ಬೆಂಗಳೂರು: “ಸಮಾಜಮುಖೀ ಕಾವ್ಯರಚನೆ ಮಾಡದಿದ್ದರೆ ಆತ ಸಾಹಿತಿಯೇ ಅಲ್ಲ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಅರವಿಂದ ಮಾಲಗತ್ತಿ ಅಭಿಪ್ರಾಯಪಟ್ಟಿದ್ದಾರೆ. ಸ್ವಾಭಿಮಾನಿ ಕರ್ನಾಟಕ ವೇದಿಕೆ ಬುಧವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ. ನರಸಿಂಹಮೂರ್ತಿ ಹೂವಿನಹಳ್ಳಿ ಅವರ “ಅರಿವಿನ ಕನ್ನಡಿ’ ಮತ್ತು “ಮೌನದ ಸೆರಗು’, ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕವಿ ರಚಿಸುವ ಕಾವ್ಯ ಯಾವಾಗಲೂ ಸಮಾಜಮುಖೀ ಚಿಂತನೆಗಳನ್ನು ಬಿತ್ತಬೇಕು ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಕಾವ್ಯ ಯಾವ ದಿಕ್ಕಿನತ್ತ ಸಾಗುತ್ತಿದೆ ಎಂಬುದೇ ಅರ್ಥವಾಗತ್ತಿಲ್ಲ. ದಲಿತ, ಬಂಡಾಯ ಸಾಹಿತ್ಯ ಮತ್ತು ಮಹಿಳಾ ಕಾವ್ಯಗಳ ಒಳಹರಿವು ಈ ಹಿಂದಿನಂತೆ ಇರದೆ, ತೀರಾ ಗೌಣವಾಗಿವೆ. ಜಾಗತೀಕರಣದ ನಂತರದ ಪ್ರಭಾವವು ಕೂಡ ಕಾವ್ಯ ರಚನೆಯ ದಿಕ್ಕನ್ನೇ ಬದಲಾಯಿಸಿದೆ ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಕಾವ್ಯ ಹೆಚ್ಚು ಪ್ರಬಲವಾಗುತ್ತಿದ್ದು, ಕಾವ್ಯ ರಚನೆ ಸಾಲು ಮಾತ್ರ ಕಿರಿದಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಸಾಹಿತ್ಯ ರಚನೆ ಮೇಲೂ ಗಂಭೀರ ಪ್ರಭಾವ ಬೀರುವ ಸಾಧ್ಯತೆ ಇದ್ದು, ಕಾವ್ಯ ರಚನೆಯ ಸಾಲುಗಳು ಕಿರಿದಾಗುತ್ತಿರುವ ಕುರಿತಂತೆ ಎಚ್ಚರವಹಿಸಬೇಕು ಎಂದರು.
ಹೋರಾಟಗಾರರ ಸಂಪುಟ: ಪುಸ್ತಕದ ಬಿಡುಗಡೆ ನೆಪದಲ್ಲಿ ಆಗಾಗ ಸಾಹಿತಿಗಳ ಕುರಿತು ಚರ್ಚೆಗಳು ನಡೆಯುತ್ತಲೆ ಇರು
ತ್ತವೆ. ಆದರೆ, ಕನ್ನಡಪರ ಹೋರಾಟಗಾರರ ಬಗ್ಗೆ ಚರ್ಚೆ ನಡೆಯುವುದಿಲ್ಲ. ಕನ್ನಡ, ನೆಲ ಜಲಕ್ಕಾಗಿ ಹಲವು ಮುಂದಿ ಹೋರಾಡಿದ್ದಾರೆ. ಅವರ ಸಾಹಸಗಳ ಬಗ್ಗೆ ವಿಚಾರ ಸಂಕಿರಣ ನಡೆಯಬೇಕು. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿ ಮುಂದಿನ ದಿನಗಳಲ್ಲಿ ಕನ್ನಡ ಹೋರಾಟಗಾರರ ಕುರಿತು ಸಂಪುಟ ಹೊರತರಲಿದೆ ಎಂದು ಹೇಳಿದರು. ಕೃತಿ ಕುರಿತು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಶಿವಾರೆಡ್ಡಿ ಮಾತನಾಡಿದರು.
ಇದೇ ವೇಳೆ ಮಾಜಿ ಮಹಾಪೌರ ಜೆ.ಹುಚ್ಚಪ್ಪ ಮತ್ತು ಕನ್ನಡಪರ ಹೋರಾಟಗಾರ ನರಸಿಂಹಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಲೇಖಕ ಡಾ.ನರಸಿಂಹಮೂರ್ತಿ ಹೂವಿನ ಹಳ್ಳಿ, ಸ್ವಾಭಿಮಾನಿ ಕರ್ನಾಟಕ ವೇದಿಕೆ ಅಧ್ಯಕ್ಷ ದ್ವಾರನಕುಂಟೆ ಪಾತಣ್ಣ, ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಶೇಖರಗೌಡ ಮಾಲಿ ಪಾಟೀಲ್, ತಿಮ್ಮಯ್ಯ ಎಂ. ಮತ್ತಿತರರು ಉಪಸ್ಥಿತರಿದ್ದರು.