ದೊಡ್ಡಬಳ್ಳಾಪುರ: ಲಾಕ್‌ಡೌನ್ ತೆರವು ಮಾಡಲಾಗಿದ್ದರೂ ಪಟ್ಟಣದಲ್ಲಿ ವ್ಯಾಪಾರ ವಹಿವಾಟು, ಸಾರಿಗೆ ಸಂಚಾರ ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ. ಜನರಲ್ಲಿನ ಕೋವಿಡ್ 19 ಆಂತಕ ಇನ್ನೂ ಹೋಗಿಲ್ಲ. ಪರಿಣಾಮ ನಗರದ ಬಸ್ ನಿಲ್ದಾಣದಲ್ಲಿ ಮೇ 19ರಿಂದ ಸಾರಿಗೆ ಸಂಚಾರ ಆರಂಭಗೊಂಡಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿಪ್ರಯಾಣಿಕರೇ ಬರುತ್ತಿಲ್ಲ.
ಬೆಂಗಳೂರು ಮಾರ್ಗದ ಬಸ್‌ಗಳು ಸಾಲುಗಟ್ಟಿ ನಿಂತ್ತಿದ್ದರೂ ಬಸ್‌ಗಳು ಪ್ರಯಾಣಿಕರ ಕೊರತೆ ಎದುರಿಸುತ್ತಿವೆ. 10 ವರ್ಷದ ಒಳಗಿನ ಮಕ್ಕಳು ಹಾಗೂ 60 ವರ್ಷ ದಾಟಿದವರಿಗೆ ಪ್ರವೇಶವಿಲ್ಲ ಎನ್ನುವ ಸರ್ಕಾರದ ನಿಯಮ, ಶಾಲಾ, ಕಾಲೇಜು ಇನ್ನೂ ಆರಂಭಗೊಳ್ಳದಿರುವುದು ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ ಕಾಣದಿರುವುದಕ್ಕೆ ಪ್ರಮುಖ ಕಾರಣವಾಗಿದೆ.
ಸೌಲಭ್ಯವಿಲ್ಲ: ಕೇವಲ ಅಗತ್ಯ ಹಾಗೂ ಅನಿವಾರ್ಯತೆ ಇರುವವರು ಮಾತ್ರ ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ. ಗ್ರಾಮೀಣ ಭಾಗದ ಬಸ್ ಗಳೂ ಸಹ ಪ್ರಯಾಣಿಕರ ಕೊರತೆ ಎದುರಿಸುತ್ತಿವೆ. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರು ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಪ್ರತಿಯೊಬ್ಬ ಪ್ರಯಾಣಿಕರ ಹೆಸರು, ವಿಳಾಸ ಮೊಬೈಲ್ ಸಂಖ್ಯೆ ವಿವರ ಪಡೆಯಲಾಗುತ್ತಿದೆ. ಬಸ್ ಹತ್ತುವಾಗ ಕೈಗೆ ಸ್ಯಾನಿಟೆ„ಸರ್ ಹಾಕಿ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಆದರೆ, ಬಿಎಂಟಿಸಿ ಬಸ್ ಪ್ರಯಾಣಿಕರಿಗೆ ಇದಾವುದೇ ವ್ಯವಸ್ಥೆ ಮಾಡಲಾಗುತ್ತಿಲ್ಲ. ಇದು ಆತಂಕಕ್ಕೆ ಕಾರಣವಾಗಿದೆ.
ಸ್ಯಾನಿಟೈಸರ್: ನಗರದ ಎಸ್‌ಬಿಐ, ವಿಜಯಾ ಬ್ಯಾಂಕ್, ಕೆನರಾ ಬ್ಯಾಂಕ್,ಕರ್ನಾಟಕ ಬ್ಯಾಂಕ್ ಮೊದಲಾದ ಪ್ರಮುಖ ಬ್ಯಾಂಕ್‌ಗಳು ಆಗಮಿಸುವ ಗ್ರಾಹಕರಿಗೆ ಸ್ಯಾನಿಟೆ„ಸರ್ ನೀಡಿಥರ್ಮಲ್ ಸ್ಕ್ರೀನಿಂಗ್ ಮಾಡಿ, ಸೇವೆ ನೀಡುತ್ತಿವೆ.ಆದರೆ, ಇತರೆ ಕಚೇರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಸರಿಯಾಗಿ ನಿಯಮ ಪಾಲನೆಯಾಗುತ್ತಿಲ್ಲ. ಈ ಮೊದಲು ಮಾಸ್ಕ್ ಹಾಕದಿದ್ದರೆ ದಂಡ ವಿಧಿಸಲಾಗುತ್ತಿತ್ತು. ಆದರೆ, ಲಾಕ್‌ಡೌನ್ ಸಡಿಲವಾದ ನಂತರ ಇಂತಹ ಯಾವುದೇ ನಿಯಮ ಪಾಲನೆಯಾಗುತ್ತಿಲ್ಲ.
ಘಾಟಿ,ಮಧುರೆ ಮೊದಲಾದ ಪ್ರಮುಖ ದೇವಾಲಯಗಳಲ್ಲಿ ಭಕ್ತರಿಗೆ ಸ್ಯಾನಿಟೆ„ಸರ್ ಹಾಕಿ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಚೇತರಿಕೆ ಕಾಣದ ನೇಕಾರಿಕೆ: ದೊಡ್ಡಬಳ್ಳಾಪುರದ ಜೀವನಾಡಿ ನೇಕಾರಿಕೆ ಉದ್ಯಮ ಇನ್ನೂ ಚೇತರಿಕೆ ಕಂಡಿಲ್ಲ. ನೇಕಾರಿಕೆ ನಂಬಿರುವವರು ಮುಂದೇನು ಎಂದು ಯೋಚಿಸುವಂತಾಗಿದೆ. ವಾಣಿಜ್ಯ ಮಳಿಗೆಗಳಲ್ಲಿ ಬಟ್ಟೆ ವ್ಯಾಪಾರ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಮುಂದಿನ ತಿಂಗಳು ಆಷಾಢ. ಈ ಅವಧಿಯಲ್ಲಿ ಬಟ್ಟೆ ವ್ಯಾಪಾರ ನಡೆಯುವುದೇ ಅನುಮಾನವಾಗಿದೆ.
ನಿಯಮ ಸಡಿಲಾಗಿದೆ ಎಂದಾಕ್ಷಣ ಕೋವಿಡ್ 19 ದೂರವಾಗಿದೆ ಎಂದು ಭಾವಿಸಿ, ಎಲ್ಲ ನಿಯಮ ಗಾಳಿಗೆ ತೂರುವುದು ಸರಿಯಲ್ಲ. ಕನಿಷ್ಠ ಸಾರ್ವಜನಿಕರ ಸ್ಥಳಗಳಲ್ಲಾದರೂ ಕೊವಿಡ್-19 ಮಾರ್ಗ ಸೂಚಿಯನ್ನು ಕಡ್ಡಾಯವಾಗಿ ಅನುಸರಿಸಲೇಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ನಿಯಮ ಪಾಲಿಸದೇ ಹೊದರೇ, ಕೋವಿಡ್ 19 ಸೋಂಕು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಜೊತೆಗೆ ಸಮಾಜದ ಆರೋಗ್ಯದ ಪರಿಸ್ಥಿತಿ ಗಂಭೀರವಾಗಲಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.