ಶಿರಸಿ: ಇಲ್ಲೊಬ್ಬ ಡಾಕ್ಟ್ರು ಮಕ್ಕಳಿಂದ ಹಿಡಿದು ದೊಡ್ಡವರ ತನಕ ಯೋಗ ಪಾಠ ಮಾಡುತ್ತಾರೆ. ಯೋಗಾಭ್ಯಾಸ ನಿರತ ವೈದ್ಯರಾದವರು ಪ್ರಧಾನಿ ನರೇಂದ್ರ ಮೋದಿ ಅವರು ಯೋಗದ ಕುರಿತು ಆದ್ಯತೆ, ವಿಶ್ವ ಯೋಗ ದಿನಾಚರಣೆ ಆರಂಭಿಸಿದಾಗಿನಿಂದ ಇವರೂ ಉಚಿತವಾಗಿ ಯೋಗ ಕಲಿಸುತ್ತಿದ್ದಾರೆ.
ಜಿಲ್ಲೆಯ ಪ್ರಸಿದ್ಧ ಮಕ್ಕಳ ವೈದ್ಯ ಡಾ|ದಿನೇಶ ಹೆಗಡೆ ಯೋಗ ತರಬೇತಿ ನೀಡುತ್ತಿರುವ ವೈದ್ಯರು. 2014ರಿಂದ ಈವರೆಗೆ ನಿತ್ಯವೂ ಯೋಗ ಪಾಠ ಮಾಡುತ್ತಾರೆ. ಇದಕ್ಕೆ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್ ನೆರವು ಪಡೆದಿದ್ದಾರೆ. ಕೋವಿಡ್ ಕೇರ್ ಸೆಂಟರ್ ಕೂಡ ನಡೆಸುತ್ತ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರೂ ಅಂಥ ಒತ್ತಡದಲ್ಲೂ ಆರೋಗ್ಯ ಸಂಬಂಧ ವೈಯಕ್ತಿಕ ನಿರಾಳತೆ ಸೃಷ್ಟಿಸಿದ್ದು ಯೋಗ ಎನ್ನುತ್ತಾರೆ.
2014ರಲ್ಲಿ ಶಿರಸಿಯಲ್ಲೂ ವಿಶ್ವ ಯೋಗ ದಿನಾಚರಣೆ ಸಾರ್ವತ್ರಿಕವಾಗಿ ನಡೆಸುವ ಕಾಲಕ್ಕೆ ಹಲವಡೆ ಯೋಗ ತರಬೇತಿ ಕೂಡ ನೀಡಿದವರಲ್ಲಿ ಡಾ| ದಿನೇಶ ಹೆಗಡೆ ಅವರೂ ಒಬ್ಬರು. ನಂತರ ಇದನ್ನು ನಿರಂತರವಾಗಿ ನಡೆಸಬೇಕು ಎಂಬ ಕಾರಣಕ್ಕೆ ರೋಟರಿ ಸೆಂಟರಿನಲ್ಲಿ ಗಣೇಶ ಶೇಟ್ ಅವರು ಹಾಗೂ ವೈದ್ಯರು ಸೇರಿ ನಿತ್ಯ ಯೋಗಾಸನ ಆರಂಭಿಸಿದರು.
ಐಎಂಎ ಕಟ್ಟಡ ಆದ ಬಳಿಕ ಉಳಿದ ಆಸಕ್ತರೂ ಜೊತೆಯಾದರು. ನಿತ್ಯ 15-20 ಜನರ ತನಕ ದಿನೇಶ ಹೆಗಡೆ ಅವರ ಬಿ ಯೋಗಾಸನ ಅಭ್ಯಾಸ, ಕಲಿಕೆಗೆ ಬಂದರು. ಕೆಲವರು ಇಲ್ಲಿ ಕಲಿತು ಮನೆಯಲ್ಲಿ ನಿತ್ಯವೂ ಆರಂಭಿಸಿದರು. ಕಳೆದ ವರ್ಷದ ಲಾಕ್‌ಡೌನ್ ಘೋಷಣೆ ಬಳಿಕ ಕೊಂಡಿ ತಪ್ಪಬಾರದು ಎಂದು ನಿತ್ಯವೂ ಬೆಳಗ್ಗೆ 6ರಿಂದ 7 ಗಂಟೆ ತನಕ ಯೋಗಾಭ್ಯಾಸ ಮಾಡುತ್ತಾರೆ ಹಾಗೂ ಅದನ್ನು ಅವರ ಫೇಸ್‌ಬುಕ್ ಪೇಜಿನ ಮೂಲಕ ಲೈವ್ ಕೂಡ ನೀಡಲು ಆರಂಭಿಸಿದರು.
ಅನೇಕರು ಅದನ್ನು ನೋಡಿಕೊಂಡು ಯೋಗಾಭ್ಯಾಸ ಮಾಡುತ್ತಿದ್ದಾರೆ ಎನ್ನುತ್ತಾರೆ ಡಾ| ದಿನೇಶ ಹೆಗಡೆ. ಐಎಂಎ ಹಾಲ್‌ನಲ್ಲಿ ನಿತ್ಯವೂ ಸಮಯಕ್ಕೆ ತಹಶೀಲ್ದಾರು, ವೈದ್ಯರಿಂದ ಹಿಡಿದು ವರ್ತಕರ ತನಕ, ಮಕ್ಕಳಿಂದ ಹಿಡಿದು ನಿವೃತ್ತರ ತನಕ ಬಂದಿದ್ದರು ಎಂದೂ ನೆನಪಿಸಿಕೊಳ್ಳುತ್ತಾರೆ. ಯೋಗಾಸನ ಮಾಡಿದರೆ ನಿರೋಗಿಗಳಾಗಬಹುದು. ಕೋವಿಡ್‌ನಂತಹ ಸೋಂಕಿನ ವಿರುದ್ಧವೂ ಹೋರಾಟಕ್ಕೆ ಯೋಗಾಸನ ಒಳ್ಳೆಯ ಮದ್ದು ಎನ್ನುತ್ತಾರೆ ವೈದ್ಯ ದಿನೇಶ ಹೆಗಡೆ.