Advertisement

ವೈದ್ಯ ಕೋರ್ಸ್‌ ಶುಲ್ಕ ಹೆಚ್ಚಳ ವಿರೋಧಿಸಿ ಪ್ರತಿಭಟನೆ

11:53 AM Jul 13, 2018 | |

ಬೆಂಗಳೂರು: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಶುಲ್ಕ ಹೆಚ್ಚಿಸಿರುವುದನ್ನು ವಿರೋಧಿಸಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಕಾರ್ಯಕರ್ತರು ಗುರುವಾರ ಕರ್ನಾಟಕ ಪರೀಕ್ಷಾ  ಪ್ರಾಧಿಕಾರಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

Advertisement

2018-19ನೇ ಸಾಲಿನ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಶುಲ್ಕ ಮೂರು ಪಟ್ಟು ಹೆಚ್ಚಿಸಿ, ಬಡ ವಿದ್ಯಾರ್ಥಿಗಳಿಗೆ ವೈದ್ಯಕೀಯ ಪದವಿಯನ್ನು ಕಗ್ಗಂಟು ಮಾಡಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

2017-18ರಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ವೈದ್ಯಕೀಯ ಕೋರ್ಸ್‌ಗಳಿಗೆ 16,700 ರೂ. ಶುಲ್ಕ ನಿಗದಿ ಮಾಡಲಾಗಿತ್ತು. ಈ ವರ್ಷ ಅದು 50 ಸಾವಿರ ರೂ.ಗಳಿಗೆ ಏರಿಸಲಾಗಿದೆ. ಖಾಸಗಿ ಕಾಲೇಜಿನ ಸರ್ಕಾರಿ ಸೀಟಿಗೆ 77,000 ರೂ.ಗಳಿಂದ 97,350 ರೂ.ಗೆ ಏರಿಸಲಾಗಿದೆ.

ಖಾಸಗಿ ಕಾಲೇಜುಗಳಲ್ಲಿ ಖಾಸಗಿ ಸೀಟಿಗೆ 6,83,100 ರೂ. ನಿಗದಿ ಮಾಡಲಾಗಿದೆ. ಇದರಿಂದ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಸರ್ಕಾರ ಖಾಸಗಿ ಲಾಬಿಗೆ ಮಣಿಯ ಬಾರದು ಎಂದು  ಎಬಿವಿಪಿ ಬೆಂಗಳೂರು ಮಹಾನಗರ ಸಂಘಟನಾ ಕಾರ್ಯದರ್ಶಿ ಜಯಪ್ರಕಾಶ್‌ ಒತ್ತಾಯಿಸಿದರು.

ಸರ್ಕಾರಿ ದಂತ ವೈದ್ಯಕೀಯ ಕಾಲೇಜುಗಳಲ್ಲಿ ಕಳೆದ ವರ್ಷ 14,400 ರೂ. ಇದ್ದ ಶುಲ್ಕ ಈಗ 40 ಸಾವಿರ ರೂ.ಗೆ ಏರಿಸಲಾಗಿದೆ. ಖಾಸಗಿ ಕಾಲೇಜಿನ ಸರ್ಕಾರಿ ಸೀಟುಗಳಿಗೆ 49,500 ರೂ.ಶುಲ್ಕ ಇದ್ದದ್ದು, 63,030 ರೂ.ಗಳಾಗಿದೆ.

Advertisement

ಖಾಸಗಿ ಕಾಲೇಜುಗಳಲ್ಲಿ ಖಾಸಗಿ ಸೀಟಿಗೆ 4,63,320ರೂ. ಶುಲ್ಕ ನಿಗದಿ ಮಾಡಿದ್ದಾರೆ. ಇಷ್ಟು ದೊಡ್ಡ ಮೊತ್ತವನ್ನು ಬಡ ವಿದ್ಯಾರ್ಥಿಗಳಿಗೆ ತುಂಬಲು ಸಾಧ್ಯವಾಗುವುದಿಲ್ಲ. ಹೀಗಾಗಿ ಕಳೆದ ವರ್ಷದ ಶುಲ್ಕವನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾಕಾರರು ಮಲ್ಲೇಶ್ವರದಲ್ಲಿ ಇರುವ ಪ್ರಾಧಿಕಾರದ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಬಂಧಿಸಿದರು. ಎಬಿವಿಪಿ ಜಿಲ್ಲಾ ಸಂಚಾಲಕ ಪರಮೇಶ್‌ ರೆಡ್ಡಿ, ಮಹಾನಗರ ಕಾರ್ಯದರ್ಶಿ ಸೂರಜ್‌ ಪಂಡಿತ್‌, ಜಿಲ್ಲಾ ಸಂಚಾಲಕ ಭುವನ್‌, ಮುಖಂಡರಾದ ಹರ್ಷಿತಾ, ಭರತ್‌, ಸುಮುಖ್‌, ವಿನಯ್‌, ಆಕಾಶ್‌ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next