ದೋಹಾ: ಕತಾರ್ ನ ಏಷಿಯನ್ ಕ್ರಿಕೆಟ್ ಆಟದ ಮೈದಾನದಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ 10ನೇ ಆವೃತ್ತಿಯನ್ನು ಭಾರತೀಯ ರಾಜದೂತಾವಾಸದ ನೇತೃತ್ವದಲ್ಲಿ ಭಾರತೀಯ ಕ್ರೀಡಾ ಕೇಂದ್ರದ ಸಹಯೋಗದೊಂದಿಗೆ ಬೃಹತ್ ಗಾತ್ರದಲ್ಲಿ ಆಯೋಜಿಸಲಾಗಿತ್ತು. ಈ ಯೋಗ ಸಮಾವೇಶವನ್ನು ಭಾರತೀಯ ಸಾಂಸ್ಕೃತಿಕ ಕೇಂದ್ರ ಐಸಿಸಿ, ಭಾರತೀಯ ಸಮುದಾಯ ಹಿತೈಷಿ ವೇದಿಕೆ ಐಸಿಬಿಎಫ್, ಹಾಗೂ ಭಾರತೀಯ ವ್ಯಾಪಾರಿಗಳ ಹಾಗೂ ವೃತ್ತಿಪರ ಸಮಿತಿಗಳ ಐಬಿಪಿಸಿ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿತ್ತು.
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಚಿತ್ರಣ ಪ್ರದರ್ಶಿಸುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.
ಭಾರತೀಯ ರಾಯಭಾರಿ ವಿಪುಲ್ ಅವರು ಸ್ವಾಗತಿಸಿ ಈ ವರ್ಷದ ಪ್ರಮುಖ ವಿಷಯವಾದ “ಸ್ವಯಂ ಹಾಗೂ ಸಮಾಜಕ್ಕೆ ಯೋಗ” ಎಂಬುದರ ಬಗ್ಗೆ ಒತ್ತು ನೀಡಿ “ಮಾನವನ ಸಂಪೂರ್ಣ ಅಭಿವೃದ್ಧಿಗೆ ಭಾರತದ ಪುರಾತನ ಸಾಂಪ್ರದಾಯದ ಯೋಗವು ಮಹತ್ತರ ಕೊಡುಗೆ ನೀಡುತ್ತದೆ ಎಂದು ಉಲ್ಲೇಖಿಸಿದರು. ನಿರಂತರವಾಗಿ ಯೋಗಾಭ್ಯಾಸ ಹಾಗೂ ಧ್ಯಾನ ಪ್ರಾಣಾಯಾಮಗಳನ್ನು ಮಾಡುವುದರ ಮೂಲಕ ಮನುಷ್ಯನ ಮನಸ್ಸು ಹಾಗೂ ಶರೀರಕ್ಕೆ ಸಕಾರಾತ್ಮಕ ಪರಿವರ್ತನೆ ಆಗುತ್ತದೆ ಹಾಗೂ ಪ್ರಕೃತಿಯ ಸಮೀಪ ಕರೆದುಕೊಂಡು ಹೋಗುವುದಲ್ಲದೆ ಸಮಾಜದಲ್ಲಿ ಸೌಹಾರ್ದತೆಯನ್ನು ಪಸರಿಸುವಲ್ಲಿ ಕಾರಣವಾಗುತ್ತದೆ” ಎಂದು ಹೇಳಿದರು.
ಹಿರಿಯರು ಹಾಗೂ ಕಿರಿಯರು ಸೇರಿ ಉತ್ಸಾಹ ಹಾಗೂ ಉಲ್ಲಾಸದಿಂದ ಯೋಗಾಭ್ಯಾಸವನ್ನು ಮಾಡಿದರು. ಕಾರ್ಯಕ್ರಮದ ಕಾರಣಕರ್ತರಾದ ಭಾರತೀಯ ಕ್ರೀಡಾ ಕೇಂದ್ರ, ಭಾರತೀಯ ಸಾಂಸ್ಕೃತಿಕ ಕೇಂದ್ರ, ಭಾರತೀಯ ಸಮುದಾಯ ಹಿತೈಷಿ ವೇದಿಕೆ ಮತ್ತು ಭಾರತೀಯ ವ್ಯಾಪಾರ ಹಾಗೂ ವೃತ್ತಿಪರ ಸಮಿತಿಯ ಅಧ್ಯಕ್ಷರುಗಳನ್ನು ಸನ್ಮಾನಿಸಿ ಕಾರ್ಯಕ್ರಮವನ್ನು ಪೂರ್ಣಗೊಳಿಸಲಾಯಿತು.
ಈ ಯೋಗಾಭ್ಯಾಸ ಮಹತ್ತರ ಕಾರ್ಯಕ್ರಮದಲ್ಲಿ ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆಗಮಿಸಿದ್ದ 2,000ಕ್ಕೂ ಹೆಚ್ಚು ಜನರಿಗೆ ಯೋಗಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಸ್ಥಳದಲ್ಲಿ ಕಿರು ಉಡುಗೊರೆಗಳನ್ನು ವಿತರಿಸಲಾಯಿತು. ಈ ರಸಪ್ರಶ್ನೆ ಕಾರ್ಯಕ್ರಮಕ್ಕೆ ಕಾರಣರಾದವರು ಬೈಂದೂರು ಮೂಲದವರಾದ ಭಾರತೀಯ ಸಾಂಸ್ಕೃತಿಕ ಕೇಂದ್ರದ ಪ್ರಸ್ತುತ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು.