ಮಾರಕ ಕೋವಿಡ್ ವೈರಸ್ ಜಗತ್ತನ್ನೇ ಆಂತಂಕಕ್ಕೆ ದೂಡಿದೆ. ಇನ್ನು ಕೋವಿಡ್ ಕೊಡುತ್ತಿರುವ ಪೆಟ್ಟು ಸಹಿಸಿಕೊಳ್ಳಲಾಗದೆ ದೊಡ್ಡಣ್ಣ ಅಮೆರಿಕವೇ ಪೇಚಿಗೆ ಸಿಲುಕಿರುವಾಗ ಕೆಲ ದೇಶಗಳು ಈ ವೈರಾಣುವಿನ ಹೆಡೆಮುರಿಕಟ್ಟಿ ಗಮನಸೆಳೆದಿವೆ. ವಿಶೇಷವೆಂದರೆ ಈ ದೇಶಗಳನ್ನೆಲ್ಲಾ ಆಳುತ್ತಿರುವುದು ಮಹಿಳೆಯರು!
ಮಹಿಳೆಯರ ನಾಯಕತ್ವದಲ್ಲಿ ಮುನ್ನಡೆಯುತ್ತಿರುವ ಹಾಗೂ ಕೋವಿಡ್ ವೈರಸ್‌ನ ಪ್ರಭಾವವನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿರುವ ಆರು ದೇಶಗಳು, ಅವುಗಳ ನಾಯಕಿಯರ ಭಾವಚಿತ್ರಗಳನ್ನು ಒಳಗೊಂಡ ಪೋಸ್ಟ್ ಒಂದು ಟ್ವಿಟರ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ.
ಜೆಸಿಂಡಾ ಅಂರ್ಡೆರ್ನ್ ಪ್ರಧಾನಿಯಾಗಿರುವ ನ್ಯೂಜಿಲೆಂಡ್‌ನಲ್ಲಿ ಕೈಗೊಂಡ ದೊಡ್ಡ ಮಟ್ಟದ ಪರೀಕ್ಷಾ ಕಾರ್ಯದಿಂದಾಗಿ ಎರಡು ದಿನಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ತೀವ್ರ ಕುಸಿದಿದೆ. ಜೊತೆಗೆ ನಿಮಗೆ ಕೋವಿಡ್ ವೈರಸ್ ಸೋಂಕು ತಗುಲಿದೆ ಎಂದೇ ಎಲ್ಲರೂ ಭಾವಿಸಿ ಎಂದು ಜೆಸಿಂಡಾ ನೀಡಿದ ಕರೆಗೆ ಇಡೀ ದೇಶವೇ ಓಗೊಟ್ಟಿದೆ. ಇನ್ನು ಚಾನ್ಸೆಲರ್ ಏಂಜೆಲಾ ಮಾರ್ಕೆಲ್ ನೇತೃತ್ವದ ಜರ್ಮನಿಯಲ್ಲಿ ಈವರೆಗೆ 52,407 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಅದೇ ರೀತಿ ಸೋಫಿ ವಿಲ್ಮಾಸ್ ಪ್ರಧಾನಿಯಾಗಿರುವ ಬೆಲ್ಜಿಯಂ, ಪ್ರಧಾನಿ ಸನ್ನಾ ಮರಿನ್ ನೇತೃತ್ವದ ಫಿನ್ಲಂಡ್, ಕ್ಯಾಟ್ರಿನ್ ಜಾಕೊಬ್ಸ್ಡೊಟ್ಟಿರ್ ಪ್ರಧಾನಿಯಾಗಿರುವ ಐಸ್‌ಲ್ಯಾಂಡ್, ಮೆಟ್ಟೆ ಫ್ರೆಡ್ರಿಕ್ಸೆನ್ ನಾಯಕತ್ವದ ಡೆನ್ಮಾರ್ಕ್ ದೇಶದಲ್ಲೂ ಕೋವಿಡ್ ವೈರಸ್ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲಾಗಿದೆ. ಮಾರಣಾಂತಿಕ ವೈರಸ್ ಮಣಿಯಲು ಈ ಮಹಿಳಾಮಣಿಗಳು ಕೈಗೊಂಡ ದಿಟ್ಟ ಕ್ರಮಗಳೇ ಕಾರಣ ಎಂದು ಟ್ವೀಟಿಗರು ಹಾಡಿ ಹೊಗಳುತ್ತಿದ್ದಾರೆ.