ಮಂಡ್ಯ: ಸ್ಮಶಾನದಲ್ಲಿ ಸಂಪೂರ್ಣವಾಗಿ ಶವಗಳನ್ನು ಸುಡದ ಹಿನ್ನೆಲೆಯಲ್ಲಿ ನಾಯಿಗಳು ಶುಕ್ರವಾರ ದಾಳಿ ಇಟ್ಟು ಅರೆಬೆಂದ ಶವಗಳನ್ನು ತಿಂದಿರುವ ಘಟನೆ ನಡೆದಿದೆ.
ಕಳೆದ ಮರ‍್ನಾಲ್ಕು ದಿನಗಳಿಂದ ನಗರದಲ್ಲಿ ಜಿಟಿಜಿಟಿ ಮಳೆ ಸುರಿದಿದ್ದರಿಂದ ನಗರದ ಶಂಕರನಗರದ ಸ್ಮಶಾನದಲ್ಲಿ ಶವಗಳ ಅಂತ್ಯಸAಸ್ಕಾರ ಮಾಡಲಾಗಿದೆ. ಆದರೆ ಮಳೆಯಿಂದ ಶವಗಳು ಸಂಪೂರ್ಣವಾಗಿ ಸುಟ್ಟಿಲ್ಲ. ಇದರಿಂದ ನಾಯಿಗಳಿಗೆ ಆಹಾರವಾಗಿದೆ.
ಸತ್ತ ಮೇಲೂ ಮನುಷ್ಯನಿಗೆ ಸಂಸ್ಕಾರದ ಮುಕ್ತಿ ಸಿಗದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸ್ಮಶಾನದಲ್ಲಿ ಪ್ರತ್ಯೇಕವಾಗಿ ಶವ ಸುಡಲು ಮೇಲ್ಛಾವಣಿವಿರುವ ಜಾಗವಿದ್ದರೂ ಶವ ಸಂಸ್ಕಾರ ಮಾಡಲು ಬಂದಿದ್ದವರು ಅದನ್ನು ಬಳಸದೆ ಬೇರೆಡೆ ಶವ ಸುಟ್ಟಿದ್ದಾರೆ. ಇದರಿಂದ ಮಳೆ ಬಂದ ಹಿನ್ನೆಲೆಯಲ್ಲಿ ಬೆಂಕಿ ನಂದಿ ಹೋಗಿದ್ದು, ಶವ ಸಂಸ್ಕಾರ ಮಾಡಿದವರು ಸಂಪೂರ್ಣವಾಗಿ ಸುಟ್ಟಿದೆ ಎಂದು ತಿಳಿದು ಹೋಗಿದ್ದಾರೆ.
ಸ್ಮಶಾನದಲ್ಲಿ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ. ಸುತ್ತಲೂ ಕಾಂಪೌAಡ್ ವ್ಯವಸ್ಥೆ ಮಾಡಲಾಗಿದ್ದು, ಗೇಟ್ ಇದ್ದರೂ ನಾಯಿಗಳು ದಾಳಿ ಇಟ್ಟು, ಅರೆಬೆಂದ ಶವದ ಭಾಗಗಳನ್ನು ಎಳೆದಾಡಿ ತಿಂದು ಹಾಕಿವೆ.
ಈ ರೀತಿಯ ಬೇಜವಾಬ್ದಾರಿಯಿಂದ ಶವಗಳನ್ನು ತಿನ್ನುವ ನಾಯಿಗಳು ಮಾಂಸಕ್ಕಾಗಿ ಮನುಷ್ಯರ ಮೇಲೆ ದಾಳಿ ಮಾಡಲು ಮುಂದಾಗುತ್ತವೆ. ಈಗಾಗಲೇ ನಗರದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಹಿಳೆಯರು, ಮಕ್ಕಳು, ವಯಸ್ಸಾದವರು ಸೇರಿದಂತೆ ಒಂಟಿಯಾಗಿ ಓಡಾಡುವವರನ್ನು ಗುರಿಯಾಗಿಸಿಕೊಂಡು ನಾಯಿಗಳು ದಾಳಿ ಮಾಡಿರುವ ಘಟನೆಗಳು ನಗರದಲ್ಲಿ ಆಗಾಗ್ಗೆ ಜರುಗುತ್ತಲೇ ಇವೆ.
ಆದ್ದರಿಂದ ಶವ ಸಂಸ್ಕಾರ ಮಾಡಲು ಬರುವ ಸಾರ್ವಜನಿಕರು ಮೇಲ್ಛಾವಣಿ ಇರುವ ಜಾಗದಲ್ಲಿ ಶವ ಸಂಸ್ಕಾರ ಮಾಡಬೇಕು. ಅಲ್ಲದೆ, ಸಂಪೂರ್ಣವಾಗಿ ಸುಟ್ಟಿರುವುದನ್ನು ಖಾತರಿಪಡಿಸಿಕೊಂಡು ನಂತರ ತೆರಳುವುದು ಒಳ್ಳೆಯದು ಎಂದು ಸ್ಥಳೀಯರು ತಿಳಿಸಿದ್ದಾರೆ.