Advertisement
ನಗರದ ಬನ್ನಿಮಂಟಪದ ಬಳಿ 13 ಎಕರೆ ವಿಶಾಲ ಪ್ರದೇಶದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ನಿರ್ಮಾಣವಾಗಿದ್ದ ಸುಂದರ ಬಾಲ ಭವನ ಇಂದು ಸಂಪೂರ್ಣ ನಶಿಸಿದೆ. ರೈಲು ನಿಲ್ದಾಣದ ಮಾದರಿ, ರೈಲು ಹಳಿ, ಎಂಜಿನ್ ಸುತ್ತ ಕಳೆ ಬೆಳೆದು ತನ್ನ ಅವನತಿಯನ್ನು ಸಾರಿ ಹೇಳುತ್ತಿವೆ. ಒಂದು ಕಾಲದಲ್ಲಿ ಮಕ್ಕಳಿಂದ ತುಂಬಿತುಳುಕುತ್ತಿದ್ದ ಬಾಲಭವನದ ರೈಲು ನಿಲ್ದಾಣ ಇದೀಗ ಚಿಣ್ಣರಿಲ್ಲದೆ ಬಿಕೋ ಎನ್ನುತ್ತಿದೆ.
Related Articles
Advertisement
ಒಕ್ಕಲೆಬ್ಬಿಸುವ ಯತ್ನ: ಸದ್ಯಕ್ಕೆ ಬಾಲ ಭವನವಿರುವ ಸ್ಥಳ ಮುಡಾಕ್ಕೆ ಸೇರಿದ ಆಸ್ತಿಯಾಗಿದ್ದು, 30 ವರ್ಷಗಳ ಅವಧಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಬಾಲ ಭವನಕ್ಕಾಗಿ ಗುತ್ತಿಗೆ ನೀಡಿತ್ತು. ಆದರೆ, ಈಗ ಗುತ್ತಿಗೆ ಅವಧಿ ಮುಗಿದಿದ್ದು, ಸ್ಥಳವನ್ನು ಮುಡಾಗೆ ಒಪ್ಪಿಸುವಂತೆ ಪಟ್ಟು ಹಿಡಿದಿದೆ. ಈಗಿರುವ ಬಾಲ ಭವನವನ್ನು ಬೇರೆಡೆ ಸ್ಥಳಾಂತರ ಮಾಡಿ, ಜಾಗವನ್ನು ನಮಗೆ ಹಸ್ತಾಂತರಿಸಿದರೆ ನಾವು ಉದ್ಯಾನ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಾಧ್ಯವಾಗಲಿದೆ ಎಂಬುದು ಮುಡಾ ವಾದ.
ಆದರೆ, ಈಗಿರುವ ವಿಶಾಲ ಪ್ರದೇಶ ನಗರದಲ್ಲಿ ಬೇರೆಲ್ಲೂ ಲಭ್ಯವಾಗದ ಕಾರಣ ಗುತ್ತಿಗೆಯನ್ನು ಮುಂದುವರಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಬಾಲ ಭವನ ಸಮಿತಿ ಹೇಳುತ್ತಿದೆ. ಈ ಎರಡೂ ಇಲಾಖೆಗಳ ಸಂಘರ್ಷದಿಂದ ಬಾಲ ಭವನ ಬಡವಾಗಿದೆ. ಕಳೆದ ನಾಲ್ಕು ವರ್ಷದ ಹಿಂದೆ ಶಾಲಾ ಮಕ್ಕಳೆಲ್ಲಾ ಈ ಪುಟಾಣಿ ರೈಲಿನಲ್ಲಿ ಕುಳಿತು ಸಂಚರಿಸುತ್ತಿದ್ದರು.
ಆದರೆ, ಈ ಜಾಗದ ಲೀಸ್ ಅವಧಿ ಮುಗಿದ ಕಾರಣ ಮುಡಾ ತನ್ನ ಸುಪರ್ಧಿಗೆ ತೆಗೆದುಕೊಂಡು ಮತ್ತಷ್ಟು ಅಭಿವೃದ್ಧಿ ಮಾಡುವ ಭರವಸೆ ನೀಡಿತ್ತು. ಆದರೆ, ಸೂಕ್ತ ನಿರ್ವಹಣೆ ಇಲ್ಲದೇ ಸದ್ಯ ಪಾಳು ಬಿದ್ದ ಕೊಂಪೆಯಾಗಿದೆ. ಮುಡಾ ಸಹಕಾರವಿಲ್ಲದೆ ಏನನ್ನೂ ಮಾಡಲಾಗದು. ಈ ಸಂಬಂಧ ಸರಕಾರಕ್ಕೂ ಪತ್ರ ಬರೆಯಲಾಗಿತ್ತು. ಆದರೆ, ಏನು ಪ್ರಯೋಜವಾಗಿಲ್ಲ ಎಂದು ಬಾಲ ಭವನದ ಪ್ರಧಾನ ಸಂಘಟಕರಾದ ಕೃಷ್ಣಮೂರ್ತಿ ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಸದ್ಯ ಬಾಲಭವನವೇ ಪಾಳು ಬಿದ್ದ ಕೊಂಪೆಯಂತಾಗಿದ್ದು, 60 ಮಕ್ಕಳು ಕುಳಿತುಕೊಳ್ಳಬಹುದಾದಷ್ಟು ಆಸನಗಳಿರುವ ಭೋಗಿಗಳು ಶಿಥಿಲಾವಸ್ಥೆಗೆ ತಲುಪಿವೆ. ಮೂರು ದೊಡ್ಡ ಮತ್ತು ಮೂರು ಚಿಕ್ಕ ಭೋಗಿಗಳನ್ನು ಶೆಡ್‌ನಲ್ಲಿ ಇರಿಸಲಾಗಿದೆ. ಆದರೂ ಮಳೆ ನೀರು ಸೋರಿ ತುಕ್ಕು ಹಿಡಿಯುತ್ತಿದೆ. ನ್ಯಾರೋ ಗೇಜ್ ರೈಲು ಮಾರ್ಗದ ಹಳಿಗಳ ಕೆಳಗೆ ಹಾಕಿರುವ ಮರದ ಪಟ್ಟಿಗಳು ಗೆದ್ದಲು ತಿನ್ನುತ್ತಿದೆ. ಮಕ್ಕಳ ಉದ್ಯಾನ ಆವರಣ ಗಿಡಗಂಟಿಗಳಿಂದ ಓಡಾಡಲಾಗದ ಸ್ಥಿತಿ ನಿರ್ಮಾಣವಾಗಿದೆ.
ಪರಿಣಾಮ ರಾತ್ರಿ ಪುಂಡರಿಗೆ ತಾಣವಾಗಿದ್ದು, ಅಲ್ಲಲ್ಲಿ ಬಿಯರ್ ಮತ್ತು ಮದ್ಯದ ಬಾಟಲ್‌ಗಳು ಬಿದ್ದಿವೆ. ಜೊತೆಗೆ ಬಾಲಭವನದ ಸಭಾಂಗಣದ ಗೋಡೆಗಳು ಬಿರುಕು ಬಿಟ್ಟಿವೆ. ಮಕ್ಕಳ ರಂಗ ಮಂದಿರದ ಒಳಹೊಕ್ಕರೆ ಹಳೆಕಾಲದ ಟೆಂಟ್‌ಗೆ ಹೋದ ಅನುಭವವಾಗುತ್ತದೆ. ಕುಡಿಯುವ ನೀರು, ವಿದ್ಯುತ್, ವ್ಯವಸ್ಥೆಯೂ ಇಲ್ಲ. ಮಕ್ಕಳ ಮತ್ತು ಸಾರ್ವಜನಿಕ ಶೌಚಾಲಯದ ಬಾಗಿಲು, ಹೆಂಚುಗಳು ಮುರಿದು ಬಿದ್ದು, ತನ್ನ ಅವನತಿಯನ್ನು ತೋರ್ಪಡಿಸುತ್ತಿವೆ.
ಬಾಲಭವನ ಪಾಳು ಬೀಳಲು ಮೂಲ ಕಾರಣ ಏನು?: ಬಾಲ ಭವನವಿರುವ 13 ಎಕರೆ ಜಮೀನು ಮುಡಾಕ್ಕೆ ಸೇರಿದ ಆಸ್ತಿಯಾಗಿದೆ. 30 ವರ್ಷಗಳ ಅವಧಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಬಾಲ ಭವನಕ್ಕಾಗಿ ಗುತ್ತಿಗೆ ನೀಡಿತ್ತು. ಆದರೆ, ಈಗ ಗುತ್ತಿಗೆ ಅವಧಿ ಮುಗಿದಿದ್ದು, ಸ್ಥಳವನ್ನು ಮುಡಾಗೆ ಒಪ್ಪಿಸುವಂತೆ ಪಟ್ಟು ಹಿಡಿದಿದೆ. ಕರಾರು ಅವಧಿ ಮುಗಿದ ಬಳಿಕ ಮುಡಾ ತನ್ನ ಸುಪರ್ಧಿಗೆ ತೆಗೆದುಕೊಂಡು ಅಭಿವೃದ್ಧಿ ಪಡಿಸಲಾಗುವುದು ಎಂದು ಭರವಸೆ ನೀಡಿತ್ತು.
ಆದರೆ, ಇರುವ ವ್ಯವಸ್ಥೆಯನ್ನು ಮುಂದುವರಿಸುವುದಾಗಲೀ, ನವೀಕರಿಸುವುದಾಗಲೀ ಮಾಡಲು ಮುಡಾ ಅಧಿಕಾರಿಗಳು ಆಸಕ್ತಿ ತೋರಲೇ ಇಲ್ಲ. ಬಾಲಭವನವನ್ನು ಅಭಿವೃದ್ಧಿಪಡಿಸಲು ಕೆಲ ವರ್ಷಗಳ ಹಿಂದೆ ಮುಡಾ ಮುಂದಾಗಿತ್ತು. ಅದಕ್ಕಾಗಿ 5 ಕೋಟಿ ರೂ. ಮಂಜೂರು ಮಾಡಿ ವಿವಿಧ ಕಾಮಗಾರಿ ಕೈಗೊಂಡಿತ್ತು.
ದುಂಡಾಕೃತಿಯ ಮಕ್ಕಳ ವಿಶ್ರಾಂತಿ ತಾಣ, ನಲ್ಲಿಗಳನ್ನು ಅಳವಡಿಸಿರುವ ಎರಡು ನೀರಿನ ದೊಡ್ಡ ತೊಟ್ಟಿಗಳು, ಶೌಚಾಲಯ ಕಟ್ಟಡ, ಮಕ್ಕಳ ವಿವಿಧ ಗೇಮಿಂಗ್ ಅಂಕಣದ ಬೃಹತ್ ಕಟ್ಟಡ, ಮೇಕಪ್ ಕೊಠಡಿ, ಎರಡು ಕಡೆ ಕ್ಯಾಂಟೀನ್ ಮತ್ತು ಐಸ್ ಕ್ರೀಂ ಪಾರ್ಲರ್ ನಿರ್ಮಿಸಿತ್ತು. ಜೊತೆಗೆ ಮಕ್ಕಳ ಪುಟಾಣಿ ರೈಲು ಎಂದಿನಂತೆ ಓಡಿಸುವ ಗುರಿ ಇಟ್ಟುಕೊಂಡಿತ್ತು. ಆದರೆ, ಕಟ್ಟಡಗಳನ್ನು ನಿರ್ಮಿಸಿ ಏಕಾಏಕಿ ಕಾಮಗಾರಿ ಸ್ಥಗಿತಗೊಳಿಸಿತು. ಅಂದಿನಿಂದ ಬಾಲಭವನಕ್ಕೆ ಹಿಡಿದ ಗ್ರಹಣ ಇನ್ನೂ ಬಿಟ್ಟಿಲ್ಲ.
ಬಾಲಭವನ ಸಮಿತಿ ಏನು ಹೇಳುತ್ತೆ?: ಬಾಲಭವನ ಒಂದು ಸೊಸೈಟಿ ಇದಕ್ಕೆ ಸರ್ಕಾರದಿಂದ ಹೆಚ್ಚು ಅನುದಾನ ಬರುವುದಿಲ್ಲ. ಹಾಗಾಗಿ ಅಭಿವೃದ್ಧಿಪಡಿಸಲು ಕಷ್ಟವಾಗಿದೆ. ಈಗಿರುವ ಸ್ಥಳ ಮುಡಾಗೆ ಸೇರಿದ್ದು. ಅದಕ್ಕಾಗಿ ಅವರು ಬಾಲ ಭವನವನ್ನು ಬೇರೆಡೆ ಸ್ಥಳಾಂತರ ಮಾಡಿ ನಮಗೆ ಜಾಗ ಬಿಟ್ಟುಕೊಡಿ ಎನ್ನುತ್ತಿದ್ದಾರೆ. ನಗರದಲ್ಲಿ ಆಯಕಟ್ಟಿನ ಜಾಗದ ಕೊರತೆ ಇದೆ. ಈಗಿರುವ ಸ್ಥಳ ಮಕ್ಕಳ ಬಾಲ ಭವನಕ್ಕೆ ಸೂಕ್ತವಾಗಿದೆ. ಒಂದು ವೇಳೆ ಒಕ್ಕಲೆಬ್ಬಿಸಿದರೆ ಶಾಶ್ವತವಾಗಿ ಬಾಲ ಭವನ ಮುಚ್ಚಿದಂತಾಗುತ್ತದೆ. ಈ ಬಗ್ಗೆ ಸರ್ಕಾರದ ಗಮನ ಸೆಳೆದು ಪರಿಹಾರ ಕಂಡುಕೊಳ್ಳಲಾಗುವುದು ಎಂದು ಬಾಲ ಭವನ ಸಮಿತಿ ಅಧ್ಯಕ್ಷರೂ ಆದ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜ್ಯೋತಿ ತಿಳಿಸಿದ್ದಾರೆ.
ಲಕ್ಷಾಂತರ ರೂ. ಮೌಲ್ಯದ ಪುಸ್ತಕಗಳು ಮಕ್ಕಳ ಉಪಯೋಗಕ್ಕೆ ಬಾರದೇ ಬಾಲ ಭವನದ ಕೊಠಡಿಯಲ್ಲಿ ದೂಳು ಹಿಡಿಯುತ್ತಿವೆ. ನಾಲ್ಕು ವರ್ಷಗಳ ಹಿಂದೆ ಮಕ್ಕಳು ಬರುತ್ತಿದ್ದರು. ಆಟವಾಡಿ ಜೊತೆಗೆ ಪುಸ್ತಕಗಳನ್ನು ಓದುತ್ತಿದ್ದರು. ಆದರೆ, ಯಾವುದೇ ವ್ಯವಸ್ಥೆ ಇಲ್ಲವಾದ ಕಾರಣ ಮಕ್ಕಳು ಇತ್ತ ಸುಳಿಯುವುದೇ ಇಲ್ಲ.-ಬಾಲಭವನ ಕಾವಲುಗಾರ ಸುಂದರವಾಗಿ ನಿರ್ಮಿಸಿದ್ದ ಉದ್ಯಾನ ನಿರ್ವಹಣೆ ಇಲ್ಲದೆ ಗಿಡಗಂಟಿಗಳು ಬೆಳೆದು ಹಾವು, ಚೇಳುಗಳ ಆವಾಸ ಸ್ಥಾನವಾಗಿದೆ. ಗುತ್ತಿಗೆ (ಲೀಸ್) ಕರಾರು ಅವಧಿ ನವೀಕರಣಗೊಳಿಸುವಂತೆ ಮುಡಾಗೆ ಹಲವು ಪತ್ರಗಳನ್ನು ಬರೆದರೂ ಮುಡಾ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಬೆಂಗಳೂರಿನ ಬಾಲಭವನ ಸೊಸೈಟಿ ಸಹ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆದಿದೆ. ಆದರೆ, ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.
-ಕೃಷ್ಣಮೂರ್ತಿ, ಬಾಲ ಭವನದ ಪ್ರಧಾನ ಸಂಘಟಕ ಬಾಲ ಭವನದ ಸ್ಥಳ ಮುಡಾಕ್ಕೆ ಸೇರಿದ್ದು. ಮಕ್ಕಳಿಗಾಗಿ ಬಾಲ ಭವನ ಆರಂಭಿಸಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಡುವೆ 30 ವರ್ಷಗಳ ಅವಧಿಯ ಕರಾರಾಗಿತ್ತು. ಈ ಅವಧಿ ಈಗಾಗಲೇ ಪೂರ್ಣಗೊಂಡಿದೆ. ಪ್ರಾಧಿಕಾರದ ಸಭೆಯಲ್ಲಿ ಬಾಲ ಭವನದ ಸ್ಥಳವನ್ನು ತನ್ನ ಸುಪರ್ದಿಗೆ ತೆಗೆದುಕೊಂಡು, ಅಭಿವೃದ್ಧಿಪಡಿಸಲು ನಿರ್ಣಯಿಸಲಾಗಿತ್ತು ಅದರಂತೆ ಆ ಜಾಗವನ್ನು ಹಸ್ತಾಂತರ ಮಾಡಿ ಎಂದು ಜಿಲ್ಲಾ ಪಂಚಾಯ್ತಿ ಸಿಇಒಗೆ ಪತ್ರ ಬರೆಯಲಾಗಿದೆ. ನಮಗೆ ಹಸ್ತಾಂತರ ಮಾಡಿದ ಕೂಡಲೇ ಖಾಸಗಿ ಸಂಸ್ಥೆ ಸಹಯೋಗದಲ್ಲಿ ಆ ಸ್ಥಳವನ್ನು ಅಭಿವೃದ್ಧಿ ಪಡಿಸಲಾಗುವುದು.
-ಕಾಂತರಾಜು, ಆಯುಕ್ತ, ಮುಡಾ * ಸತೀಶ್ ದೇಪುರ