Advertisement

ಕುಮಾರಣ್ಣ ಕೇಳುವರೇ ರೈತರ ಗೋಳು?

12:35 PM Nov 25, 2018 | Team Udayavani |

ಸಿಂಧನೂರು: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅಧಿಕಾರ ವಹಿಸಿಕೊಂಡ ಮೇಲೆ ಪ್ರಥಮ ಬಾರಿಗೆ ಜಿಲ್ಲೆಗೆ ಬರುತ್ತಿದ್ದು, ನಾಡಿನ ದೊರೆ ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಅಭಯ ನೀಡುವರೋ ಎಂಬ ಆಸೆ ಕಂಗಳಿಂದ ಕಾಯುತ್ತಿದ್ದಾರೆ.

Advertisement

ಕಳೆದ ಮೂರು ವರ್ಷಗಳಿಂದ ಭೀಕರ ಬರಗಾಲದ ಕರಿ ನೆರಳಿನಲ್ಲಿ ರೈತ ಸಮೂಹ ನಲುಗಿ ಹೋಗಿದೆ. ಅತೀವೃಷ್ಟಿ ಹಾಗೂ ಅನಾವೃಷ್ಟಿಗಳಿಂದ ಅನ್ನದಾತನ ಬದುಕು ಮೂರಾಬಟ್ಟೆಯಾಗಿದೆ. 

ಇನ್ನು ಸಾಲ ಸೋಲ ಮಾಡಿದ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ ರೈತರು ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರಸಕ್ತ ವರ್ಷ ರಾಯಚೂರು ಜಿಲ್ಲೆಯ ಕೆಲ ಭಾಗ ಹೊರತು ಪಡಿಸಿ ಬಹುತೇಕ ಭಾಗ ಮಳೆಯಿಲ್ಲದೇ ಬರಗಾಲದ ದವಡೆಗೆ ಗುರಿಯಾಗಿದೆ. ಸರ್ಕಾರ ಬರಪೀಡಿತ ಪ್ರದೇಶವೆಂದು ಘೋಷಿಸಿದ್ದರೂ ಬರ ಪರಿಹಾರ ಕಾಮಗಾರಿಗಳು ಇದುವರೆಗೂ ಪ್ರಾರಂಭವಾಗಿಲ್ಲ. ಕಳೆದ ವಾರದ ಹಿಂದಷ್ಟೇ ಕೇಂದ್ರ ತಂಡ ಜಿಲ್ಲೆಯ ಕೆಲವೆಡೆ ಬರ ಅಧ್ಯಯನ ನಡೆಸಿದೆ.

ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ನೀರು ಕೆಳ ಭಾಗದ ರೈತರಿಗೆ ಕಣ್ಣೀರಾಗಿದೆ. ಅವರಿಗೆ ಕುಡಿಯಲು ಸಹ ನೀರು ದೊರಕುತ್ತದೆ ಎಂದು ವಿಶ್ವಾಸ ಉಳಿದಿಲ್ಲ. ಸರ್ಕಾರ ಎಷ್ಟೇ ಪೊಲೀಸ್‌, ನೀರಾವರಿ, ಕಂದಾಯ ಅಧಿಕಾರಿಗಳನ್ನು ಬಳಸಿ ಮೇಲ್ಭಾಗದ ನೀರ್ಗಳ್ಳರನ್ನು ಹಿಡಿಯಲು ಪ್ರಯತ್ನಿಸಿದರೂ ರಂಗೋಲಿ ಕೆಳಗೆ ನೂಕುವ ಮೇಲ್ಭಾಗದ ರೈತರು ನೀರನ್ನು ಸುಳಿವಿಲ್ಲದಂತೆ ಕದಿಯುವುದನ್ನು ಕರಗತ ಮಾಡಿಕೊಂಡಿದ್ದಾರೆ. ಅಕ್ರಮವಾಗಿ ಕೆಲ ಕಾರ್ಖಾನೆಗಳಿಗೆ ರಾಜಾರೋಷವಾಗಿ ನೀರು ಮಾರಾಟವಾಗುತ್ತಿರುವ ವಿಚಾರ ಗೊತ್ತಿದ್ದರೂ ನೀರಾವರಿ ಅಧಿಕಾರಿಗಳು ನೆಪಕ್ಕಾದರೂ ಪ್ರಕರಣಗಳನ್ನು ದಾಖಲಿಸುತ್ತಿಲ್ಲ. 

ಇದನ್ನು ಗಮನಿಸಿದರೆ ಅಧಿಕಾರಿಗಳ ಮೇಲೆ ರಾಜಕೀಯ ಒತ್ತಡ ಹೆಚ್ಚಿದೆ. ಇದರಿಂದಾಗಿ ಅವರು ಅಸಹಾಯಕರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಳ ಭಾಗದ ರೈತರಿಗೆ ನೀರು ಸಮರ್ಪಕವಾಗಿ ಪೂರೈಕೆಯಾಗದಿರುವುದಕ್ಕೆ ಮುಖ್ಯ ಕಾರಣ ತುಂಗಭದ್ರಾ ಜಲಾಶಯದಲ್ಲಿ 33 ಟಿಎಂಸಿಯಷ್ಟು ಹೂಳು ತುಂಬರುವುದು. ಇದರಿಂದಾಗಿ ನೀರಿನ ಸಂಗ್ರಹ ಪ್ರಮಾಣ ಸಹಜವಾಗಿ ಕಡಿಮೆಯಾಗುತ್ತಿದೆ. 

Advertisement

ಹೂಳು ತೆಗೆಸಲು ಸರ್ಕಾರಗಳಿಂದ ವಿಶ್ವಪ್ರಯತ್ನ ಮಾಡಿದರೂ ಸಾಧ್ಯವಾಗದು ಎಂದು ಅನೇಕ ನೀರಾವರಿ ಮಂತ್ರಿಗಳು, ತಜ್ಞರು ಹೇಳುತ್ತಲೇ ಬಂದಿದ್ದಾರೆ. ಪರ್ಯಾಯವಾಗಿ ರೈತರಿಗೆ ನೀರಿನ ಅನುಕೂಲ ಕಲ್ಪಸಲು ಸಮಾನಾಂತರ ಜಲಾಯಶಗಳ ನಿರ್ಮಾಣಕ್ಕೆ ರಾಜಕೀಯ ಇಚ್ಛಾಶಕ್ತಿ ಬಳಸುತ್ತಿಲ್ಲ. ನವಲಿ ಅಥವಾ ಕಾಟಪುರ ಬಳಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಅಂತಿಮ ರೂಪುರೇಷೆಗಳು ಸಿದ್ದವಾಗಿರುವ ಬಗ್ಗೆ ಜನಪ್ರತಿನಿಧಿಗಳು ಹೇಳುತ್ತಿದ್ದಾರೆ. ಅದಕ್ಕೆ ಮುಖ್ಯಮಂತ್ರಿಗಳು ತಮ್ಮ ಅವಧಿಯಲ್ಲಾದರೂ ಅಸ್ತು ನೀಡುವರೇ?

ತ್ರಿಶಂಕು ಸ್ಥಿತಿಯಲ್ಲಿ ರೈತರು: ರೈತರ ಸಾಲ ಮನ್ನಾ ಮಾಡಿದ ಬಗ್ಗೆ ಸರ್ಕಾರ ಘೋಷಣೆ ಮಾಡಿದೆಯಾದರೂ ಅದಿನ್ನೂ ಸಂಪೂರ್ಣವಾಗಿ ಅನುಷ್ಠಾನಗೊಂಡಿಲ್ಲ. ಇನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಾಲ ಮನ್ನಾ ಮಾಡುವ ಬಗ್ಗೆ ರೈತಾಪಿ ವರ್ಗ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದೆ. ಆದರೆ ಕುಮಾರಸ್ವಾಮಿ ಆಗೊಮ್ಮೆ-ಇಗೊಮ್ಮೆ ಮಾತ್ರ ಬ್ಯಾಂಕ್‌ಗಳ ಸಾಲ ಮನ್ನಾ ಬಗ್ಗೆ ಮೂಗಿಗೆ ತುಪ್ಪ ಸವರುವಂತೆ ಹೇಳಿಕೆ ನೀಡುತ್ತಿದ್ದಾರೆ. ಇದರಿಂದಾಗಿ ರೈತರು ತಮ್ಮ ಹಳೆ ಸಾಲ ಕಟ್ಟಲು ಒಂದೆಡೆ ಹಿಂದೇಟು ಹಾಕುತ್ತಿದ್ದಾರೆ. ಹಳೆ ಸಾಲ ಕಟ್ಟುವವರೆಗೂ ಅವರಿಗೆ ಹೊಸ ಸಾಲಗಳು ಸಿಕ್ಕುತ್ತಿಲ್ಲ. ಒಟ್ಟಾರೆ ಅವರ ಸ್ಥಿತಿ ತ್ರಿಶಂಕುವಾಗಿದೆ.

ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗದೇ ಬ್ಯಾಂಕ್‌ ಗಳ ಸಾಲ ತೀರಿಸಲಾಗದೇ ರೈತರು ಒದ್ದಾಡುತ್ತಿದ್ದಾರೆ. ಈ ಬಾರಿಯಂತೂ ಒಂದನೇ ಬೆಳೆ ಉಳಿಸಿಕೊಳ್ಳಲೂ ರೈತರು ಹೆಣಗಾಡುವಂತಾಗಿದೆ. ಎರಡನೇ ಬೆಳೆಗೆ ನೀರಿಲ್ಲವೆಂದು ಐಸಿಸಿ ಅಧ್ಯಕ್ಷರು ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ ಈಗಾಗಲೇ ಘೋಷಿಸಿದ್ದಾರೆ. ಇದರಿಂದಾಗಿ ರೈತರು ಇನ್ನಷ್ಟು ಜರ್ಝರಿತರಾಗಿದ್ದಾರೆ. ರೈತ ಬೆಳೆದ ಭತ್ತದ ಬೆಳೆಗೆ ಕನಿಷ್ಠ ಬೆಂಬಲ ಬೆಲೆಯನ್ನಾದರೂ ಮುಖ್ಯಮಂತ್ರಿಗಳು ಸಿಂಧನೂರಿನಲ್ಲಿ ಘೋಷಿಸುತ್ತಾರೆ ಎಂಬ ಆಶಾಭಾವನೆಯನ್ನು ರೈತರು ಹೊಂದಿದ್ದಾರೆ. ಖರೀದಿ ಕೇಂದ್ರಗಳನ್ನು ಆರಂಭಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಬಹುದು ಎಂಬ ನಿರೀಕ್ಷೆಯನ್ನು ಹೊಂದಿದ್ದಾರೆ. ಯಾವುದಕ್ಕೂ ಇಂದು ಉತ್ತರ ಸಿಗಲಿದೆ.

„ಡಿ. ಶರಣೇಗೌಡ ಗೊರೇಬಾಳ

Advertisement

Udayavani is now on Telegram. Click here to join our channel and stay updated with the latest news.

Next