ಬೆಂಗಳೂರು: ಕೋವಿಡ್ ವಾರಿಯರ್ಸ್‌ಗಳಾಗಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು ಹಾಗೂ ನರ್ಸ್‌ಗಳಿಗೆ 6 ತಿಂಗಳಿಗೆ ಅನ್ವಯವಾಗುವಂತೆ ಮಾಸಿಕ ವೇತನ ಹೆಚ್ಚಳ ಮಾಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ| ಸುಧಾಕರ್ ಹೇಳಿದ್ದಾರೆ.
ಮಂಗಳವಾರ ಕೋವಿಡ್ ಟಾಸ್ಕ್ಫೋರ್ಸ್ ಸಭೆಯ ಅನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಯುಷ್ ವೈದ್ಯರಿಗೆ ನೀಡುತ್ತಿರುವ ವೇತನ 48 ಸಾವಿರ ರೂ.ಗೆ, ಎಂಬಿಬಿಎಸ್ ವೈದ್ಯರಿಗೆ 80 ಸಾವಿರ ರೂ. ಗೆ ಹೆಚ್ಚಳ ಮಾಡ ಲಾಗುವುದು ಹಾಗೂ ನರ್ಸ್‌ಗಳಿಗೆ ಮಾಸಿಕ 30 ಸಾವಿರ ರೂ. ವೇತನ ನೀಡಲು ನಿರ್ಣಯಿಸಲಾಗಿದೆ. ಈ ವೇತನ ಹೆಚ್ಚಳ 6 ತಿಂಗಳಿಗೆ ಅನ್ವಯ ಆಗಲಿದೆ ಎಂದು ಹೇಳಿದರು.
ನಾಲ್ಕು ಲಕ್ಷ ರ್ಯಾಪಿಡ್ ಆ್ಯಂಟಿಜನ್ ಕಿಟ್ ಮತ್ತು ಐದು ಲಕ್ಷ ಕಿಟ್ ಖರೀದಿಗೆ ಹಾಗೂ ಕೋವಿಡ್ ನಿರ್ವಹಣೆಗೆ ಹೆಚ್ಚುವರಿ ಔಷಧ ಖರೀದಿಸಲು ಅನುಮೋದನೆ ನೀಡಲಾಗಿದೆ. ರ್ಯಾಪಿಡ್ ಆ್ಯಂಟಿಜನ್ ಕಿಟ್‌ಗಳಿಗೆ ಸಂಬಂಧಿಸಿದಂತೆ ಸರಕಾರ ಕಳುಹಿಸುವ ರೋಗಿಗಳಿಗೆ ಎರಡು ಸಾವಿರ ರೂ. ಮತ್ತು ಖಾಸಗಿಯಾಗಿ ಪರೀಕ್ಷೆಗೆ ಬಂದವರಿಗೆ ಮೂರು ಸಾವಿರ ರೂ. ಶುಲ್ಕ ನಿಗದಿಗೆ ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಇರುವ ಒಟ್ಟು ಹಾಸಿಗೆಗಳಲ್ಲಿ ಶೇಕಡಾ 50ರಷ್ಟನ್ನು ಕೋವಿಡ್ ಚಿಕಿತ್ಸೆಗಾಗಿ ಸರಕಾರಕ್ಕೆ ನೀಡಬೇಕು. ಉಳಿದ ಶೇಕಡಾ 50 ಹಾಸಿಗೆಗಳನ್ನು ಖಾಸಗಿಯವರು ಕೋವಿಡ್ ಮತ್ತು ಕೋವಿಡೇತರ ರೋಗಿಗಳ ಚಿಕಿತ್ಸೆಗೆ ಬಳಸಬಹುದು ಎಂಬ ನಿರ್ಧಾರಕ್ಕೆ ಅನುಮೋದನೆ ನೀಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಪ್ಯಾಕೇಜ್ ದರದಲ್ಲಿ ಚಿಕಿತ್ಸಾ ಸೌಲಭ್ಯ ಒದಗಿಸಲು ಮತ್ತು ಯೋಜನೆ ವ್ಯಾಪ್ತಿಗೆ ಸೇರದ ಚಿಕಿತ್ಸಾ ವಿಧಾನಗಳನ್ನು ಯೂಸರ್ ಚಾರ್ಜ್ ಆಧಾರದ ಮೇಲೆ ಚಿಕಿತ್ಸೆ ನೀಡಲು ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.
ನಿರ್ದಾಕ್ಷಿಣ್ಯ ಕ್ರಮ
ಸದ್ಯ ಸರಕಾರಿ ಆಸ್ಪತ್ರೆಗಳಲ್ಲಿ ಮಾತ್ರವೇ ಲಭ್ಯವಿರುವ ರೆಮಿಡಿಸ್ವಿಯರ್ ಔಷಧ ಕಾಳಸಂತೆಯಲ್ಲಿ ದುಬಾರಿ ಮೊತ್ತಕ್ಕೆ ಮಾರಾಟ ಮಾಡುತ್ತಿರುವ ದೂರುಗಳಿವೆ. ಹೀಗಾಗಿ ಸರಕಾರದ ಮೂಲಕವೇ ಖಾಸಗಿ ಆಸ್ಪತ್ರೆಗಳಿಗೂ ವಿತರಿಸಲು ನಿರ್ಧರಿಸಲಾಗಿದೆ. ಈಗಾಗಲೇ ಕೋವಿಡ್ ಚಿಕಿತ್ಸೆಗೆ ದರ ನಿಗದಿ
ಪಡಿಸಲಾಗಿದೆ. ಅದಕ್ಕಿಂತ ಹೆಚ್ಚಿನ ಶುಲ್ಕವನ್ನು ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ವಸೂಲಿ ಮಾಡ ಲಾಗುತ್ತಿದೆ ಎಂಬ ದೂರುಗಳಿವೆ. ಒಂದು ವೇಳೆ ದೂರು ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಾ| ಸುಧಾಕರ್ ಹೇಳಿದರು.