Advertisement

ಸಮಗ್ರ ಕೃಷಿ: ದೊಡ್ಡಪ್ಪ ಈಗ ದುಡ್ಡಪ್ಪ

06:00 AM Aug 20, 2018 | |

ಕೃಷಿ ಕೆಲಸಕ್ಕೆ ಕೂಲಿಯವರ ಸಮಸ್ಯೆ ಎದುರಾಯಿತು. ಆಗ ದೊಡ್ಡಪ್ಪ ಗಾಬರಿಯಾಗಲಿಲ್ಲ. ಮನೆಯಲ್ಲಿದ್ದ ಎಲ್ಲರಿಗೂ ಕೆಲಸ ಹಂಚಿದರು. ವರ್ಷವಿಡೀ ನೀರು ಪಡೆಯಲು ಎರಡು ಬೋರ್‌ವೆಲ್‌ ಕೊರೆಸಿದರು… 

Advertisement

ಅತಿವೃಷ್ಟಿ, ಅನಾವೃಷ್ಟಿ, ಇಳುವರಿ ಕುಂಠಿ-ತ, ಕೂಲಿ ಆಳುಗಳ ಅಭಾವ, ಬೆಲೆ ಕುಸಿತ ಸೇರಿದಂತೆ ವಿವಿಧ ಕಾರಣಗಳಿಂದ ಕೃಷಿಯಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚೆಂದು ಹೇಳುವ ರೈತರೇ ಅಧಿಕ. ಇದಕ್ಕೆ ಅಪವಾದ ಎಂಬಂತೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹಂಚಿನಾಳ ಗ್ರಾಮದ ದೊಡ್ಡಪ್ಪ ಸಂಗಪ್ಪ ರಸರಡ್ಡಿ ನೇತೃತ್ವದ ಅವಿಭಕ್ತ ಕುಟುಂಬ ಕೃಷಿಯಲ್ಲಿಯೇ ನೆಮ್ಮದಿ ಕಂಡುಕೊಂಡಿದೆ.

ಹೊಲದಲ್ಲಿಯೇ ವಾಸ
 ಎಲ್ಲ ರೈತರಂತೆ ಇವರು ಮೊದ ಮೊದಲು ಏಕ ಬೆಳೆ ಬೆಳೆಯುತ್ತಿದ್ದರು. ಒಂದು ವರ್ಷ ಬೆಳೆ ಕೈ ಹಿಡಿದರೆ ನಂತರದ ಮೂರ್‍ನಾಲ್ಕು ವರ್ಷ ನಾನಾ ಕಾರಣದಿಂದ ನಷ್ಟವಾಗುತ್ತಿತ್ತು. ಆಗ, ತಾಲೂಕು ಸಹಾಯಕ ಕೃಷಿ ಅಧಿಕಾರಿಗಳ ಸಲಹೆಯಂತೆ ಮಿಶ್ರ ಬೆಳೆ ತೆಗೆಯಲು ನಿರ್ಧರಿಸಿದರು. ಇಳಿಜಾರು ಪ್ರದೇಶವಾಗಿದ್ದ ಜಮೀನನ್ನು ಒಂದೊಂದು ಎಕರೆಯಂತೆ ವಿಂಗಡಿಸಿ, ಸಮತಟ್ಟು ಮಾಡಿದರು. ಮಿಶ್ರಬೆಳೆ ಮತ್ತು ಅಂತರ ಬೆಳೆಗಳನ್ನು ಬೆಳೆಯಲು ಆರಂಭಿಸಿದರು. ಇದರಿಂದ ಮಳೆಗಾಲದಲ್ಲಿ ಭೂ ಸವಕಳಿ ತಡೆಯುವುದರ ಜೊತೆಗೆ ಮಳೆನೀರು ಭೂಮಿಯಲ್ಲಿ ಇಂಗುವಂತಾಯಿತು. ನಂತರ, ಒಂದು ಬೆಳೆ ಕೈಕೊಟ್ಟರೂ ಮತ್ತೂಂದು ಬೆಳೆ ಕೈ ಹಿಡಿಯುವುದನ್ನು ಮನಗಂಡ ದೊಡ್ಡಪ್ಪ, ಸಮಗ್ರ ಕೃಷಿ ಪದ್ಧತಿಯತ್ತ ಮುಖ ಮಾಡಿದರು.

ಆಗ ಕೂಲಿ ಆಳು ಮತ್ತು ನೀರಿನ ಸಮಸ್ಯೆ ಎದುರಾಯಿತು. ಮೊದಲೇ ಅವಿಭಕ್ತ ಕುಟುಂಬವಾಗಿದ್ದರಿಂದ ಮನೆಯಲ್ಲಿದ್ದ ಎಲ್ಲರೂ (ಮಕ್ಕಳು ಸೇರಿ) ಜಮೀನಿನಲ್ಲಿಯೇ ವಾಸಿಸಲು ಶುರು ಮಾಡಿದರು. ಎಲ್ಲರೂ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರಿಂದ ಆಳುಗಳ ಸಮಸ್ಯೆ ನೀಗಿತು. ಇನ್ನು ಮಳೆನೀರು ಸಂಗ್ರಹಿಸುವ ಬಾವಿ ಹತ್ತಿರ ಒಂದು, ಜಮೀನಿನಲ್ಲಿ ಮತ್ತೂಂದು ಬೋರ್‌ವೆಲ್‌ ಕೊರೆಸಿದರು. ಹೊಲದಲ್ಲಿಯೇ ವಾಸ ಮಾಡುತ್ತಿದ್ದರಿಂದ ಮೊದಲಿಗೆ ತಮಗೆ ಬೇಕಾದ ಆಹಾರ ಧಾನ್ಯ ಬೆಳೆಯಲು ಶುರು ಮಾಡಿದರು. 

ಬಹು ಬೆಳೆಗಳು
 ದೊಡ್ಡಪ್ಪರ ಅವಿಭಕ್ತ ಕುಟುಂಬಕ್ಕೆ ಒಟ್ಟು 29 ಎಕರೆ ಜಮೀನು ಇದೆ. ಇದರಲ್ಲಿ 16 ಎಕರೆಯಲ್ಲಿ ವರ್ಷಕ್ಕೆ ಸುಮಾರು 30ಕ್ಕೂ ಹೆಚ್ಚು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ ನವಣೆ-2 ಎಕರೆ, ಉರುಗಾಳು ತೊಗರಿ-1 ಎಕರೆ, ಸಜ್ಜೆ-1 ಎಕರೆ, ಉಳ್ಳಾಗಡ್ಡಿ-2 ಎಕರೆ, ಹೆಸರು-1 ಎಕರೆ, ಮೆಕ್ಕೆಜೋಳ-2 ಎಕರೆ, ಎಳ್ಳು (ಅಂತರ ಬೆಳೆಯಾಗಿ ತೊಗರಿ)-1 ಎಕರೆ, ಬಿ.ಟಿ ಹತ್ತಿ-2 ಎಕರೆ, ಮೇವಿನ ಬೆಳೆ-20 ಗುಂಟೆ, ಮೆಣಸಿನಕಾಯಿ-20 ಗುಂಟೆ, ಅಲಸಂದಿ-10 ಗುಂಟೆ, ಹೀರೆಕಾಯಿ-10 ಗುಂಟೆ, ಸೌತೆಕಾಯಿ-10 ಗುಂಟೆ, ಚವಳಿ-10 ಗುಂಟೆ, ಮಡಿಕೆ-10 ಗುಂಟೆ, ಉದ್ದು-10 ಗುಂಟೆಯಲ್ಲಿ ಬೆಳೆದಿದ್ದಾರೆ. 

Advertisement

ಹಿಂಗಾರು ಹಂಗಾಮಿನಲ್ಲಿ ಬಿಳಿ ಜೋಳ, ಕಡಲೆ, ಗೋಧಿ, ಶೇಂಗಾ (ನೆಲಗಡಲೆ), ಬೇಸಿಗೆ ಅಲಸಂದಿ, ಮೆಕ್ಕೆಜೋಳ, ಸೂರ್ಯಕಾಂತಿ ಜೊತೆಗೆ ಬೇಸಿಗೆ ಹವಾಮಾನಲದಲ್ಲೂ ಸಾಕಷ್ಟು ಇಳುವರಿ ಕೊಡುವ ತರಕಾರಿಗಳನ್ನು ಹಾಕುತ್ತಾರೆ. ಲಿಂಬು (6 ಗಿಡ), ಹುಣಸಿ ಮರ (10), ತೆಂಗು (6), ಪೇರಲು (6), ಕರಿಬೇವು (6) ಹಾಗೂ ಬೇವು 20 ಗಿಡಗಳ ಜತೆಗೆ ನಿತ್ಯವೂ ಮನೆ ಅಡುಗೆಗೆ ಬೇಕಾಗುವ ಸಾಸಿವೆ, ಜಿರಗಿ, ತಪ್ಪಲು ಪಲ್ಲೆಗಳನ್ನು ತಾವೇ ಬೆಳೆದುಕೊಳ್ಳುತ್ತಾರೆ. ಉಳಿದ 13 ಎಕರೆ ಜಮೀನಿನಲ್ಲಿ ಒಣಬೇಸಾಯ ಮಾಡುತ್ತಾರೆ. ಇನ್ನು ವಾಣಿಜ್ಯ ಬೆಳೆಗಳಾಗಿ ಹತ್ತಿ ಸೀಡ್ಸ್‌ (ಬೀಜೋತ್ಪಾದನೆ), ಮೆಕ್ಕೆಜೋಳ, ತೊಗರಿ ಬೆಳೆಯುತ್ತಾರೆ. ವರ್ಷಕ್ಕೆ 2.5ರಿಂದ 3 ಲಕ್ಷ ರೂ. ಆದಾಯ ಬರುತ್ತಿದೆ. ಮನೆಗೆ ಬೇಕಾದ ಆಹಾರ ಧಾನ್ಯಗಳನ್ನು ಇವರೇ ಬೆಳೆಯುವುದರಿಂದ ಆರೋಗ್ಯ ಭಾಗ್ಯ ನಿಶ್ಚಿತ.

ಮಕ್ಕಳಿಗೂ ಕೃಷಿ ಪಾಠ
ದೊಡ್ಡಪ್ಪರ ಅವಿಭಕ್ತ ಕುಟುಂಬದಲ್ಲಿ 7 ಜನ ಮಹಿಳೆಯರು, 4 ಮಂದಿ ಪುರುಷರು ಮತ್ತು 6 ಜನ ಮಕ್ಕಳು ಸೇರಿದಂತೆ ಒಟ್ಟು 17 ಜನ ಇದ್ದಾರೆ. ಮನೆ ಮಂದಿಯೆಲ್ಲ ಕೃಷಿ ಚಟುವಟಿಕೆಯಲ್ಲಿ ತೊಡಗುತ್ತಿದ್ದು, ಶಾಲಾ-ಕಾಲೇಜಿಗೆ ಹೋಗುವ 6 ಜನ ಮಕ್ಕಳು ನಿತ್ಯ ತರಕಾರಿ ಮಾರಾಟ ಮಾಡಬೇಕು. ರಜಾ ದಿನಗಳಲ್ಲಿ ದಿನವಿಡೀ ಕೃಷಿ ಕಾಯಕ. 

4 ಎತ್ತು, 4 ಆಕಳು, 4 ಟಗರು ಸಾಕಿದ್ದಾರೆ. ಪೂರ್ವಿಕರು ಅನುಸರಿಸಿದ ಕೃಷಿ ಪದ್ಧತಿಯನ್ನೇ ಪಾಲಿಸಿಕೊಂಡು ಬರುತ್ತಿರುವ ಇವರು, ಕೊಟ್ಟಿಗೆ ಮತ್ತು ಕುರಿ ಹಟ್ಟಿಯ ಗೊಬ್ಬರವನ್ನೇ ಈಗಲೂ ಹಂತಿಕಣದಲ್ಲಿಯೇ ಒಕ್ಕಲಿ (ಬೆಳೆಗಳ ರಾಶಿ) ಮಾಡುತ್ತಾರೆ. ಬೆಳೆ ಕಟಾವಿನಲ್ಲಿಯೇ ಬೀಜ ಸಂಗ್ರಹಣೆ ಮಾಡುವುದರಿಂದ ಕಳಪೆ ಬೀಜದ ಸಮಸ್ಯೆ ಇಲ್ಲ. ಬೆಳೆಗಳಿಗೆ ರೋಗ ತಾಗಬಾರದೆಂದು ಬೆಳೆಗಳ ಮಧ್ಯ ಬೆಂಡೆ, ಚಂಡು ಹೂ ಮತ್ತು ದ್ವಿದಳ ಧ್ಯಾನಗಳ ಬೆಳೆಗಳ ನಡುವೆ ಏಕದಳ ಬೆಳೆ ಬೆಳೆಯುವುದು ಇವರ ವಿಶೇಷತೆ. ಹೀಗೆ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಮತ್ತು ಆದಾಯ ಗಳಿಕೆ ಇವರ ಕೃಷಿಯಲ್ಲಿನ ಹೆಚ್ಚುಗಾರಿಕೆ. 

ಈ ವರ್ಷ ಹಾಕಿದ ಬೆಳೆಯ ಜಾಗದಲ್ಲಿ ಮುಂಬರುವ ಹಂಗಾಮಿಗೆ ಯಾವುದೇ ಕಾರಣಕ್ಕೂ ಅದೇ ಬೆಳೆ ಹಾಕುವುದಿಲ್ಲ. ಶೇಂಗಾ ಹಾಕಿದ ನೆಲಕ್ಕೆ ಜೋಳ ಹಾಕುವುದು, ಜೋಳ ಹಾಕಿದ ನೆಲಕ್ಕೆ ಹೆಸರು, ತರಕಾರಿ ಬಿತ್ತುತ್ತಾರೆ.  ಈ ರೀತಿ ಬೆಳೆ ಪರಿವರ್ತನೆ ಮಾಡುವುದರಿಂದ ಹೆಚ್ಚು ಇಳುವರಿ ಪಡೆಯಬಹುದು. ಜೊತೆಗೆ ಭೂಮಿಯ ಫಲವತ್ತತೆ ಕಾಯ್ದುಕೊಳ್ಳಲು ಸಾಧ್ಯ ಎನ್ನುತ್ತಾರೆ ದೊಡ್ಡಪ್ಪ ರಸರಡ್ಡಿ. 

ಮಾಹಿತಿಗೆ  9448649066

ಶರಣು ಹುಬ್ಬಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next