ಮನುಷ್ಯನ ಅಚ್ಚುಮೆಚ್ಚಿನ ಸಂಗಾತಿ ನಾಯಿ. ಇತ್ತೀಚಿನ ದಿನಗಳಲ್ಲಿ ಈ ಶ್ವಾನಪ್ರೀತಿ ಮತ್ತಷ್ಟು ಹೆಚ್ಚಾಗಿದೆ. ಮಕ್ಕಳಿಗಿಂತ ನಾಯಿಗಳನ್ನು ಮುದ್ದು ಮಾಡಿ ಸಾಕುವವರು, ಮಕ್ಕಳೇ ಬೇಡ ನಾಯಿಯೇ ಸಾಕು ಅನ್ನುವವರೂ ಇದ್ದಾರೆ. ಅಂಥ ಶ್ವಾನಪ್ರೇಮಿಗಳಿಗೊಂದು ಸಿಹಿ ಸುದ್ದಿಯಿದೆ. ನಗರದಲ್ಲಿ, ಅಖಿಲ ಭಾರತ ಶ್ವಾನ ಪ್ರದರ್ಶನ ನಡೆಯುತ್ತಿದ್ದು, ಅಲ್ಲಿ ನಿಮ್ಮ ಪ್ರೀತಿಯ ನಾಯಿಯ ಸೌಂದರ್ಯ ಹಾಗೂ ಬುದ್ಧಿಮತ್ತೆಯನ್ನು ಪ್ರದರ್ಶಿಸಲು ಅವಕಾಶವಿದೆ.
ಸಿಲಿಕಾನ್ ಸಿಟಿ ಕೆನಲ್‌ಕ್ಲಬ್ ಆಯೋಜಿಸಿರುವ ಈ ಪ್ರದರ್ಶನವು, ಕೋರೆಹಲ್ಲು ನಾಯಿಗಳ ಕುರಿತು ಜನಪ್ರಿಯತೆ ಮೂಡಿಸುವ ಉದ್ದೇಶ ಹೊಂದಿದೆ. ಸುಮಾರು 50 ತಳಿಯ, 500 ಶ್ವಾನಗಳು ಭಾಗವಹಿಸಲಿವೆ. ವಿಶೇಷ ತಳಿಗಳಾದ ಅಕಿತಾ, ಮಾಲ್ಟಿಸ್, ಷ್ನಾಜರ್, ಸೈಬೀರಿಯನ್ ಹಸ್ಕಿ, ಬೆಲ್ಜಿಯನ್ ಶೆಫರ್ಡ್, ಅಫಘಾನ್‌ಹೌಂಡ್ ನಾಯಿಗಳಷ್ಟೇ ಅಲ್ಲದೆ, ಜರ್ಮನ್ ಶೆಫರ್ಡ್, ಡಾಬರ್‌ಮನ್, ಲ್ಯಾಬ್ರಡಾರ್ ರಿಟ್ರೈವರ್,
ಗೋಲ್ಡನ್ ರಿಟ್ರೈವರ್, ಬಾಕ್ಸರ್, ಗ್ರೇಟ್ ಡೇನ್,ಕಾಕರ್ ಸ್ಪೇನಿಯೆಲ್ ಶ್ವಾನಗಳೂ ಇರಲಿವೆ. ನಮ್ಮ ಹೆಮ್ಮೆಯ ಮುಧೋಳ ನಾಯಿಗಳು, ಪ್ರದರ್ಶನದ ವಿಶೇಷ ಆಕರ್ಷಣೆ. ಶ್ವಾನ ಹಾಗೂ ಇತರೆ ಸಾಕುಪ್ರಾಣಿಗಳ ಉತ್ಪನ್ನಗಳ ಮಾರಾಟ ನಡೆಯಲಿದೆ. ನ್ಯೂಜಿಲೆಂಡ್‌ನ ಯವೊನೆ ಸ್ಮಿತ್, ಜಾನ್ ಸ್ಟಾಂಟನ್, ಥಾಯ್‌ಲ್ಯಾಂಡ್‌ನ ಫ್ರೆಡ್ ವಾಂಗ್ ಮತ್ತು ಟಿ. ಪ್ರೀತಮ್, ಸ್ಪರ್ಧೆಯ ತೀರ್ಪುಗಾರರಾಗಿ ಭಾಗವಹಿಸುವರು.
ಎಲ್ಲಿ?: ಪಶುವೈದ್ಯ ಕಾಲೇಜು ಆವರಣ, ಹೆಬ್ಬಾಳ
ಯಾವಾಗ?: ನ. 9- 10ರಂದು, ಬೆಳಗ್ಗೆ 9- 5