Advertisement

ವೈದ್ಯರ ಮೇಲೆ ಹಲ್ಲೆ ಖೇದಕರ

02:15 PM Jul 02, 2020 | mahesh |

ಬ್ಯಾಡಗಿ: ಕೋವಿಡ್ ಗೆ ಚಿಕಿತ್ಸೆ ನೀಡಿದ ಅದೆಷ್ಟೋ ವೈದ್ಯರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಜನರ ಪ್ರಾಣ ರಕ್ಷಣೆ ನಮ್ಮ ಕರ್ತವ್ಯ ಎಂದು ತಿಳಿದು ನಾವು ಪ್ರಾಮಾಣಿಕವಾಗಿ
ಕೆಲಸ ಮಾಡುತ್ತಿದ್ದರೂ ರೋಗಿಯ ಸಾವಿಗೆ ನಮ್ಮನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಪುಟ್ಟರಾಜ ನೋವು ವ್ಯಕ್ತಪಡಿಸಿದರು.

Advertisement

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಟರಿ ಸಂಸ್ಥೆ, ತಾಲೂಕು ರೈಲ್ವೆ ಪ್ರಯಾಣಿಕರ ಕ್ಷೇಮಾಭಿವೃದ್ಧಿ ಹಾಗೂ ಸುಧಾರಣಾ ಸಮಿತಿಯ ವತಿಯಿಂದ ಆಯೋಜಿಸಿದ್ದ ವಿಶ್ವ ವೈದ್ಯ  ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರಿ ಆಸ್ಪತ್ರೆಗಳಲ್ಲಿನ ವೈದ್ಯರ ಬಗ್ಗೆ ಜನರಲ್ಲಿ ತಿರಸ್ಕಾರ ಮನೋಭಾವ ಮೂಡುತ್ತಿದೆ. ವೈದ್ಯೋ ನಾರಾಯಣೋ ಹರಿ ಎನ್ನುವುದು ಮಾತಿಗಷ್ಟೆ ಸೀಮಿತವಾಗುತ್ತಿದ್ದು, ನಿರಂತರವಾಗಿ ಸಾರ್ವಜನಿಕ ಸೇವೆಯಲ್ಲಿ ತೊಡಗಿ ರೋಗಿಗಳ ಪ್ರಾಣ ರಕ್ಷಣೆ ಮಾಡುವ ವೈದ್ಯರ ಮೇಲೆ ಹಲ್ಲೆ ನಡೆಸುವ ಪ್ರಕರಣಗಳು ದಿನದಿನಕ್ಕೆ ಹೆಚ್ಚಾಗುತ್ತಲೇ ಸಾಗುತ್ತಿರುವುದು ಖೇದಕರ ಸಂಗತಿ ಎಂದರು.

ಕುಟುಂಬದವರನ್ನು ಬದಿಗಿಟ್ಟು ಸರಕಾರಿ ಕೆಲಸ ದೇವರ ಸೇವೆ ಎಂದು ಸಂಬಂಧಿಕರ ಅಂತ್ಯಕ್ರಿಯೆಗೂ ತೆರಳದೇ ಸೇವೆ ಮಾಡುತ್ತಿದ್ದೇವೆ. ಅವಘಡ ಸಂಭವಿಸಿದಾಗ ಪ್ರಥಮ
ಚಿಕಿತ್ಸೆ ಕುರಿತಂತೆ ಎಲ್ಲರಿಗೂ ಜಾಗೃತಿ ಮೂಡಬೇಕಿದೆ. ಆಗ ಮಾತ್ರ ವೈದ್ಯರ ಮೇಲಿನ ಹಲ್ಲೆ ಪ್ರಕರಣಗಳಿಗೆ ಕಡಿವಾಣ ಹಾಕಬಹುದಾಗಿದೆ ಎಂದರು.

ಡಾ| ಎಸ್‌.ನಾಗರಾಜ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಾರ್ಪೋರೇಟ್‌ ವಲಯದ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆಗಳಿಂದ ವೈದ್ಯಕೀಯ ವೃತ್ತಿ ವ್ಯಾಪಾರೀಕರಣವಾಗುತ್ತಿದ್ದು, ಹಣವಿಲ್ಲದೇ
ಉಪಚಾರವಿಲ್ಲ ಎಂಬಂತಾಗಿದೆ. ಇದರಿಂದ ವೈದ್ಯರ ದಿನಾಚರಣೆ ಕಾರ್ಯಕ್ರಮವನ್ನು ನಾವೇ ಆಚರಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿರುವುದು ದುರಂತದ ಸಂಗತಿ ಎಂದು ಖೇದ ವ್ಯಕ್ತಪಡಿಸಿದರು.

ಸಮಿತಿಯ ವತಿಯಿಂದ ಸರಕಾರಿ ಆಸ್ಪತ್ರೆಯ ಎಲ್ಲ ವೈದ್ಯರನ್ನು ಸನ್ಮಾನಿಸಲಾಯಿತು. ವೈದ್ಯರಾದ ಮಹೇಶ, ರಮೇಶ, ಎಸ್‌.ಜಿ.ಸತ್ಯಮೂರ್ತಿ, ವಿರೇಶ್‌ ಹೊಸ್ಮನಿ, ಚಂದ್ರಕಾಂತ ಮನ್ನಾಪೂರ, ಸಮಿತಿ ಅಧ್ಯಕ್ಷ ಮಾಲತೇಶ ಅರಳೀಮಟ್ಟಿ, ಉಪಾಧ್ಯಕ್ಷ ಪರಶುರಾಮ ಮೇಲಗಿರಿ, ಗೌರವ ಕಾರ್ಯದರ್ಶಿ ಎ.ಎಂ.ಸೌದಾಗರ, ನಿರ್ದೇಶಕ ಬಸವರಾಜ ಹಂಜಿ ಹಾಗೂ ಇತರರು ವೇದಿಕೆಯಲ್ಲಿದ್ದರು. ಶ್ವೇತಾ ಸ್ವಾಗತಿಸಿ, ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next