ವಿಜಯಪುರ: ಪ್ರಾಥಮಿಕ ಆರೋಗ್ಯ ಕೇಂದ್ರದ ಅವ್ಯವಸ್ಥೆಯ ಕಾರಣಕ್ಕೆ ಗರ್ಭಿಣಿಯೊಬ್ಬರು ತುರ್ತು ಚಿಕಿತ್ಸೆ ಚಿಕಿತ್ಸೆ ಸಿಗದೆ ನರಳಾಡಿದ ಘಟನೆ ಜಿಲ್ಲೆಯ ಜಿಗಜೀವಣಗಿ ಗ್ರಾಮದಲ್ಲಿ ಜರುಗಿದೆ.
ಚಡಚಣ ತಾಲೂಕಿನ ಜಿಗಜೀವಣಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ಸಿಬ್ಬಂದಿ ಇಲ್ಲದ ಕಾರಣ ಹೆರಿಗೆ ನೋವು ಕಾಣಿಸಿಕೊಂಡು, ಆಸ್ಪತ್ರೆಗೆ ಆಗಮಿಸಿದ್ದ ಗರ್ಭಿಣಿ ಚಿಕಿತ್ಸೆ ಸಿಗದೆ ನೆಲದಲ್ಲಿ ಕುಳತು ನರಳಾಟ ನಡೆಸಿದ್ದಾರೆ.
ತುಂಬು ಗರ್ಭಿಣಿ ಪೂರ್ಣಿಮಾ ಹೊನಕಾಂಡೆ ಎಂಬಾಕೆ ಆಸ್ಪತ್ರೆಯ ನೆಲದಲ್ಲಿ ಕುಳಿತು ಗರ್ಭಿಣಿ ನರಳಾಡಿದರೂ ವೈದ್ಯರು-ಸಿಬ್ಬಂದಿ ಆಸ್ಪತ್ರೆಗೆ ಆಗಮಿಸಿಲ್ಲ. ಸೋಮವಾರ ಮಧ್ಯಾಹ್ನವೇ ಗರ್ಭಿಣಿ ಪೂರ್ಣಿಮಾ ಹೆರಿಗೆ ನೋವಿನಿಂದ ನರಳಿದರೂ ಸ್ಪಂದಿಸದ ಕಾರಣ ರಾತ್ರಿ ವೇಳೆ ಆಕೆಯ ಪೋಷಕರು ಚಡಚಣ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ:ಮಾದರಿ ವ್ಯಕ್ತಿತ್ವ, ಶಿಸ್ತಿನ ಸಿಪಾಯಿ ಯಶೋವರ್ಮ ಸರ್ ಗೆ ನಮನ….
ಇದಕ್ಕಾಗಿ ಪೂರ್ಣಿಮಾ ಅವರನ್ನು ಚಡಚಣ ಆಸ್ಪತ್ರೆಗೆ ಸ್ಥಳಾಂತರಿಸುವಾಗ ಮಾರ್ಗ ಮಧ್ಯೆಯೇ ಅಂಬ್ಯುಲೆನ್ಸ್ ನಲ್ಲಿ ಹೆರಿಗೆಯಾಗಿದೆ. ಹೆರಿಗೆಯ ಬಳಿಕ ತಾಯಿ ಹಾಗೂ ಮಗುವಿಗೆ ಚಡಚಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಿ, ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ತಾಯಿ-ಮಗು ಆರೋಗ್ಯವಾಗಿದ್ದಾರೆಂದು ವೈದ್ಯರ ಮಾಹಿತಿ ನೀಡಿದ್ದಾರೆ.
ಆದರೆ ಜಿಗಜೀವಣಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು-ಸಿಬ್ಬಂದಿ ಕರ್ತವ್ಯ ಲೋಪದ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.