Advertisement
ಕಳೆದ 8 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಡಾ. ವಿಷ್ಣುವರ್ಧನ ಅವರ ಸ್ಮಾರಕ ನಿರ್ಮಾಣದ ವಿಷಯಕ್ಕೆ ತಾರ್ಕಿಕ ಅಂತ್ಯವನ್ನು ಒದಗಿಸಲು ಇದು ಸಕಾಲವೆಂದು ಭಾವಿಸುತ್ತೇನೆ. ಮೈಸೂರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಸ್ಥಳ ನಿಗದಿಯಾಗಿದ್ದರೂ ಸಹ, ಅಂತ್ಯ ಸಂಸ್ಕಾರವಾದ ಜಾಗದಲ್ಲಿಯೇ ಅವರ ನೆನಪಿನ ಸ್ಮಾರಕ ಇರಬೇಕೆಂಬುದು ಕನ್ನಡಿಗರ ಮತ್ತು ಅವರ ಅಸಂಖ್ಯಾತ ಅಭಿಮಾನಿಗಳ ಕೋರಿಕೆಯಾಗಿರುವುದು ತಮಗೆ ತಿಳಿಯದ ವಿಷಯವೇನಲ್ಲ.
Related Articles
Advertisement
ಈ ಸ್ಮಾರಕದ ವಿಷಯ ಪರಿಹಾರಕ್ಕೆ ಸಂಬಂಧಿಸಿದಂತೆ ಕೆಲವೊಂದು ಸಾಧ್ಯತೆಗಳನ್ನು ತಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇನೆ. ಇವುಗಳು ಖಂಡಿತ ಸಹಕಾರಿಯಾಗಬಲ್ಲದೆಂದು ನಂಬಿದ್ದೇನೆ.
1. ಅಭಿಮಾನ್ ಸ್ಟುಡಿಯೋದಲ್ಲಿ ಡಾ. ವಿಷ್ಣುವರ್ಧನ ಸ್ಮಾರಕಕ್ಕಾಗಿ ನಿಗದಿಪಡಿಸಿರುವ ಎರಡು ಎಕರೆ ಜಾಗದ ಬದಲು ಒಂದು ಅಥವಾ ಅರ್ಧ ಎಕರೆ ಜಾಗವನ್ನು ಅಖೈರುಗೊಳಿಸುವುದು.
2. ದಿ.ಬಾಲಕೃಷ್ಣ ಅವರ ಕುಟುಂಬಕ್ಕೆ ಪರಿಹಾರ ಒದಗಿಸುವುದು. ಅಭಿಮಾನ್ ಸ್ಟುಡಿಯೋ ಸರ್ಕಾರಿ ಜಮೀನಾಗಿರುವ ಕಾರಣ, ಸರ್ಕಾರವೇ ಅದಕ್ಕೆ ಪರಿಹಾರ ಹಣ ಕೊಟ್ಟು ಖರೀದಿಸಲಾಗುವುದಿಲ್ಲವೆಂದರೆ, ಅದನ್ನು ಖರೀದಿಸಲು ವಿಷ್ಣು ಅಭಿಮಾನಿಗಳಿಗೆ ಅವಕಾಶ ಮಾಡಿಕೊಡುವುದು.
3. ಅಭಿಮಾನ್ ಸ್ಟುಡಿಯೋದ ಮೇಲೆ ಸರ್ಕಾರ ಹಾಕಿರುವ ಮೊಕದ್ದಮೆಗಳನ್ನು ವಾಪಸ್ಸು ಪಡೆಯುವುದು.
4. ಈ ಸಂಬಂಧ ಬಾಲಕೃಷ್ಣ ಅವರ ಕುಟುಂಬದ ಜೊತೆ ಖುದ್ದಾಗಿ ತಾವೇ ಒಂದು ಸಭೆ ನಡೆಸಿದರೆ ಖಂಡಿತ ಅವರು ಒಪ್ಪುತ್ತಾರೆ ಎಂಬುದು ನನ್ನ ಖಚಿತ ನಿಲುವು.
ಈ ಸಾಧ್ಯತೆಗಳು ನನ್ನ ತಿಳುವಳಿಕೆಗೆ ಸಂಬಂಧಿಸಿರುವುಗಳೇ ಆಗಿವೆ. ಈ ಸಾಧ್ಯತೆಗಳನ್ನು ತಾವು ಬಳಸುವುದು ಅಥವಾ ಸರ್ಕಾರಿ ನಿಮಗಳನುಸಾರ ಮುಂದುವರಿಯುವುದು ತಮ್ಮ ವಿವೇಚನೆಗೆ ಬಿಟ್ಟ ಸಂಗತಿಗಳಾಗಿವೆ. ದಯಮಾಡಿ ಡಾ.ವಿಷ್ಣುವರ್ಧನ ಅವರ ಪುಣ್ಯ ಭೂಮಿ ನಿರ್ಮಾಣಕ್ಕೆ ಡಿಸೆಂಬರ್ 30ರ ಒಳಗೆ ತಾರ್ಕಿಕ ಅಂತ್ಯ ಒದಗಿಸಬೇಕೆಂದು ವಿನಂತಿಸುತ್ತೇನೆ.
ವಂದನೆಗಳೊಂದಿಗೆ…ತಮ್ಮ ವಿಶ್ವಾಸಿ,
ಕಿಚ್ಚ ಸುದೀಪ್