ಜಮ್ಮು-ಕಾಶ್ಮೀರ: ಜಮ್ಮು-ಕಾಶ್ಮೀರ ಕಾರಾಗೃಹ ಇಲಾಖೆಯ ಪೊಲೀಸ್ ಮಹಾನಿರ್ದೇಶಕ ಹೇಮಂತ್ ಕುಮಾರ್ ಲೋಹಿಯಾ(57ವರ್ಷ) ಅವರ ಕೊಲೆ ಪ್ರಕರಣದಲ್ಲಿ ಶಾಮೀಲಾಗಿದ್ದ ಪ್ರಮುಖ ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ಮಂಗಳವಾರ (ಅಕ್ಟೋಬರ್ 04) ತಿಳಿಸಿದ್ದಾರೆ.
ಇದನ್ನೂ ಓದಿ:ಅಮೇರಿಕದಲ್ಲಿ 8 ತಿಂಗಳ ಮಗು ಸೇರಿ ಭಾರತೀಯ ಮೂಲದ ನಾಲ್ವರ ಅಪಹರಣ
ಲೋಹಿಯಾ ಅವರ ಮನೆ ಕೆಲಸದ ಸಹಾಯಕ ಯಾಸಿರ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದು, ಆತನ ಪತ್ತೆಗಾಗಿ ಜಮ್ಮು-ಕಾಶ್ಮೀರ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಯಾಸಿರ್ ವಿಚಾರಣೆ ನಡೆಯುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಪೊಲೀಸ್ ಮಹಾನಿರ್ದೇಶಕ ಲೋಹಿಯಾ ಅವರ ಶವ ಸೋಮವಾರ ರಾತ್ರಿ ಪತ್ತೆಯಾಗಿತ್ತು. ಲೋಹಿಯಾ ಅವರ ಕೊಲೆ ಕೃತ್ಯದಲ್ಲಿ ಶಾಮೀಲಾಗಿದ್ದ ಮನೆಗೆಲಸದ ಸಹಾಯಕ ಯಾಸಿರ್ ಲೋಹರ್(23ವರ್ಷ) ತಲೆಮರೆಸಿಕೊಂಡಿದ್ದ.
ಮತ್ತೊಂದೆಡೆ ಕಾರಾಗೃಹ ಇಲಾಖೆ ಪೊಲೀಸ್ ಮಹಾನಿರ್ದಶಕ ಲೋಹಿಯಾ ಅವರ ಹತ್ಯೆಯ ಹೊಣೆಯನ್ನು ಪೀಪಲ್ ಆ್ಯಂಟಿ ಫ್ಯಾಸಿಸ್ಟ್ ಫ್ರಂಟ್ ಭಯೋತ್ಪಾದಕ ಸಂಘಟನೆ ಹೊತ್ತುಕೊಂಡಿರುವುದಾಗಿ ವರದಿ ತಿಳಿಸಿತ್ತು.
ರಂಬಾನ್ ಜಿಲ್ಲೆಯ ಹಲ್ಲಾ ಧಾಂಡ್ರಾತ್ ಗ್ರಾಮದ ನಿವಾಸಿ, ಶಂಕಿತ ಆರೋಪಿ ಯಾಸಿರ್ ಬಂಧನಕ್ಕಾಗಿ ಹಲವು ತಂಡಗಳನ್ನು ರಚಿಸಲಾಗಿತ್ತು ಎಂದು ಪೊಲೀಸ ಅಧಿಕಾರಿಗಳು ತಿಳಿಸಿದ್ದರು. ಹೇಮಂತ್ ಕುಮಾರ್ ಲೋಹಿಯಾ ಅವರನ್ನು ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರದ ಕಾರಾಗೃಹ ಇಲಾಖೆಯ ಪೊಲೀಸ್ ಮಹಾನಿರ್ದೇಶಕರನ್ನಾಗಿ ಆಗಸ್ಟ್ ನಲ್ಲಿ ನೇಮಕ ಮಾಡಲಾಗಿತ್ತು.
ಆರೋಪಿ ಯಾಸಿರ್ ಕಳೆದ ಆರು ತಿಂಗಳಿನಿಂದ ಲೋಹಿಯಾ ಅವರ ನಿವಾಸದಲ್ಲಿ ಕೆಲಸ ಮಾಡುತ್ತಿದ್ದು, ಈತ ಮುಂಗೋಪಿ ಸ್ವಭಾವದನಾಗಿದ್ದ ಎಂದು ಪ್ರಾಥಮಿಕ ತನಿಖಾ ವರದಿ ತಿಳಿಸಿದೆ. ಆರೋಪಿ ಫೋಟೋವನ್ನು ಜಮ್ಮು-ಕಾಶ್ಮೀರ ಪೊಲೀಸರು ಬಿಡುಗಡೆಗೊಳಿಸಿದ್ದಾರೆ.