Advertisement

Doctor’s Story: ನನ್ನ ಗಂಡನ ಪ್ರಾಣ ಉಳಿಸಿಕೊಡಿ…

03:59 PM Aug 20, 2023 | Team Udayavani |

50 ವರ್ಷ ಹಿಂದಿನ ಮಾತು. ಅದು ಏಪ್ರಿಲ್…-ಮೇ ತಿಂಗಳ ಬೇಸಿಗೆಯ ಬಿಸಿಲಿನ ಝಳ ಹೊರಹೊಮ್ಮುತ್ತಿದ್ದ ಕಾಲ. ಆಗಿನ್ನೂ ಬೋರ್‌ವೆಲ್‌ಗ‌ಳು ಬಂದಿರಲಿಲ್ಲ. ಶುದ್ಧ ನೀರಿನ ಕೊಳವೆ ಬಾವಿಗಳು ಇರಲಿಲ್ಲ. ಸಾರ್ವಜನಿಕರು ಬಾವಿ, ಕೆರೆ ಕುಂಟೆಗಳಿಂದ ಕುಡಿಯುವ ನೀರನ್ನು ಸಂಗ್ರಹಿಸುತ್ತಿದ್ದರು. ಕಾಲರಾ ವ್ಯಾಧಿ ಹರಡುತ್ತಾ ಇದ್ದ ಕಾಲ ಅದು. ಒಂದು ಮಧ್ಯಾಹ್ನ ಎತ್ತಿನ ಗಾಡಿಯನ್ನು ನಾನು ಕೆಲಸ ಮಾಡುತ್ತಿದ್ದ ವಾರ್ಡ್‌ ಹತ್ತಿರ ನಿಲ್ಲಿಸಿದರು. ಸುಮಾರು 25 ವರ್ಷದ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವಕನನ್ನು ಇಬ್ಬರು ಕೈ ಹಿಡಿದುಕೊಂಡು ನನ್ನ ಬಳಿಗೆ ಕರೆತಂದರು. ಮಧ್ಯದಲ್ಲಿ ಸುಮಾರು 18 ವರ್ಷದ ಹುಡುಗಿಯ ಕೈಗಳೂ ಸೇರಿದ್ದವು.

Advertisement

ಕಳೆದ 2 ದಿನದಿಂದ ನಿಲುಗಡೆ ಇಲ್ಲದ ಭೇದಿ, ವಾಂತಿ, ಜ್ವರ; ಶರೀರದಲ್ಲಿ ನೀರಿನಂಶವೇ ಇರಲಿಲ್ಲ. ಒಣಗಿದ ನಾಲಿಗೆ, ಮೂತ್ರ ವಿಸರ್ಜನೆ ನಿಂತಿತ್ತು. ಚಿಂತಾಜನಕವಾದ ಸನ್ನಿವೇಶ. ತಕ್ಷಣವೇ ಲವಣಾಂಶಗಳನ್ನೂ, ದ್ರವಾಂಶವನ್ನೂ ಹೊಂದಿದ್ದ ನಾರ್ಮಲ್‌ ಸಲೈನ್‌ ವೇಗವಾಗಿ ದೇಹಕ್ಕೆ ಹರಿಸಬೇಕಾಗಿತ್ತು. ಅಂಥ ನಾರ್ಮಲ್‌ ಸಲೈನ್‌ ಆಗಲಿ ಅಥವಾ ಅಂಥ ಯಾವುದೇ ವಸ್ತು ಆಗಲಿ ನಾನಿದ್ದ ಆಸ್ಪತ್ರೆಯಲ್ಲಿ ಲಭ್ಯವಿರಲಿಲ್ಲ. ಈಗಿರುವ ವೈದ್ಯಕೀಯ ಸೌಲಭ್ಯಗಳಿಗೂ ಆಗಿದ್ದ ಸೌಲಭ್ಯಗಳಿಗೂ ಇರುವ ಅಂತರ-ಅಜಗಜಾಂತರ. ಪಕ್ಕದಲ್ಲಿ ಒಂದು ಕೆಮಿಸ್ಟ್‌ ಅಂಗಡಿ ಇತ್ತು. ಜೊತೆಯಲ್ಲಿ ಬಂದವರನ್ನು ಕೇಳಿದೆ: “ನೀವು ತಕ್ಷಣ ಹೋಗಿ ನಾರ್ಮಲ್‌ ಸಲೈನ್‌ ನೀರಿನ ಬಾಟಲ್‌ಗ‌ಳನ್ನು ತರ್ತೀರಾ?’ 18 ವರ್ಷದ ಯುವತಿ ಹೇಳಿದಳು: “ಸ್ವಾಮಿ, ಈತ ನನ್ನ ಗಂಡ. ನಮಗೆ ಮದುವೆಯಾಗಿ 4 ತಿಂಗಳಾಯ್ತು. ನಮ್ಮ ಹತ್ತಿರ ದುಡ್ಡಿಲ್ಲ, ನನ್ನ ಕೊರಳಲ್ಲಿರುವ ಮಾಂಗಲ್ಯದ ದಾರದಲ್ಲಿ ಚಿನ್ನ ಇದೆ. ಇದನ್ನು ನೀವೇ ಇಟ್ಟುಕೊಳ್ಳಿ, ನನ್ನ ಗಂಡನ ಪ್ರಾಣ ಕಾಪಾಡಿ’ ಎಂದಳು.

ದುಃಖ, ನಿರಾಶೆ, ಭಯ, ದೈನ್ಯದಿಂದ ತುಂಬಿದ್ದ ಆ ಹೆಣ್ಣುಮಗಳು ಅಂಗಲಾಚುತ್ತಿದ್ದ ಸನ್ನಿವೇಶ 50 ವರ್ಷಗಳು ಗತಿಸಿದ್ದರೂ ನನ್ನ ಮನದಲ್ಲಿ ಹಚ್ಚಹಸುರಾಗಿದೆ. ನನ್ನ ಕರುಳು ಹಿಂಡಿದಂತೆ ಭಾಸವಾಯ್ತು. ಆಗಲಿ, ಇವನಿಗೆ ದೇವರು ಆಯಸ್ಸು ಕೊಟ್ಟಿದ್ದರೆ ನನ್ನ ಪ್ರಯತ್ನ ಸಫ‌ಲವಾಗುತ್ತದೆಂದು ದೃಢ ಮನಸ್ಸಿನಿಂದ, ವಾಂತಿ ನಿಲ್ಲುವ ಇಂಜೆಕ್ಷನ್‌ ಚುಚ್ಚುಮದ್ದಿನ ರೂಪದಲ್ಲಿ ಕೊಟ್ಟೆ. ಗ್ಲೂಕೋಸ್‌ ಪುಡಿ, ಉಪ್ಪಿನ ಪುಡಿ ಪ್ರಮಾಣಕ್ಕೆ ತಕ್ಕಂತೆ ಒಂದು ಪಾತ್ರೆಯಲ್ಲಿಟ್ಟುಕೊಂಡು ಆ ನೀರನ್ನು ನಿಧಾನವಾಗಿ ಕಾಲರಾ ರೋಗಿಯ ಬಾಯಿಗೆ ಸೇರಿಸುತ್ತಾ ಬಂದಾಗ, ಕಣ್ಣಿನ ರೆಪ್ಪೆ ಅಲುಗಾಡಿತು. “ಇನ್ನು ಈ ದ್ರಾವಣವನ್ನು ಕಾಲಕಾಲಕ್ಕೆ ಅರ್ಧ ಗಂಟೆಗೊಮ್ಮೆ ಕುಡಿಸುತ್ತಾ ಇರು’ ಎಂಬುದಾಗಿ ಆ ನವವಿವಾಹಿತೆಗೆ ಹೇಳಿಕೊಟ್ಟೆ. ಸಂಜೆಯ ಹೊತ್ತಿಗೆ ಕಾಲರಾ ರೋಗಿಯು ಕರೆದು ನನ್ನನ್ನು ನೋಡಿದ. ಆತನ ಮಡದಿಯ ಮುಖದಲ್ಲಿ ಮಂದಹಾಸ ಹಾಗೂ ಜೊತೆಜೊತೆಯಲ್ಲಿ ಹರಿಯುತ್ತಿದ್ದ ಆನಂದ ಬಾಷ್ಪ. ಗಂಡನ ಪ್ರಾಣ ಉಳಿಯುತ್ತದೆಂಬ ನಂಬಿಕೆ ಆ ಯುವತಿಯ ಕಂಗಳಲ್ಲಿ ಹೊರಹೊಮ್ಮುತ್ತಿತ್ತು.

ನನ್ನ ಒಡಹುಟ್ಟಿದವರಿಗಿದ್ದ ಬಡತನ, ಅವರಿಗೆ ಆರ್ಥಿಕ ನೆರವು ಕೊಡುವ ಯೋಜನೆಗಳು ನನ್ನಲ್ಲಿ ಇರಲಿಲ್ಲವಾದ್ದರಿಂದ  ನಾನೂ ಸ್ವಲ್ಪ ಹಣಸಂಪಾದನೆ ಮಾಡಬೇಕೆಂಬ ಮನಸ್ಸು ನನ್ನಲ್ಲಿತ್ತು. ಆದರೆ ಆ 18 ವರ್ಷದ ನವ ವಧು ತನ್ನ ಮಾಂಗಲ್ಯವನ್ನು ತೋರಿಸಿದ ಆ ಚಿತ್ರ ನನ್ನ ಮನಸ್ಸನ್ನು ಕರಗಿಸಿತು. ನನ್ನನ್ನು ಪರಿವರ್ತಿಸಿತು. ಬದುಕು ಎಂದರೆ ಔನ್ನತ್ಯಕ್ಕೆ ಬದಲಾವಣೆ, ಪರಿವರ್ತನೆ ಹೊಂದುವುದೇ ನಿಜವಾದ ಅರ್ಥದಲ್ಲಿ ಉತ್ತಮ ಸಂಸ್ಕಾರ ಪಡೆಯುವ ದ್ವಿಜತ್ವ ಎಂದ ಸರ್ವಜ್ಞನ ಮಾತು ಪರಮಸತ್ಯ ಎಂಬ ಅರಿವು ನನಗೆ ಅಂದೇ ಜೊತೆಯಾಯ್ತು.

“ನಾರಾಯಣ ನಮನ’ – ಜುಲೈ 23ರಂದು ಬಿಡುಗಡೆಯಾದ ಡಾ ವಿ. ಲಕ್ಷ್ಮೀನಾರಾಯಣ್‌ ಅಭಿನಂದನ ಗ್ರಂಥದಲ್ಲಿನ ಅಭಿನಂದಿತರ ಲೇಖನದಿಂದ ಆಯ್ದ ಭಾಗವಿದು. ಅಂದಹಾಗೆ, ಡಾ. ವಿ. ಲಕ್ಷ್ಮೀನಾರಾಯಣ್‌ ಅವರು ಕುವೆಂಪು ಅವರಿಗೂ ಚಿಕಿತ್ಸೆ ನೀಡುತ್ತಿದ್ದವರು. ಈಗಲೂ ಡಾ. ಎಸ್‌. ಎಲ್…. ಭೈರಪ್ಪ, ಎಚ್‌. ವಿ ನಾಗರಾಜರಾವ್‌, ಪ್ರಧಾನ ಗುರುದತ್‌ ಇಂತಹವರ ವೈದ್ಯ.

Advertisement

(ಆಗಸ್ಟ್‌ 2ರಂದು ಫೇಸ್‌ಬುಕ್‌ ನಲ್ಲಿ ಪ್ರಕಟವಾಗಿದೆ)

ಕಲ್ಗುಂಡಿ ನವೀನ್‌

Advertisement

Udayavani is now on Telegram. Click here to join our channel and stay updated with the latest news.

Next