ಮುದ್ದೇಬಿಹಾಳ: ತಾಲೂಕಿನ ಬಿದರಕುಂದಿ ಗ್ರಾಪಂನಲ್ಲಿ ನಡೆದಿದೆ ಎನ್ನಲಾದ ಉದ್ಯಾನವನ ಜಾಗೆ ಹಗರಣದಲ್ಲಿ ನನ್ನ ಹೆಸರನ್ನು ವಿನಾಕಾರಣ ತಳಕು ಹಾಕುವ ಮೂಲಕ ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಅದೇ ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಮಲ್ಲಣ್ಣ ದೊಡಮನಿ ದೂರಿದ್ದಾರೆ.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಉದ್ಯಾನವನ ಜಾಗೆ ಖಾಸಗಿಯವರಿಗೆ ಮಾರಾಟ ಮಾಡಿದ್ದರ ಕುರಿತು ತನಿಖೆ ನಡೆದಿದ್ದು ಅದರ ವರದಿಯನ್ನು ತನಿಖಾ ಧಿಕಾರಿ ತಾಪಂ ಇಒಗೆ ಸಲ್ಲಿಸಿದ್ದಾರೆ. ಯಾರು ಹಗರಣದಲ್ಲಿ ಭಾಗಿಯಾಗಿದ್ದಾರೋ ಅವರಿಗೆ ಶಿಕ್ಷೆ ಆಗುತ್ತದೆ. ಉದ್ಯಾನವನ ಹಗರಣ ನಡೆದದ್ದು 2015ರಲ್ಲಿ. ಆಗ ನಾನು ಗ್ರಾಪಂಗೆ ಅಧ್ಯಕ್ಷನಾಗಿರಲಿಲ್ಲ. ನಾನು 2018ರಲ್ಲಿ ಅಧ್ಯಕ್ಷನಾಗಿದ್ದೆ. ನನ್ನ ಅವಧಿಯಲ್ಲಿ ಪಂಚಾಯಿತಿ ಆಸ್ತಿ ಉಳಿಸೋ ಕೆಲಸ ಮಾಡಿದ್ದೇನೆ. ಹಲವಾರು ಒಳ್ಳೆ ಕೆಲಸ ಮಾಡಿದ್ದೇನೆ.
ನನ್ನ ಅವ ಧಿಯಲ್ಲಿ ಗ್ರಾಪಂಗೆ ವಂಚಿಸಿದ್ದ ಒಂದು ಎಕರೆ ಎನ್‌ಎ ಜಮೀನಿನಲ್ಲಿನ ಅಂದಾಜು 20 ಪ್ಲಾಟುಗಳನ್ನು ಮರಳಿ ಪಂಚಾಯಿತಿ ವಶಕ್ಕೆ ಪಡೆದುಕೊಂಡು ಆದಾಯ ಬರುವಂತೆ ಮಾಡಿದ್ದೇನೆ. ಹೀಗಿದ್ದರೂ ನನ್ನ ಹೆಸರು ತಳುಕು ಹಾಕುತ್ತಿರುವುದು ದುರುದ್ದೇಶವಲ್ಲದೇ ಬೇರೇನೂ ಅಲ್ಲ ಎಂದರು. ಹಗರಣದಲ್ಲಿ ನನ್ನ ಹೆಸರನ್ನೂ ಸೇರಿಸಿ, ಉದ್ಯಾನವನ ಜಾಗೆ ಖರೀದಿಸಿದ ವ್ಯಕ್ತಿ ಶೇಖಪ್ಪ ಹೊನಕೇರಿ ನನ್ನ ಮಾವ ಎಂದು ಸುಳ್ಳು ಮಾಹಿತಿ ನೀಡಿ, ಸದಸ್ಯತ್ವ ರದ್ದುಗೊಳಿಸುವಂತೆ ಆಗ್ರಹಿಸಿ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಅವರಿಗೆ ಕೆಲವರು ಮನವಿ ಸಲ್ಲಿಸಿ ನನ್ನ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಅವರ ವಿರುದ್ಧ ಮುಂಬರುವ ದಿನಗಳಲ್ಲಿ ಕಾನೂನು ಕ್ರಮ ಕೈಗೊಳ್ಳುತ್ತೇನೆ. ಹೊನಕೇರಿಯವರು ನಮ್ಮ ಸಮುದಾಯದವರೇ ಹೊರತು ನನ್ನ ಮಾವನವರಲ್ಲ ಎಂದು ತಿಳಿಸಿದರು. ನನ್ನ ಏಳ್ಗೆ ಸಹಿಸಲಾಗದ ವಿರೋಧಿಗಳು ಇಂಥ ಸುಳ್ಳುಗಳನ್ನು ಸೃಷ್ಟಿ ಮಾಡಿ ತೇಜೋವಧೆ ನಡೆಸುತ್ತಿದ್ದಾರೆ. ನಮ್ಮ ಅಭಿವೃದ್ಧಿ ಕೆಲಸಗಳನ್ನು ಸಹಿಸಿಕೊಳ್ಳಲು ಅವರಿಗೆ ಆಗುತ್ತಿಲ್ಲ. ಅವರು ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾದವುಗಳು.
ಇಂಥವರಿಗೆ ಜನರೇ ಬುದ್ಧಿ ಕಲಿಸುತ್ತಾರೆ. ಜನರಿಗೆ ಸತ್ಯ ಯಾವುದು, ಸುಳ್ಳು ಯಾವುದು ಅನ್ನೋದು ಗೊತ್ತಿದೆ. ನಮ್ಮ ವಿರುದ್ಧ ಕುತಂತ್ರ ರಾಜಕಾರಣ ಮಾಡಲು ವಿನಾಕಾರಣ ನಮ್ಮ ಮೇಲೆ ಸುಳ್ಳು ಆರೋಪ ಹೊರಿಸುತ್ತಿದ್ದಾರೆ. ಸಾರ್ವಜನಿಕರು ಇಂಥ ಸುಳ್ಳು ಆರೋಪಗಳಿಗೆ ತಲೆಕೆಡಿಸಿಕೊಳ್ಳಬಾರದು ಎಂದರು. ಗ್ರಾಮಸ್ಥರಾದ ಸಂಗಮೇಶ ಚಲವಾದಿ ಇದ್ದರು.