ಮುಂಬಯಿ: ಅಂಧಕಾರದಿಂದ ಬೆಳಕಿನೆಡೆಗೆ ಸಾಗುತ್ತ ಉಚ್ಚ ಶಿಕ್ಷಣವನ್ನು ಪಡೆದು ರಾಷ್ಟ್ರಸೇವೆಗೆ ಬದ್ಧರಾಗುವುದರ ಮೂಲಕ ಹೆತ್ತವರನ್ನು, ಕಲಿತ ಶಾಲೆಯನ್ನು, ಕಲಿಸಿದ ಗುರುಗಳನ್ನು ಎಂದಿಗೂ ಮರೆಯದೆ, ಅವರಿಗೆ ಕೀರ್ತಿ ತರುವ ಸಾಧನೆಯನ್ನು ಮಕ್ಕಳು ಮಾಡಬೇಕು. ಕೇವಲ ಶಿಕ್ಷಣವನ್ನು ಪಡೆದರೆ ಸಾಲದು, ಸುಸಂಸ್ಕೃತರಾಗಿ, ಆದರ್ಶಪ್ರಜೆಗಳಾಗಿ ಬೆಳೆಯಬೇಕು ಎಂದು ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷ ವಿಟಲ ಎ. ಶೆಟ್ಟಿ ಅವರು ನುಡಿದರು.
ಫೆ. 15ರಂದು ಡೊಂಬಿವಲಿ ಕರ್ನಾಟಕ ಸಂಘ ಸಂಚಾಲಿತ ಮಂಜುನಾಥ ವಿದ್ಯಾಲಯದ ಸಭಾಗೃಹದಲ್ಲಿ ನಡೆದ ಸಂಸ್ಥೆಯ ಎಸ್‌ಎಸ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಶಿಕ್ಷಣದ ಮಹತ್ವ ಬಹಳಷ್ಟಿದೆ. ವಿಶ್ವವನ್ನೇ ಬದಲಾಯಿಸಬಲ್ಲ ಛಲವನ್ನು ಹೊಂದಿರುವ ವಿದ್ಯಾರ್ಥಿಗಳು ಮೊದಲು ತಮ್ಮನ್ನು ತಾವು ಪರಿವರ್ತಿಸಿಕೊಳ್ಳಬೇಕು ಎಂದು ಕರೆನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಡೊಂಬಿವಲಿ ಕರ್ನಾಟಕ ಸಂಘದ ಕಾರ್ಯಾಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ ಅವರು ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ಎಡರು-
ತೊಡರುಗಳು ಬರುವುದು ಸಾಮಾನ್ಯ. ಅವುಗಳಿಗೆ ಎದೆಗುಂದದೆ ಹೋರಾಡಿದಾಗ ಮಾತ್ರ ಮನುಷ್ಯ ಯಶಸ್ವಿಯಾಗುತ್ತಾನೆ. ಹೋರಾಟ ನಮ್ಮಲ್ಲಿಯ ಗೆಲುವಿನ ಸಾಮರ್ಥ್ಯವನ್ನು ಹೆಚ್ಚಿಸುತ್ತಿದ್ದು, ವಿದ್ಯಾರ್ಥಿಗಳು ಈ ಮುಖಾಂತರ ಯಶಸ್ವಿಯಾಗಿ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರಬಲವಾದ ಇಚ್ಛಾಶಕ್ತಿ ಹಾಗೂ ಸಾಧಿಸುವ ಛಲವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡು ಯಶಸ್ವಿ ಪ್ರಜೆಗಳಾಗಿ ಬಾಳಬೇಕು ಎಂದು ಸಂಘದ ಉಪ ಕಾರ್ಯಾಧ್ಯಕ್ಷ ಸುಕುಮಾರ್ ಎನ್. ಶೆಟ್ಟಿ ಅವರು ನುಡಿದರು. ಸಂಘದ ಉಪಾಧ್ಯಕ್ಷ ಡಾ| ದಿಲೀಪ್ ಖೋಪರ್ಡೆ ಅವರು ಶಿಕ್ಷಣ ವ್ಯಕ್ತಿಯ ಪರಿಪೂರ್ಣತೆಯ ಸ್ವರೂಪವಾಗಿದೆ ಎಂದು ನುಡಿದು ಶಿಕ್ಷಣದ ಮಹತ್ವವನ್ನು ವಿವರಿಸಿದರು.
ಸಂಘದ ಕಾರ್ಯದರ್ಶಿ ದೇವದಾಸ್ ಕುಲಾಲ್, ಶಾಲೆಯ ಇಂಗ್ಲೀಷ್ ವಿಭಾಗದ ಮುಖ್ಯ ಶಿಕ್ಷಕಿ ಕಸ್ತೂರಿ ಕೆ., ಕನ್ನಡ ವಿಭಾಗದ ಮುಖ್ಯಶಿಕ್ಷಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನಗೈದರು. ಎಸ್‌ಎಸ್‌ಸಿ ವಿದ್ಯಾರ್ಥಿಗಳು ತಮ್ಮ ಶಾಲಾ ಜೀವನದ ಬಗ್ಗೆ ಮಾತನಾಡಿದರು. ಹಿರಿಯ ಶಿಕ್ಷಕಿ ಸುಪ್ರಿಯಾ ಶೆಟ್ಟಿ, ಗೌರಿ ಕೊಡಿಯಾಳ, ರಮಾ ತೋರವಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಿಕ್ಷಕಿ ಲತಾ ರಮೇಶ್ ಸ್ವಾಗತಿಸಿ ವಂದಿಸಿದರು. ಸುರೇಖಾ ಪಂಡಿತ್ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.