Advertisement

ಸೌಲಭ್ಯ ವಂಚಿತ ನಂದನವನ ಪಾರ್ಕ್‌

12:56 AM Mar 05, 2020 | Sriram |

ಉಡುಪಿ: ದೊಡ್ಡಣಗುಡ್ಡೆಯ ಕರ್ನಾಟಕ ಜನತಾ ಕಾಲನಿಯಲ್ಲಿರುವ ನಂದನವನ ಪಾರ್ಕ್‌ನಲ್ಲಿ ವಾಕಿಂಗ್‌ ಟ್ರ್ಯಾಕ್‌ ಬಿಟ್ಟರೆ ಯಾವುದೇ ಸುಸಜ್ಜಿತ ವ್ಯವಸ್ಥೆ ಇಲ್ಲ. ಖಾಲಿ ಮೈದಾನದಂತಿರುವ ಈ ಪಾರ್ಕ್‌ಗೆ ಭೇಟಿ ನೀಡುವವರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಕೂಡ ಇಲ್ಲದಿರುವುದರಿಂದ ಭೇಟಿ ನೀಡುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ.

Advertisement

ದೊಡ್ಡಣಗುಡ್ಡೆ ಪ್ರದೇಶದಲ್ಲಿ ಸಾವಿರಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದು ಬೆಳಗ್ಗೆ, ಸಾಯಂಕಾಲ ಸಮಯಗಳಲ್ಲಿ ಈ ಪಾರ್ಕ್‌ಗೆ ಭೇಟಿ ಕೊಡುತ್ತಾರೆ. ಇತ್ತೀಚೆಗೆ ಪಾರ್ಕ್‌ ಒಂದೊಂದೇ ಮೂಲಭೂತ ಸೌಕರ್ಯಗಳಿಂದ ವಿಮುಖವಾಗುತ್ತಿದ್ದಂತೆ ಭೇಟಿ ನೀಡುವವರ ಸಂಖ್ಯೆಯೂ ಕಡಿಮೆಯಾಯಿತು ಎಂದು ಸ್ಥಳೀಯರು ಅಭಿಪ್ರಾಯ ಪಡುತ್ತಾರೆ.

ತೆರವು
2ವರ್ಷಗಳ ಹಿಂದೆ ಪಾರ್ಕ್‌ಗೆ ಇಂಟರ್‌ಲಾಕ್‌ ಅಳವಡಿಸುವ ಸಂದರ್ಭದಲ್ಲಿ ಆಸನ, ಸೇರಿದಂತೆ ಕಾರಂಜಿ ಹಾಗೂ ಮಕ್ಕಳ ಆಟೋಟ ಉಪಕ ರಣಗಳನ್ನು ತೆರವುಗೊಳಿಸಲಾಗಿತ್ತು. ಹಿಂದೆ ಇಲ್ಲಿನ ಸ್ಥಳೀಯರು ಸ್ವಆಸಕ್ತಿಯಿಂದ ಪಾರ್ಕ್‌ನ ಅಭಿವೃದ್ಧಿ ಮಾಡಿ ಸಂಪೂರ್ಣ ನೈಸರ್ಗಿಕ ರೀತಿಯಲ್ಲಿ ಮಣ್ಣಿನ ಟ್ರ್ಯಾಕ್‌, ಮಕ್ಕಳ ಆಟದ ಸಲಕರಣೆ, ವಯಸ್ಕರಿಗೆ ವ್ಯಾಯಾಮದ ಸೈಕಲ್‌ ಮೊದಲಾದವುಗಳನ್ನು ಜೋಡಿಸಿ ಪಾರ್ಕ್‌ನ ಸೌಂದರ್ಯವನ್ನು ದ್ವಿಗುಣಗೊಳಿಸಿದ್ದರು. ಆದರೆ ಪಾರ್ಕ್‌ನ್ನು ಮೇಲ್ದರ್ಜೆಗೆ ಏರಿಸುವ ಭರದಲ್ಲಿ ಆಡಳಿತ ಇದ್ದ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವ ಬದಲು ಅವುಗಳನ್ನು ತೆರವು ಮಾಡಿದೆ. ಸದ್ಯ ಈ ಪಾರ್ಕ್‌ನಲ್ಲಿ ಏನೂ ಇಲ್ಲದಂತೆ ಆಗಿರುವುದು ಸ್ಥಳೀಯರಲ್ಲಿ ಬೇಸರ ತರಿಸಿದೆ.

ಖಾಲಿಖಾಲಿ
ಬರೇ ವಾಕಿಂಗ್‌ ಟ್ರ್ಯಾಕ್‌ ಬಿಟ್ಟರೆ ಇಲ್ಲಿ ಬೇರೇನೂ ಕಂಡುಬರುವುದಿಲ್ಲ. ಪಾರ್ಕ್‌ನ ಪ್ರವೇಶಕ್ಕಿರುವ 2 ಬದಿಯ ಪ್ರವೇಶ ದ್ವಾರಗಳಲ್ಲಿ ಹಿಂಬದಿಯ ದ್ವಾರದ ಗೇಟು ಮುರಿದು ಹಗ್ಗದಲ್ಲಿ ಕಟ್ಟಲಾಗಿದೆ.ಇದರಿಂದ ದನ ಮೊದಲಾದ ಪ್ರಾಣಿಗಳ ಪ್ರವೇಶಕ್ಕೆ ಅನುಕೂಲ ಮಾಡಿಕೊಟ್ಟಂತಾಗಿದೆ. ಸದ್ಯ ಪಾರ್ಕ್‌ನಲ್ಲಿರುವ ಮರಗಳನ್ನು ಸಂರಕ್ಷಿಸುವ ಮೂಲಕ, ಮಕ್ಕಳು, ಹೆತ್ತವರು ಹಿರಿಯರಿಗೆ ಅನುಕೂಲವಾಗುವ ವ್ಯವಸ್ಥೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಕೈಗೊಂಡು, ಮತ್ತೆ ಹೊಸರೂಪದಲ್ಲಿ ಈ ಪಾರ್ಕ್‌ ಸದ್ಬಳಕೆಗೆ ಬರಲಿ ಎಂಬುದು ಸ್ಥಳೀಯರ ಆಗ್ರಹ.

ಅಧಿಕಾರಿಗಳ ಗಮನಕ್ಕೆ ತರಲಾಗಿದೆ
ಪಾರ್ಕ್‌ನಲ್ಲಿ ಹಿಂದೆ ಗಾರ್ಡನ್‌ ಸೇರಿದಂತೆ ಕಾರಂಜಿಯಂತಹ ವ್ಯವಸ್ಥೆ ಇತ್ತು ಹೊಸ ಕಾಮಗಾರಿಯ ಸಮಯದಲ್ಲಿ ಹಿಂದೆ ಇದ್ದ ಸೌಲಭ್ಯಗಳನ್ನು ಕಳೆದುಕೊಂಡಿವೆೆ. ಇದನ್ನು ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಅನುದಾನ ಬಂದ ಮೇಲೆ ಗಾರ್ಡನ್‌ ಸೇರಿದಂತೆ ಶೆಟಲ್‌ ಕೋರ್ಟ್‌ ನಿರ್ಮಾಣದ ಯೋಜನೆ ಇದೆ.
-ಪ್ರಭಾಕರ್‌ ಪೂಜಾರಿ,
ನಗರಸಭಾ ಸದಸ್ಯರು, ದೊಡ್ಡಣಗುಡ್ಡೆ

Advertisement

ಗಮನ ಹರಿಸಲಿ
ಇರುವ ವ್ಯವಸ್ಥೆಯನ್ನು ಅಭಿವೃದ್ಧಿ ಗೊಳಿಸುವ ಬದಲು ಹೊಸ ಯೋಜನೆಯಿಂದ ಪಾರ್ಕ್‌ ನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಸಾಧ್ಯವಾಗಿಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಗಮನ ಹರಿಸುವಂತಾಗಲಿ.
-ಎಂ.ಎನ್‌. ನಾಯಕ್‌,
ಸ್ಥಳೀಯರು

-ಕಾರ್ತಿಕ್‌ ಚಿತ್ರಾಪುರ

Advertisement

Udayavani is now on Telegram. Click here to join our channel and stay updated with the latest news.

Next