Advertisement
ಬೆಳ್ಳಂಬೆಳಿಗ್ಗೆ ದುಂಡು ಮಲ್ಲಿಗೆಯ ಮೊಗ್ಗಿನ ಮಾಲೆಯನ್ನು ಮನೆಯವರಿಗೆಲ್ಲ ಸಾಲುವಂತೆ, ಮಾರುಗಟ್ಟಲೆ ತಂದುಕೊಟ್ಟಿದ್ದೆ. ಮನೆಯವರೆಲ್ಲರೂ ಪರಿಚಯ ನಿನಗೆ. ಅವರ ಕಣ್ಣಲ್ಲಿ ಒಳ್ಳೆಯ ಹುಡುಗ ಎಂಬ ಮುದ್ರೆ ಆಗಲೇ ಬಿದ್ದಾಗಿತ್ತು. ಅಭ್ಯಾಸದ ವಿಷಯಕ್ಕೆ ಸಂಬಂಧಿಸಿದ ಬುಕ್ಸ್, ನೋಟ್ಸ್ ಗಳನ್ನು, ನಾ ಕೇಳದಿದ್ದರೂ ತಂದುಕೊಟ್ಟು ಓದು, ಚೆನ್ನಾಗಿ ಬರೆ ಎಂದಿದ್ದೆ. ಅವತ್ತು, ಹಾಗೆಯೇ ತುಸುಹೊತ್ತು ನಿನ್ನ ಜೊತೆ ನಡೆದರಾಯ್ತು ಎಂದು, ಅಲ್ಲೇ ಸಮೀಪದಲ್ಲಿದ್ದ ರಾಘವೇಂದ್ರರ ದೇವಾಲಯವನ್ನು ಹೊಕ್ಕಿದ್ದಾಯ್ತು. ಗಂಟೆ ಬಾರಿಸಿ, ಕೈಮುಗಿದು, ತೀರ್ಥ ಸ್ವೀಕರಿಸಿ, ಎರಡು ಸುತ್ತು ಪ್ರದಕ್ಷಿಣೆ ಹಾಕಿ ಕುಂತಾಗ, ಅಲ್ಲೇ ಗಿಡದಲ್ಲಿ ಆಟವಾಡುತ್ತಿದ್ದ ಗುಬ್ಬಚ್ಚಿಗಳ ಕಲರವ ಮನಸೂರೆಗೊಂಡಿತ್ತು.
ಮಾತನಾಡಿದೆವೇ ಹೊರತು ಬೇರೇನೂ ಇಲ್ಲ. ಕ್ಲಾಸ್‌ನಲ್ಲಿ ಸಹಪಾಠಿಯಾದ ನಿನ್ನ ಜೊತೆ, ಹೆಸರಿಸಲಾಗದ ಬಂಧ. ಮುಂದಿನ ವಿದ್ಯಾಭ್ಯಾಸ ಮತ್ತು ಕೆಲಸಕ್ಕೆ ನೀನು ಬೆಂಗಳೂರಿಗೆ ಹೋಗು ವುದು ಪಕ್ಕಾ ಆಗಿತ್ತು. ಕ್ಷಣಕಾಲ ದೇವಾಲಯದಲ್ಲಿ ಕಳೆದು ಮತ್ತೆ ಮನೆಗೆ ಬರುವಾಗ ಮತ್ತೆ ಮೌನ. ಕಾಲ ಹೆಜ್ಜೆಗಳಿಗೆ ಗಿಡಮರಗಳೇ ಸಾಥ್ ನೀಡಿದ್ದವು. ನಿನ್ನಲ್ಲಿರುವ ಎಲ್ಲಾ ಭಾವನೆಗಳಿಗೆ ನಾನು ಸಾಕ್ಷಿಯಾಗಿದ್ದೆ. ಮುಂದೆ ಇಬ್ಬರೂ ಮುಂದಿನ ಅಭ್ಯಾಸ, ವೃತ್ತಿ ಎಂದು ಬಿಜಿಯಾಗಿ, ನಮ್ಮ ನಮ್ಮ ಲೋಕದಲ್ಲಿ ಕಳೆದುಹೋದೆವು. ಆಗೊಮ್ಮೆ ಈಗೊಮ್ಮೆ ಉಭಯ ಕುಶಲೋಪರಿಯ ಪತ್ರಗಳು ಸಂದಾಯವಾಗುತ್ತಿದ್ದವು. ಕಾಲಚಕ್ರದ ಉರುಳುವಿಕೆಯಲ್ಲಿ, ಮುಂದಿನ ದಿನಗಳಲ್ಲಿ ಆಶ್ಚರ್ಯ ಎನ್ನುವಂತೆ ಪತ್ರಗಳೂ ದೀರ್ಘ ವೇಳೆಯ ಬೇರ್ಪಡಿಸುವಿಕೆ ಡಿಟ್ಯಾರ್ಜೆಂಟನ್ನು ಹುಟ್ಟಿಸಿತ್ತು. ಜೀವನದಲ್ಲಿ ಏನು ನಡೀತಾ ಇದೆ ಎಂದು ಕೇಳುವ ಉತ್ಸುಕತೆಯೂ ಆಗ ಇರಲಿಲ್ಲ. ದಿನಗಳು ಉರುಳುತ್ತಾ ಹೋದವು. ನಾನು ವೃತ್ತಿ, ಮದುವೆ- ಮಕ್ಕಳೆಂದು ನಿರತಳಾದರೆ, ನಿನ್ನದು ಏನೂ ಗೊತ್ತಾಗಲಿಲ್ಲ. ಆ ದಿನ ನಾನು ನನ್ನ ಮನೆಗೆ, ನೀನು ನಿನ್ನೂರಿಗೆ ಹೋದದ್ದು ಈ ರೀತಿ ದೀರ್ಘ ಬೇರ್ಪಡಿಸುವಿಕೆಗೆ ನಾಂದಿ ಹಾಡುತ್ತದೆ ಅಂತ ಗೊತ್ತೇ ಆಗಲಿಲ್ಲ. ಮಾತುಗಳು ಎಷ್ಟೊಂದು ಆಡದೇ ಉಳಿದವು. ಭಾವನೆಗಳು ಒಳಗೇನೇ ಖುದ್ದು, ನಂದಿ ಹೋದವು.
Related Articles
Advertisement
ಮಾಲಾ ಮ. ಅಕ್ಕಿಶೆಟ್ಟಿ