Advertisement

Lok Sabha Election 2024; ಕಾಂಗ್ರೆಸ್‌ ಚೊಂಬು ವರ್ಸಸ್‌ ಬಿಜೆಪಿ ಚಿಪ್ಪು ಕದನ

11:54 PM Apr 22, 2024 | Team Udayavani |

ಬೆಂಗಳೂರು: ಕಾಂಗ್ರೆಸಿನ “ಚೊಂಬು’ ಜಾಹೀರಾತಿಗೆ ವಿರುದ್ಧವಾಗಿ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ “ಖಾಲಿ ಚಿಪ್ಪು’ ಅಭಿಯಾನ ಪ್ರಾರಂಭಿಸಿದ್ದು, ಜಾಹೀರಾತು ಸಮರ ಮುಂದುವರಿಸಿದೆ.

Advertisement

“ಕನ್ನಡಿಗರ ಕೈಗೆ ಚಿಪ್ಪು ನೀಡಿದ ಕಾಂಗ್ರೆಸ್‌’ ಎಂಬ ಶೀರ್ಷಿಕೆಯೊಂದಿಗೆ ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಜನರಿಗೆ ಮಾಡಿದೆ ಎನ್ನಲಾದ ಅನ್ಯಾಯವನ್ನು ಎಳೆಎಳೆಯಾಗಿ ಬಿಡಿಸಿಡಲಾಗಿದೆ. ಕಿಸಾನ್‌ ಸಮ್ಮಾನ್‌ ಯೋಜನೆಯಲ್ಲಿ 4,000 ರೂ. ಕಡಿತ ಮಾಡಿ ರೈತರಿಗೆ ಚಿಪ್ಪು, ದಲಿತರ 11,000 ಕೋಟಿ ರೂ. ದುರ್ಬಳಕೆ ಮಾಡಿ ತಳ ಸಮುದಾಯದ ಕೈಗೆ ಚಿಪ್ಪು, ಕಾವೇರಿ ನೀರು ತಮಿಳುನಾಡಿಗೆ ಬಿಟ್ಟು ಬೆಂಗಳೂರಿಗೆ ಚಿಪ್ಪು ಇತ್ಯಾದಿ ವಿವರವನ್ನು ಬಿಜೆಪಿ ಸಿದ್ಧಪಡಿಸಿದ ವಿನ್ಯಾಸದಲ್ಲಿ ವಿವರಿಸಲಾಗಿದೆ.

ಅದೇ ರೀತಿ ಸೋಮವಾರ ಪತ್ರಿಕೆಗಳಿಗೆ ನೀಡಿದ “ಕಾಂಗ್ರೆಸ್‌ ಡೇಂಜರ್‌’ ಜಾಹೀರಾತನ್ನು ಬಿಜೆಪಿಯ ಎಲ್ಲ ಕಾರ್ಯಕರ್ತರು ವಾಟ್ಸ್ ಆಪ್ ಡಿಪಿಗೆ ಬಳಸುವಂತೆಯೂ ಸೂಚನೆ ನೀಡಲಾಗಿದೆ. ಇದರ ಜತೆಗೆ “ಮೋದಿಯವರ ಅಕ್ಷಯಪಾತ್ರೆ/ ಕಾಂಗ್ರೆಸ್‌ ಖಾಲಿ ಚೊಂಬು’ ಹೆಸರಿನಲ್ಲಿ ಇನ್ನೊಂದು ಮಾಹಿತಿ ಹಂಚಿಕೊಳ್ಳಲಾಗಿದ್ದು ಬಿಜೆಪಿ 2014ರಿಂದ 2024ರ ಅವಧಿಯಲ್ಲಿ 6,99,767 ಲಕ್ಷ ಕೋಟಿ ರೂ. ಕರ್ನಾಟಕಕ್ಕೆ ನೀಡಿದೆ, ಕಾಂಗ್ರೆಸ್‌ 2004ರಿಂದ 2014ರ ಅವಧಿಯಲ್ಲಿ 1,42,574 ಲಕ್ಷ ಕೋಟಿ ರೂ. ಮಾತ್ರ ನೀಡಿದೆ ಎಂದು ವಿವರಿಸಿದೆ.

ದೇಶಕ್ಕೆ ಬಿಜೆಪಿಯೇ ಡೇಂಜರ್‌
ಹೊರತು ಕಾಂಗ್ರೆಸ್‌ ಅಲ್ಲ: ಸಿದ್ದು
ಶಿವಮೊಗ್ಗ: ಕಾಂಗ್ರೆಸ್‌ ಜಾಹೀರಾತಿಗೆ ಪ್ರತಿಯಾಗಿ ಬಿಜೆಪಿಯವರು ಕಾಂಗ್ರೆಸ್‌ ಡೇಂಜರ್‌ ಎಂಬ ಜಾಹೀರಾತು ಬಿಡುಗಡೆ ಮಾಡಿದ್ದಾರೆ. ದೇಶಕ್ಕೆ ಬಿಜೆಪಿಯೇ ಡೇಂಜರ್‌ ಹೊರತು, ಕಾಂಗ್ರೆಸ್‌ ಅಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಧಾನಿ ಮೋದಿ ಕರ್ನಾಟಕಕ್ಕೆ ಖಾಲಿ ಚೊಂಬು ಕೊಟ್ಟಿದ್ದಾರೆ. ರಾಜ್ಯಕ್ಕೆ ಮಲತಾಯಿ ಧೋರಣೆ ತೋರಿದ್ದಾರೆ ಎಂದು ಜಾಹೀರಾತು ಬಿಡುಗಡೆ ಮಾಡಲಾಗಿದೆ. ಹೆಣ್ಣುಮಕ್ಕಳಿಗೆ ಉಚಿತ ಬಸ್‌ ಸೌಲಭ್ಯ, ಉಚಿತ ವಿದ್ಯುತ್‌, ಅನ್ನಭಾಗ್ಯ ಯೋಜನೆಗಳು ಡೇಂಜರ್‌ ಆಗುತ್ತವೆಯೇ? ಸಮಾಜವನ್ನು ಒಡೆಯುವಂತಹ ಕಾರ್ಯಗಳು, ಮತಗಳ ಧ್ರುವೀಕರಣ ಮಾಡುವುದು ಅಪಾಯಕಾರಿಯೇ ಹೊರತು ವಿವಿಧತೆಯಲ್ಲಿ ಏಕತೆಯನ್ನು ತರುವುದು ಡೇಂಜರ್‌ ಅಲ್ಲ ಎಂದರು.

Advertisement

ಚೊಂಬು ಜಾಹೀರಾತಿನಲ್ಲಿ ಹಿಂದೂಗಳ ರಕ್ತ: ಅಶೋಕ್‌
ತುಮಕೂರು: ಲೋಕಸಭಾ ಚುನಾವಣೆ ಮುಗಿದ ಬಳಿಕ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ನಾವೇ ಒಂದು ಒಳ್ಳೆಯ ಚೊಂಬನ್ನು ಕೊಟ್ಟು ಫಾರಿನ್‌ಗೆ ಪಲಾಯನ ಮಾಡಿಸುತ್ತೇವೆ. ಚೊಂಬು ಜಾಹೀರಾತಿನಲ್ಲಿ ಹಿಂದೂಗಳ ರಕ್ತ ತುಂಬಿ ಚೆಲ್ಲುತ್ತಿರುವುದು ಕಾಂಗ್ರೆಸ್‌ನ ಪ್ರತೀಕ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ್‌ ಹರಿಹಾಯ್ದರು.

ನೇಹಾ ಹತ್ಯೆ ವಿರೋಧಿಸಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ನಾವೂ ಕಾಂಗ್ರೆಸ್‌ ವಿರುದ್ಧ ಡೇಂಜರ್‌ ಎಂಬ ರೀತಿಯಲ್ಲಿ ಜಾಹೀರಾತು ನೀಡಿದ್ದೇವೆ. ರಾಮೇಶ್ವರ ಕೆಫೆ ಸ್ಫೋಟ, ಜೈಶ್ರೀರಾಮ್‌ ಘೋಷಣೆ ಕೂಗಿದವರ ಮೇಲೆ ಹಲ್ಲೆ ಮಾಡಿದಾಗಲೂ ನಾವು ಹೋರಾಟ ಮಾಡಿದ್ದೇವೆ. ಈಗಲೂ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲದಂತಾಗಿದೆ. ನೇಹಾ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್‌ ಪಕ್ಷ ಅಪರಾಧಿ ಸ್ಥಾನದಲ್ಲಿದೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಸತ್ತು ಹೋಗಿದ್ದು, ಜನಪರ ಕೆಲಸಗಳನ್ನು ಮಾಡದೆ ಕೇವಲ ಜಾಹೀರಾತಿನ ಅಪಪ್ರಚಾರದಲ್ಲಿ ನಿರತವಾಗಿದೆ. ಇಲ್ಲಿಯವರೆಗೆ ಯಾವೊಬ್ಬ ಶಾಸಕನಿಗೂ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನವನ್ನು ಸಮರ್ಪಕವಾಗಿ ನೀಡಿಲ್ಲ. ಇದರ ಬಗ್ಗೆ ಸ್ವಪಕ್ಷೀಯರಲ್ಲೇ ಅಸಮಾಧಾನವಿದೆ. ಲೋಕಸಭೆ ಚುನಾವಣೆ ಬಳಿಕ ಅಸಮಾಧಾನವು ಭಿನ್ನಮತವಾಗಿ ಸ್ಫೋಟಗೊಳ್ಳುವ ದಿನಗಳು ದೂರವಿಲ್ಲ.
-ಬಿ.ಎಸ್‌.ಯಡಿಯೂರಪ್ಪ, ಮಾಜಿ ಸಿಎಂ

ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ 2 ಸಾವಿರ ರೂ. ಕೊಡುತ್ತಿದ್ದೇವೆಲ್ಲ. ಅದು ಚಿಪ್ಪೇ? ಹೆಣ್ಣುಮಕ್ಕಳು ಬಸ್‌ನಲ್ಲಿ ಉಚಿತವಾಗಿ ಓಡಾಡುತ್ತಿದ್ದರಲ್ಲ ಅದು ಚಿಪ್ಪೇ? ಎಲ್ಲರಿಗೂ ಉಚಿತ ವಿದ್ಯುತ್‌ ಕೊಡುತ್ತಿರುವುದು ಚಿಪ್ಪೇ? ಯುವನಿಧಿ ಅಡಿಯಲ್ಲಿ ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಹಣ ನೀಡುತ್ತಿರುವುದು ಚಿಪ್ಪೇ? ಬಿಜೆಪಿಯವರು ಏನು ಮಾಡಿದ್ದಾರೆ?
-ಸಿದ್ದರಾಮಯ್ಯ, ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next