ಹೊಂಚು ಹಾಕುತ್ತಿದ್ದಾರೆ’ ಎಂದು ಬಾಂಗಿನೋ ಹೇಳಿದರು. 

Advertisement

26ರ ಹರೆಯದ ಕ್ಯಾಲಿಫೋರ್ನಿಯದ ಜೊನಾಥನ್‌ ಟಿ ಟ್ರಾನ್‌ ಎಂಬಾತ ಶ್ವೇತಭವನದ ಪೂರ್ವ ಭಾಗದಲ್ಲಿರುವ ಎಕ್ಸಿಕ್ಯುಟಿವ್‌ ಅವೆನ್ಯೂ ಮತ್ತು ಟ್ರೆಜರಿ ಡಿಪಾರ್ಟ್‌ಮೆಂಟ್‌ ಸಂಕೀರ್ಣದ ಬಳಿಯಿಂದ, ಗೋಡೆ ಹಾರಿ ಒಳಬಂದಿದ್ದ ರಾತ್ರಿ 11.21ರ ಹೊತ್ತಿಗೆ ಮತ್ತು ಆತ ಬಂಧಿಸಲ್ಪಟ್ಟ 11.38ರ ಹೊತ್ತಿಗೆ ಟ್ರಂಪ್‌ ಅವರು ಶ್ವೇತ ಭವನದ ತಮ್ಮ ನಿವಾಸದಲ್ಲಿದ್ದರು.

ಒಬಾಮಾ ಅವರು ಅಮೆರಿಕದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲೂ ಶ್ವೇತಭವನದ ಆವರಣದ ಗೋಡೆ ಹಾರಿ ಆಗಂತುಕರು ಒಳಬಂದ ಹಲವು ಪ್ರಕರಣಗಳು ನಡೆದಿದ್ದು ಆ ಮೂಲಕ ಶ್ವೇತ ಭವನದ ಭದ್ರತಾ ಲೋಪಗಳು ಬಹಿರಂಗವಾಗಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next