ಲಕ್ನೋ: ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ತಾನೇ ಎಂಬುದಾಗಿ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಶುಕ್ರವಾರ (ಜನವರಿ 21) ಸುಳಿವು ನೀಡಿದ್ದಾರೆ.
ಇದನ್ನೂ ಓದಿ:ಕೋವಿಡ್ ಮಹತ್ವದ ಸಭೆ: ವೀಕೆಂಡ್ ಕರ್ಫ್ಯೂ ತೆರವು, ನೈಟ್ ಕರ್ಫ್ಯೂ ಮುಂದುವರಿಕೆ
ಉತ್ತರಪ್ರದೇಶದಲ್ಲಿ ನಿಮ್ಮ ಪಕ್ಷದ ಸಿಎಂ ಅಭ್ಯರ್ಥಿ ಯಾರು ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕಾ ಗಾಂಧಿ, ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದಿಂದ ಬೇರೆ ಮುಖ ಕಾಣಿಸುತ್ತಿದೆಯೇ, ಎಲ್ಲೆಡೆ ನೀವು ನನ್ನ ಮುಖವನ್ನು ನೋಡುತ್ತಿದ್ದೀರಿ ಎಂದು ಹೇಳುವ ಮೂಲಕ ಸಿಎಂ ಅಭ್ಯರ್ಥಿ ತಾನೇ ಎಂಬುದನ್ನು ಪರೋಕ್ಷವಾಗಿ ಸುಳಿವು ನೀಡಿರುವುದಾಗಿ ವರದಿ ತಿಳಿಸಿದೆ.
ಪ್ರಿಯಾಂಕಾ ಗಾಂಧಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೋ ಅಥವಾ ಇಲ್ಲವೋ ಎಂಬುದು ಖಚಿತವಾಗಿಲ್ಲ. ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಯುವ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದು, ಈ ಸಂದರ್ಭದಲ್ಲಿ ಸಹೋದರ ರಾಹುಲ್ ಗಾಂಧಿ ಕೂಡಾ ಹಾಜರಿದ್ದರು.
ನೀವು(ಪ್ರಿಯಾಂಕಾ) ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ, ಈ ಬಗ್ಗೆ ನಾವು ಈವರೆಗೂ ಏನನ್ನೂ ನಿರ್ಧರಿಸಿಲ್ಲ ಎಂದು ಪ್ರತಿಕ್ರಿಯೆ ನೀಡಿರುವುದಾಗಿ ವರದಿ ಹೇಳಿದೆ. ಚುನಾವಣೆ ನಂತರ ಒಂದು ವೇಳೆ ಪರಿಸ್ಥಿತಿಗೆ ಅನುಗುಣವಾಗಿ ಸಣ್ಣ ಪಕ್ಷಗಳ ಬೆಂಬಲದ ಬಗ್ಗೆ ಕಾಂಗ್ರೆಸ್ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತಿಳಿಸಿದೆ.
ಉತ್ತರಪ್ರದೇಶಕ್ಕೆ ಹೊಸ ದೃಷ್ಟಿಕೋನ ಬೇಕಾಗಿದೆ ಎಂದು ರಾಹುಲ್ ಗಾಂಧಿ ತಿಳಿಸಿದ್ದು, ಇದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಪ್ರಾದೇಶಿಕ ಪಕ್ಷದಿಂದ ಸಾಧ್ಯವಿಲ್ಲ. ನಾವು ದ್ವೇಷವನ್ನು ಹರಡುತ್ತಿಲ್ಲ, ನಾವು ಜನರನ್ನು ಒಗ್ಗೂಡಿಸುತ್ತಿದ್ದೇವೆ. ನಮಗೆ ಯುವಸಮೂಹದ ಹೊಸ ಉತ್ತರಪ್ರದೇಶ ಬೇಕಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.