ನ್ಯೂಯಾರ್ಕ್: 2016ರ ಚುನಾವಣಾ ಪ್ರಚಾರದ ವೇಳೆ ಪಾರ್ನ್ ಸ್ಟಾರ್ ಗೆ ಹಣ ಪಾವತಿ ಮಾಡಿದ್ದಕ್ಕಾಗಿ ಡೊನಾಲ್ಡ್ ಟ್ರಂಪ್ ವಿರುದ್ಧ ಕ್ರಿಮಿನಲ್ ಆರೋಪ ಹೊರಿಸಲಾಗಿದೆ. ಟ್ರಂಪ್ ಅವರು ಮುಂದಿನ ವರ್ಷದ ಎರಡನೇ ಅಧ್ಯಕ್ಷೀಯ ಅವಧಿಗೆ ಪ್ರಚಾರ ಮಾಡುವಾಗಲೇ ಆರೋಪಗಳನ್ನು ಎದುರಿಸಬೇಕಾಗಿದೆ.
ಟ್ರಂಪ್- ಪಾರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್ಸ್ ಅವರ ನಡುವಿನ ವಿಚಾರ ಇದೀಗ ಅಮೆರಿಕದ ರಾಜಕೀಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ.
ಆಗ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಡೊನಾಲ್ಡ್ ಟ್ರಂಪ್, ಜುಲೈ 2006 ರಲ್ಲಿ ಗಾಲ್ಫ್ ಪಂದ್ಯಾವಳಿಯ ಸಂದರ್ಭದಲ್ಲಿ ಅಡಲ್ಟ್ ನಟಿ ಸ್ಟಾರ್ಮಿ ಡೇನಿಯಲ್ಸ್ ಅವರನ್ನು ಭೇಟಿಯಾದರು. ಆ ಸಮಯದಲ್ಲಿ ಡೇನಿಯಲ್ಸ್ ಗೆ 27 ಮತ್ತು ಟ್ರಂಪ್ ಗೆ 60 ವರ್ಷ ವಯಸ್ಸಿನವರಾಗಿದ್ದರು. ಟ್ರಂಪ್ ಮೂರನೇ ಪತ್ನಿ ಮೆಲಾನಿಯಾ ಸುಮಾರು ನಾಲ್ಕು ತಿಂಗಳ ಮೊದಲು ಮಗ ಬ್ಯಾರನ್ ಗೆ ಜನ್ಮ ನೀಡಿದ್ದರು. ಡೇನಿಯಲ್ಸ್ 2018 ರಲ್ಲಿ ಪ್ರಕಟವಾದ ತನ್ನ ಪುಸ್ತಕ ‘ಫುಲ್ ಡಿಸ್ಕ್ಲೋಸರ್’ ನಲ್ಲಿ ಟ್ರಂಪ್ ಜೊತೆಗಿನ ತನ್ನ ಎನ್‌ಕೌಂಟರ್ ಬಗ್ಗೆ ವಿವರಿಸಿದ್ದಾರೆ.
ಇದನ್ನೂ ಓದಿ:ಡೈಲಿ ಡೋಸ್: ಎತ್ತಿನ ಗಾಡಿ ಬದಲಾಗೋದಿಲ್ಲ – ಬರೋರು ಬದಲಾಗ್ತಾರೆ !
ಆದರೆ ಟ್ರಂಪ್ ಅವರು ಆಕೆಯಿಂದ ಎಂದಿಗೂ ಲೈಂಗಿಕತೆಯನ್ನು ಹೊಂದಿರಲಿಲ್ಲ ಎಂದು ಹೇಳಿದ್ದಾರೆ, ಅಲ್ಲದೆ ಡೇನಿಯಲ್ಸ್ ಸುಲಿಗೆ ಮತ್ತು ವಂಚನೆ ಮಾಡುವ ಹುನ್ನಾರ ಎಂದು ಆರೋಪಿಸಿದ್ದಾರೆ.
2016 ರಲ್ಲಿ ಟ್ರಂಪ್ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದಾಗ ಟ್ರಂಪ್ ಅವರ ವೈಯಕ್ತಿಕ ವಕೀಲ ಮತ್ತು ಫಿಕ್ಸರ್ ಮೈಕೆಲ್ ಕೋಹೆನ್ ಅವರು 2006 ರ ಪ್ರಯತ್ನದ ಬಗ್ಗೆ ಮೌನವಾಗಿರುವುದಕ್ಕಾಗಿ ಡೇನಿಯಲ್ಸ್ ಗೆ 130,000 ಡಾಲರ್ ಹಣ ನೀಡಲು ಏರ್ಪಡಿಸಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ.
ಅಧ್ಯಕ್ಷೀಯ ಚುನಾವಣೆಗೆ ಸಿದ್ದತೆಯಲ್ಲಿರುವಾಗಲೇ ಈ ವಿಚಾರ ಮುನ್ನೆಲೆಗೆ ಬಂದಿದೆ. ಆದರೆ ಇದನ್ನು ಟ್ರಂಪ್ ನಿರಾಕರಿಸಿದ್ದು, ಇದು ಚುನಾವಣಾ ಸಮಯದ ಹುನ್ನಾರ ಎಂದಿದ್ದಾರೆ.