ಈ ಹಿಂದೆ “ಈಶ್ವರಿ’, “ಸುಮತಿ’ “ಆಕಾಶ ದೀಪ’ ಮುಂತಾದ ಹಲವು ಧಾರಾವಾಹಿಗಳನ್ನು ಹಾಗೂ ಒಂದು ಚಿತ್ರವನ್ನೂ ನಿರ್ದೇಶಿಸಿದ್ದ ಶ್ರೀನಿವಾಸ್ ಶಿಡ್ಲಘಟ್ಟ, ಈಗ ಬಹಳ ದಿನಗಳ ನಂತರ ಮತ್ತೂಮ್ಮೆ ಹಿರಿತೆರೆ ಬಂದಿದ್ದಾರೆ. ಕೇವಲ 12 ಗಂಟೆಯೊಳಗೆ ನಡೆಯುವ ಒಂದು ಕಥೆಯನ್ನು ಚಿತ್ರ ಮಾಡಿರುವ ಅವರು, ಚಿತ್ರಕ್ಕೆ “ಸಿಕ್ಸ್ ಟು ಸಿಕ್ಸ್’ ಎಂಬ ಹೆಸರನ್ನು ಇಟ್ಟಿದ್ದಾರೆ.
ಈ ಚಿತ್ರದ ಬಗ್ಗೆ ಮಾಧ್ಯಮದವರಿಗೆ ಒಂದಿಷ್ಟು ವಿಷಯಗಳನ್ನು ಹೇಳುವುದಕ್ಕೆ ಶ್ರೀನಿವಾಸ್ ಇತ್ತೀಚೆಗೆ ಬಂದಿದ್ದರು.
ಬೆಳಿಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆಯವರೆಗೂ ನಡೆಯುವಂತಹ ಘಟನೆಗಳನ್ನು ಇಟ್ಟುಕೊಂಡು ಚಿತ್ರ
ಮಾಡಿರುವುದರಿಂದ, ಈ ಚಿತ್ರಕ್ಕೆ “6 to 6′ ಎಂಬ ಹೆಸರನ್ನು ಇಡಲಾಗಿದೆ. ಈ ಚಿತ್ರವನ್ನು ಕಳೆದ ವರ್ಷವೇ ಪ್ರಾರಂಭಿಸಲಾಗಿದ್ದು, ಇದೀಗ ಮುಕ್ತಾಯದ ಹಂತಕ್ಕೆ ಬಂದಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದು, ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. “ದೃಶ್ಯ’ ಚಿತ್ರದ ಸ್ವರೂಪಿಣಿ ಹಾಗೂ ತಾರಕ್ ಪೊನ್ನಪ್ಪ ನಾಯಕ-ನಾಯಕಿಯಾಗಿ ಕಾಣಿಸಿಕೊಂಡಿದ್ದು, ಮಿಕ್ಕಂತೆ ಸುರೇಶ್ ಹೆಬ್ಳೀಕರ್, ಸದಾಶಿವ
ಬ್ರಹ್ಮಾವರ್, ಮೈಸೂರು ರಮಾನಂದ್ ಸೇರಿದಂತೆ ಹಲವಾರು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಈ ಚಿತ್ರಕ್ಕೆ ಗಾಯಕಿ ಮಾನಸ ಹೊಳ್ಳ ಸಂಗೀತ ಸಂಯೋಜಿಸುತ್ತಿದ್ದಾರೆ. “ಶಂಖನಾದ’ ಅರವಿಂದ್ ಅವರ ಪುತ್ರಿ ಮಾನಸ ಇದಕ್ಕೂ ಮುನ್ನ ಟಿವಿ ಸೀರಿಯಲ್‌ಗಳಿಗೆ ಟ್ಯೂನ್ ಹಾಕಿದ್ದರಂತೆ. ಈಗ ಮೊದಲ ಬಾರಿಗೆ ಸಂಗೀತ ನಿರ್ದೇಶನ ಮಾಡುವುದರ ಜೊತೆಗೆ ರೀ-ರೆಕಾರ್ಡಿಂಗ್ ಸಹ ಮಾಡಿದ್ದಾರೆ. ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರವನ್ನು ಅಭಿಷೇಕ್ ಎಂ.ಎ. ನಿರ್ಮಾಣ ಮಾಡಿದ್ದಾರೆ.
ಕೊಪ್ಪ, ಶೃಂಗೇರಿ, ಹೊರನಾಡು ಹಾಗೂ ಜಯಪುರದ ಸುತ್ತಮುತ್ತ ಈ ಚಿತ್ರಕ್ಕೆ ಸುಮಾರು 46 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಚಿತ್ರಕ್ಕೆ ಗಣೇಶ್ ಹೆಗಡೆ ಅವರ ಛಾಯಾಗ್ರಹಣ ಮತ್ತು ಕೆ. ಕಲ್ಯಾಣ್ ಅವರ ಸಾಹಿತ್ಯವಿದೆ.