ಉಡುಪಿ: ದೊಡ್ಡಣಗುಡ್ಡೆ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿಯವರ ಮಾರ್ಗದರ್ಶನದಲ್ಲಿ ವೇ|ಮೂ| ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ವಿಜಯದಶಮಿ ಪರ್ವಕಾಲದಲ್ಲಿ ಆರಾಧನಾ ರಂಗಪೂಜಾ ಸಹಿತ ಬಲಿ ಉತ್ಸವ ಮಂಗಳವಾರ ಸಂಪನ್ನಗೊಂಡಿತು.
ಶರನ್ನವರಾತ್ರಿ ಪರ್ವಕಾಲದಿಂದ ಆರಂಭಗೊಂಡ ಎಲ್ಲ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಂಗಳ ಹಾಡುವ ದೊಡ್ಡರಂಗಪೂಜಾ ಮಹೋತ್ಸವದಲ್ಲಿ ತಪ್ತತ್ ದೇವತೆಗಳನ್ನು ನೈವೇದ್ಯದಿಂದ ದೇವಿಯ ಧ್ಯಾನದಿಂದ ದೀಪಾರಾಧನೆ ಸಹಿತ ಸಂತೃಪ್ತಿಗೊಳಿಸಲಾಯಿತು.
ಪಳ್ಳಿ ಗುರುರಾಜ ಭಟ್ ಬಲಿ ಉತ್ಸವ ನೆರವೇರಿಸಿದರು. ಕ್ಷೇತ್ರದ ಸ್ವಾತಿ ಆಚಾರ್ಯರಿಂದ ವಿಶೇಷ ನೃತ್ಯ ಸುತ್ತು, ಪ್ರಣಮ್ಯಾ ರಾವ್ ಅವರಿಂದ ಯಕ್ಷ ನೃತ್ಯ, ಬೆಳ್ಮಣ್ಣು ವನದುರ್ಗಾ ಪಲ್ಲಕಿ ಬಳಗದವರಿಂದ ಪಲ್ಲಕಿ ಉತ್ಸವ, ಬೆಳ್ಕಳೆ ಮಹಾಲಿಂಗೇಶ್ವರ ಚೆಂಡೆ ಬಳಗದವರಿಂದ ಚೆಂಡೆ ಸುತ್ತು, ಗುಂಡಿಬೈಲಿನ ಕಾಲಭೈರವ ಭಜನ ಮಂಡಳಿಯಿಂದ ಭಜನೆ ಸುತ್ತು, ಮುದ್ರಾಡಿ ವಿಜಯ ಶೇರಿಗಾರ್ ಅವರಿಂದ ಸ್ಯಾಕ್ಸೋಪೋನ್ ಸುತ್ತು, ಮುರಳೀಧರ ಮುದ್ರಾಡಿಯವರಿಂದ ನಾದಸ್ವರ ವಾದನ ಹಾಗೂ ಪಂಚ ವಾದ್ಯಗಳು ನೃತ್ಯ ಸುತ್ತಿನ ಆಕರ್ಷಣೆಯಾಗಿತ್ತು.
ವಸಂತ ಪೂಜೆಯಲ್ಲಿ ಅರವಿಂದ ಹೆಬ್ಟಾರ್, ಸಮನ್ವಿ, ಅರ್ಚನಾ ಸಂಗೀತ ಸೇವೆ ನೀಡಿದರು. ಋತ್ವಿಜರು ಅಷ್ಟಾವಧಾನ ನಡೆಸಿದರು. ಈಶಾನ್ ಕೌಂಡಿನ್ಯ ಅವರ ನೃತ್ಯಕ್ಕೆ ಚೆನ್ನೈಯ ವಿ| ಅಭಿಷೇಕ್ ಚಂದ್ರಶೇಖರ್ ಸಂಗೀತ ನೀಡಿದರು. ವಸಂತ ಪೂಜೆಯಲ್ಲಿ ದೇವಿಗೆ ಸಮರ್ಪಿಸಲಾದ ನೈವೇದ್ಯವನ್ನು ಭಕ್ತರಿಗೆ ವಿತರಿಸಲಾಯಿತು. ರಂಗಪೂಜೆಯ ಅನ್ನಮುದ್ರೆ ಸೇವನೆಯ ಫಲವನ್ನರಿತ ಭಕ್ತರು ಅನ್ನಮುದ್ರೆಗಾಗಿ ಕ್ಷೇತ್ರದಲ್ಲಿ ಕಾದು ಸ್ವೀಕರಿಸಿದರು ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.
ಮಹಾ ಸಂಪ್ರೋಕ್ಷಣೆ-ಮಂತ್ರಾಕ್ಷತೆ
ಉತ್ಸವ ಸಮಾಪ್ತಿಯ ಬಳಿಕ ನಡೆಸಲ್ಪಡುವ ಶುದ್ಧ ಪ್ರಕ್ರಿಯೆ ಹಾಗೂ ದೇವರನ್ನು ಯಥಾಸ್ಥಿತಿಗೆ ಕೊಂಡೊಯ್ಯುವುದೇ ಮಹಾಸಂಪ್ರೋಕ್ಷಣೆ. ಉತ್ಸವದ ಪರ್ವಕಾಲದಲ್ಲಿ ಜ್ಞಾತ ಅಜ್ಞಾತವಾಗಿ ನಡೆದ ಅಶುದ್ಧಿ ನಿವಾರಣೆಗೆ ನಡೆಸಲಾಗುತ್ತದೆ. ಗ್ರಾಮ ರಾಷ್ಟ್ರದ ಸುಭಿಕ್ಷೆಗಾಗಿ ನಡೆಸುವ ಪ್ರಕ್ರಿಯೆಯು ಮಹಾಮಂತ್ರಾಕ್ಷತೆಯಾಗಿದೆ. ಉತ್ಸವದಲ್ಲಿ ನಡೆಸಿದ ಎಲ್ಲ ಪೂಜಾಫಲಗಳು ಅಡಕವಾಗಿರುವ ಮಂತ್ರಾಕ್ಷತೆಯನ್ನು ಯಾರು ತಮ್ಮ ಶಿರಸ್ಸಿನಲ್ಲಿ ಧಾರಣೆ ಮಾಡುತ್ತಾರೋ ಅಂತಹವರು ದೇವರ ಪೂರ್ಣಾನುಗ್ರಹಕ್ಕೆ ಪಾತ್ರರಾಗುತ್ತಾರೆ. ಮಂತ್ರಾಕ್ಷತೆಯನ್ನು ಶಿಲೆಯ ಮೇಲೆ ಹಾಕಲ್ಪಟ್ಟರೆ ಶಿಲೆಯಲ್ಲಿ ದೇವರು ನೆಲೆಸುತ್ತಾನೆ. ಕ್ಷೇತ್ರದ ತಂತ್ರಿಗಳಿಂದ ಭಕ್ತರು ದೇವ ಮಂತ್ರಾಕ್ಷತೆಯನ್ನು ಹಾಕಿಸಿಕೊಂಡಾಗ ಶೂರರಾಗುತ್ತಾರೆ ಎಂದು ಹೇಳಲ್ಪಟ್ಟಿದೆ. ದೇವರ ಆಶೀರ್ವಾದ ರೂಪದ ಅನುಗ್ರಹ ಪ್ರಸಾದವೆಂದು ಮಂತ್ರಾಕ್ಷತೆ ಗುರುತಿಸಲ್ಪಟ್ಟಿದೆ ಎಂದು ಧರ್ಮದರ್ಶಿ ರಮಾನಂದ ಗುರೂಜಿ ತಿಳಿಸಿದ್ದಾರೆ.