ಹೊಸದಿಲ್ಲಿ/ ಡೊಮಿನಿಕಾ: ಭಾರತದಲ್ಲಿ ಬಹುಕೋಟಿ ರೂ. ವಂಚಿಸಿ ಪರಾರಿಯಾಗಿರುವ ವಜ್ರೋದ್ಯಮಿ ಮೆಹುಲ್ ಚೋಕ್ಸಿಗೆ ಜಾಮೀನು ಮಂಜೂರು ಮಾಡಲು ಡೊಮಿನಿಕಾದ ಹೈಕೋರ್ಟ್ ನಿರಾಕರಿಸಿದೆ. ಚೋಕ್ಸಿ ಮತ್ತೆ ಪರಾರಿಯಾಗುವ ಅಪಾಯ ಇರುವ ಕಾರಣ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಚೋಕ್ಸಿಗೆ ಆರೋಗ್ಯ ಸಮಸ್ಯೆಯಿದ್ದು, ಆತ ದೇಶ ಬಿಟ್ಟು ಹೋಗುವ ಯಾವುದೇ ಅವಕಾಶವಿಲ್ಲ. ಅದಲ್ಲದೆ ಆತ ಕೆರಿಬಿಯನ್ ನಾಡಿನ ನಾಗರಿಕನಾದ ಕಾರಣ ಆತನಿಗೆ ಜಾಮೀನು ನೀಡಬೇಕು ಎಂದು ಚೋಕ್ಸಿ ಪರ ವಕೀಲರು ಮನವಿ ಮಾಡಿದರು.
ಇದನ್ನೂ ಓದಿ:ಪಾಕ್ ಗ್ರಾಹಕರು, ಸೇನಾ ಘಟಕದ ಸಂಪರ್ಕ! ಇಬ್ರಾಹಿಂ ಪುಲ್ಲಟ್ಟಿಯಿಂದ ಸ್ಫೋಟಕ ಮಾಹಿತಿ ಬಹಿರಂಗ
ಆದರೆ ಚೋಕ್ಸಿ ವಿರುದ್ಧ ಇಂಟರ್ ಪೋಲ್ ನೋಟಿಸ್ ಇದೆ. ಅನಾರೋಗ್ಯ ಸಂಬಂಧ ಆತನಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ ಎಂದು ಕೋರ್ಟ್ ಹೇಳಿತು. ಆತ ಮತ್ತೆ ಪರಾರಿಯಾಗುವ ಸಾಧ್ಯತೆ ಹೆಚ್ಚಿರುವ ಕಾರಣ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿತು.
ಮೆಹುಲ್ ಚೋಕ್ಸಿ ವಿರುದ್ಧ ಅಕ್ರಮವಾಗಿ ದ್ವೀಪ ರಾಷ್ಟ್ರಕ್ಕೆ ಪ್ರವೇಶಿಸಿದ ಆರೋಪವಿದೆ. ಈ ಹಿಂದೆ ಚೋಕ್ಸಿ ಡೊಮಿನಿಕಾದ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ಅಲ್ಲಿ ಜಾಮೀನು ಅರ್ಜಿಯನ್ನು ತಿರಸ್ಕಾರವಾದ ನಂತರ ಮೆಹುಲ್ ಚೋಕ್ಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅದಲ್ಲದೆ, ಡೊಮಿನಿಕನ್ ಸರ್ಕಾರ ಗುರುವಾರ ಚೋಕ್ಸಿಯನ್ನು ರಾಷ್ಟ್ರದ ‘ನಿಷೇಧಿತ ವಲಸಿಗ’ ಎಂದು ಘೋಷಿಸಿದೆ. ಇದು ಮೆಹುಲ್ ಚೋಕ್ಸಿಗೆ ಮತ್ತಷ್ಟು ಮುಳುವಾಗುವ ಸಾಧ್ಯತೆಯಿದೆ.