ನವದೆಹಲಿ: ಬೆಂಗಳೂರು ಮೂಲದ 2ನೇ ವರ್ಷದ ವೈದ್ಯಕೀಯ ವಿದ್ಯಾರ್ಥಿ ದಿಲ್ಲಿಯ ಏಮ್ಸ್ ಹಾಸ್ಟೆಲ್ ನಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ (ಆಗಸ್ಟ್ 10-2020) ನಡೆದಿದೆ. ಕಳೆದ ಎರಡು ತಿಂಗಳಲ್ಲಿ ನಡೆದ 5ನೇ ಆತ್ಮಹತ್ಯೆ ಘಟನೆ ಇದಾಗಿದೆ ಎಂದು ವರದಿ ತಿಳಿಸಿದೆ.
ನವದೆಹಲಿಯ ಆಲ್ ಇಂಡಿಯಾ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನ ಎರಡನೇ ವರ್ಷದ ವಿದ್ಯಾರ್ಥಿ ಹಾಸ್ಟೆಲ್ ರೂಂ ನಂಬರ್ 19ರಿಂದ ಕೆಳಕ್ಕೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈತನನ್ನು ವಿಕಾಸ್ ಎಂದು ಗುರುತಿಸಲಾಗಿದೆ.
ಹಾಸ್ಟೆಲ್ ಮಹಡಿಯಿಂದ ಕೆಳಕ್ಕೆ ಹಾರಿ ವ್ಯಕ್ತಿಯೊಬ್ಬ ಬಿದ್ದಿರುವುದಾಗಿ ದೂರವಾಣಿ ಕರೆಯೊಂದನ್ನು ಸ್ವೀಕರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಹೋದಾಗ, ವಿದ್ಯಾರ್ಥಿ ಪ್ರಜ್ಞಾಹೀನನಾಗಿ ಬಿದ್ದಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿರುವುದಾಗಿ ವರದಿ ತಿಳಿಸಿದೆ.
ಮೃತ ವಿಕಾಸ್ (22ವರ್ಷ) ಬೆಂಗಳೂರು ಮೂಲದ ವೈದ್ಯಕೀಯ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಈತನನ್ನು ವೈದ್ಯರು ಕೆಲ ಸಮಯದ ಹಿಂದೆ ಮಾನಸಿಕ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ವಿಕಾಸ್ ಸೋಮವಾರ ಕರ್ತವ್ಯದಲ್ಲಿದ್ದು, ವಾರ್ಡ್ ನಲ್ಲಿದ್ದಾಗ ಒಂದು ಗಂಟೆ ವಿರಾಮ ತೆಗೆದುಕೊಂಡಿದ್ದ. ಈ ಸಮಯದಲ್ಲಿ ಹಾಸ್ಟೆಲ್ ಗೆ ಬಂದು ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ವಿವರಿಸಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.