Advertisement

ನಿಮಗೆ ಗೂಂಡಾ ಸರ್ಕಾರ ಬೇಕೇ?

12:26 PM Mar 03, 2018 | |

ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಶಾಂತಿಯ ನೆಲವೀಡಾಗಿದ್ದ ರಾಜಧಾನಿ ಬೆಂಗಳೂರು ಗೂಂಡಾರಾಜ್‌ ಆಗಿ ಪರಿವರ್ತನೆಯಾಗುತ್ತಿದೆ. ಹೀಗಾಗಿ ಕಾಂಗ್ರೆಸ್‌ ನೇತೃತ್ವದ ಗೂಂಡಾರಾಜ್‌ ಬೇಕೇ ಅಥವಾ ಬಿಜೆಪಿ ನೇತೃತ್ವದ ಉತ್ತಮ ಆಡಳಿತ ಬೇಕೇ ಎಂಬುದನ್ನು ನಿರ್ಧರಿಸುವ ಸಮಯ ಬಂದಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಪ್ರಕಾಶ್‌ ಜಾವಡೇಕರ್‌ ಹೇಳಿದ್ದಾರೆ.

Advertisement

ರಾಜಧಾನಿ ಬೆಂಗಳೂರಿನ ಐದು ಪ್ರಮುಖ ಸಮಸ್ಯೆ ಅಥವಾ ವಿಚಾರಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಶುಕ್ರವಾರದಿಂದ ಆರಂಭಿಸಿರುವ “ಕಾಂಗ್ರೆಸ್‌ನಿಂದ ಬೆಂಗಳೂರು ರಕ್ಷಿಸಿ’ ಪಾದಯಾತ್ರೆಗೆ ಚಾಲನೆ ದೊರೆತ ನಂತರ ಎನ್‌.ಆರ್‌.ಕಾಲೊನಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ಗಾರ್ಡನ್‌ ಸಿಟಿಯಾಗಿದ್ದ ಬೆಂಗಳೂರನ್ನು ಕಾಂಗ್ರೆಸ್‌ ಸರ್ಕಾರ ಗಾರ್ಬೇಜ್‌ ಸಿಟಿ ಮಾಡಿದೆ. ಇದನ್ನು ಮತ್ತೆ ಗಾರ್ಡನ್‌ ಸಿಟಿಯಾಗಿ ಮಾಡಲು ಬಿಜೆಪಿ ಅಧಿಕಾರಕ್ಕೆ ಬರಬೇಕು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಜತೆಗೆ, ಬೆಂಗಳೂರಿನ ಎಲ್ಲ 28 ಕ್ಷೇತ್ರಗಳಲ್ಲೂ ಬಿಜೆಪಿ ಶಾಸಕರು ಗೆದ್ದುಬರುವಂತಾಗಬೇಕು ಎಂದು ಹೇಳಿದರು.

ಯು ಗೋ ಸಿದ್ದರಾಮಯ್ಯ!: “ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿವು ಅಧಿಕಾರದಿಂದ ಕೆಳಗಿಳಿಯುವ ಸಮಯ ಬಂದಿದೆ,’ ಎಂದು ಹೇಳಿದ ಪ್ರಕಾಶ್‌ ಜಾವಡೇಕರ್‌, ನೆರೆದಿದ್ದ ಕಾರ್ಯಕರ್ತರಿಂದ “ಯು ಗೋ ಸಿದ್ದರಾಮಯ್ನಾ’ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿಸಿದರು.

ಮೋದಿಗಿರಿ ಬೇಕು:ಕೇಂದ್ರ ಸಚಿವ ಅನಂತಕುಮಾರ್‌ ಮಾತನಾಡಿ, ಶಾಂತಿ, ಸೌಹಾರ್ದತೆಯ ನಗರವಾಗಿರುವ ಬೆಂಗಳೂರಿಗೆ ಬೇಕಾಗಿರುವುದು ಕಾಂಗ್ರೆಸ್‌ನ ಗೂಂಡಾಗಿರಿ ಅಲ್ಲ, ಮೋದಿಗಿರಿ. ಆದ್ದರಿಂದ ಗೂಂಡಾಗಿರಿ ಮಾಡುವ ಕಾಂಗ್ರೆಸ್‌ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಿ, ಮೋದಿಗಿರಿಯ ಸರ್ಕಾರ ನೀಡಲು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಹೇಳಿದರು. 

Advertisement

ಮಾಫಿಯಾ ಸರ್ಕಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಮಾಫಿಯಾ ಮೂಲಕ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕಿದೆ. ಈ ಗೂಂಡಾ ಮತ್ತು ಮಾಫಿಯಾ ಸರ್ಕಾರದ ವಿರುದ್ಧ ಬಿಜೆಪಿ ಪಾದಯಾತ್ರೆ ಆರಂಭಿಸಿದ್ದು, ಇದನ್ನು ಬೆಂಬಲಿಸುವ ಮೂಲಕ ಮಾಫಿಯಾ ಸರ್ಕಾರವನ್ನು ಅಧಿಕಾರದಿಂದ ಕಿತ್ತೂಗೆಯಬೇಕು. ಸದಾ ಸಿದ್ಧ ಎನ್ನುತ್ತಾ ಕೂತಲ್ಲೇ ನಿದ್ದೆ ಮಾಡುತ್ತಿರುವ ಕಾಂಗ್ರೆಸ್‌ ಸರ್ಕಾರಕ್ಕೆ ಇತಿಶ್ರೀ ಹಾಡಬೇಕು ಎಂದರು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ಸ್ವತ್ಛ ಭಾರತದ ಅಭಿಯಾನದಡಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಅನುದಾನ ನೀಡಿದೆಯಾದರೂ ಅದನ್ನು ಕಾಂಗ್ರೆಸ್‌ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ. ಇದರ ಪರಿಣಾಮ ಬೆಂಗಳೂರಿನಲ್ಲಿ ಮೂಲ ಸೌಕರ್ಯ ಕೊರತೆ ಉಂಟಾಗಿದ್ದು, ಜನ ಕುಡಿಯಲು ನೀರಿಲ್ಲದೆ ಕಷ್ಟಪಡುತ್ತಿದ್ದಾರೆ ಎಂದು ಆರೋಪಿಸಿದರು.

ಬೆಂಗಳೂರಿನ ಸಂಚಾರ ಸಮಸ್ಯೆ ಬಗೆಹರಿಸಲು ಎಲಿವೇಟೆಡ್‌ ಕಾರಿಡಾರ್‌ ಯೋಜನೆ ಅನುಷ್ಠಾನಕ್ಕೆ ಬಿಜೆಪಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ರಾಜ್ಯದ ಕಾಂಗ್ರೆಸ್‌ ಸರ್ಕಾರ ಈ ಪ್ರಸ್ತಾವನೆಗೆ ಸಹಕರಿಸಲಿಲ್ಲ. ಇನ್ನೊಂದೆಡೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫ‌ಲವಾಗಿ ಸಿಲಿಕಾನ್‌ ಸಿಟಿಯನ್ನು ಕ್ರೈ ಸಿಟಿ ಮಾಡಲು ಹೊರಟಿದೆ. ಇದರ ವಿರುದ್ಧ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದರು.

ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌, ಶಾಸಕ ರವಿ ಸುಬ್ರಮಣ್ಯ ಸೇರಿದಂತೆ ಪಕ್ಷದ ಶಾಸಕರು, ಕಾರ್ಪೋರೇಟರ್‌ಗಳು, ಪಕ್ಷದ ಬೆಂಗಳೂರು ಮಹಾನಗರ ಘಟಕದ ಪದಾಧಿಕಾರಿಗಳು ಹಾಜರಿದ್ದರು. ಕಾಂಗ್ರೆಸ್‌ ಶಾಸಕರ ಪುತ್ರ ಮತ್ತು ಅಪ್ತರ ದೌರ್ಜನ್ಯದಿಂದ, ಸರಗಳ್ಳರ ಕಾಟದಿಂದ, ಅತ್ಯಾಚಾರಿಗಳಿಂದ, ರೋಗತರುವ ಧೂಳಿನಿಂದ, ಮರಗಳ ನಾಶದಿಂದ, ಕಿತ್ತೆದ್ದ ರಸ್ತೆ ಗುಂಡಿಗಳಿಂದ, ಕುಡಿಯುವ ನೀರಿನ ಕೊರತೆಯಿಂದ ಬೆಂಗಳೂರು ಉಳಿಸಿ ಎಂಬ ಘೋಷವಾಕ್ಯಗಳಿರುವ ಫ್ಲೆಕ್ಸ್‌ಗಳೊಂದಿಗೆ ನೂರಾರು ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಈ ಐದಂಶ ಆಧರಿಸಿ ಪಾದಯಾತ್ರೆ
1. ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ, 
2. ವ್ಯಾಪಕ ಭ್ರಷ್ಟಾಚಾರ
3. ಕಳಪೆ ಮೂಲ ಸೌಕರ್ಯ 
4. ನಿಯಂತ್ರಣ ತಪ್ಪಿದ ಸಂಚಾರ ವ್ಯವಸ್ಥೆ 
5. ಬೆಂಕಿ ಹತ್ತಿ ಉರಿಯುತ್ತಿರುವ ಕೆರೆಗಳು

Advertisement

Udayavani is now on Telegram. Click here to join our channel and stay updated with the latest news.

Next