Advertisement

ನದಿ ನೀರು ಪರೀಕ್ಷಿಸಿಯೇ ಕೆರೆಗೆ ಬಿಡಲಿ

02:55 PM Apr 01, 2022 | Team Udayavani |

ಜಗಳೂರು: ತುಂಗಭದ್ರಾ ನದಿಯಿಂದ ಜಗಳೂರು ವಿಧಾನಸಭಾ ಕ್ಷೇತ್ರದ 57 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಮುಕ್ತಾಯದ ಹಂತ ತಲುಪಿದ್ದು, ಯು.ಟಿ ಟೆಸ್ಟ್‌ ಮತ್ತು ಐಡಲ್‌ ಟೆಸ್ಟ್‌ ಮಾಡಿದ ನಂತರ ಕೆರೆಗಳಿಗೆ ನೀರು ಬಿಡಬೇಕು ಎಂದು ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಲೇರುದ್ರೇಶ್‌ ಒತ್ತಾಯಿಸಿದರು.

Advertisement

ಬುಧವಾರ ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಮತ್ತು ಗುತ್ತಿಗೆ ಪಡೆದ ಕಂಪನಿಯ ಅಧಿಕಾರಿಗಳು ಏತ ನೀರಾವರಿ ಯೋಜನೆ ಫಲಪ್ರದವಾಗಬೇಕಾದರೆ ಯಾವುದೇ ಕಾರಣಕ್ಕೂ ಅವಸರ ಮಾಡಬಾರದು. ಕೂಲಂಕುಷವಾಗಿ ಪರಿಶೀಲಿಸಬೇಕು. ವೆಲ್ಡಿಂಗ್‌ ಮಾಡುವಾಗ ಒಂದೇ ಒಂದು ಸಣ್ಣ ತೂತು ಬಿದ್ದರೂ ನೀರಿನ ರಭಸಕ್ಕೆ ಪೈಪ್‌ಗಳಿಂದ ನೀರು ಹೊರಬಂದು ಅನಾಹುತ ಸೃಷ್ಟಿಯಾಗಬಹುದು. ಹೀಗಾಗಿ ಅವಸರದಲ್ಲಿ ನೀರು ಹರಿಸುವ ಅಗತ್ಯವಿಲ್ಲ. ಸಂಸದರು, ಶಾಸಕರು ಅಧಿಕಾರಿಗಳ ಜೊತೆಗೆ ಭೇಟಿ ನೀಡಿ ಚರ್ಚಿಸಬೇಕು. ನಂತರ ಸಾಧಕ ಬಾಧಕಗಳ ಕುರಿತು ಪರಾಮರ್ಶಿಸಬೇಕು ಎಂದರು.

ಒಂದು ಯೋಜನೆ ಯಶಸ್ವಿಯಾಗಬೇಕಾದರೆ ಮೊದಲು ಯೋಜನೆಯ ಗುಣಮಟ್ಟ ಪರೀಕ್ಷಿಸಬೇಕು. ರೈಸಿಂಗ್‌ ಮೇನ್‌ ಕಾಮಗಾರಿಯ ಪೈಪ್‌ ಅಳವಡಿಸುವಾಗ ವೆಲ್ಡಿಂಗ್‌ ಮಾಡಲಾಗುತ್ತದೆ. ಅದನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು. ಐಡ್ಲಿಂಗ್‌ ಟೆಸ್ಟ್‌ ಎಂದರೆ ನೀರು ತುಂಬುವ ಮುನ್ನ ಪೈಪ್‌ಗ್ಳ ಕ್ವಾಲಿಟಿ ಮತ್ತು ಕ್ವಾಂಟಿಟಿಯನ್ನು ಪರಿಶೀಲಿಸಬೇಕು ಇಲ್ಲದಿದ್ದರೆ ಏನಾದರೂ ವ್ಯತ್ಯಾಸವಾಗಿ ಸಮಯ ಮತ್ತು ಹಣ ವ್ಯರ್ಥವಾಗುತ್ತದೆ. ಸಂಪೂರ್ಣವಾಗಿ ಪರಿಶೀಲಸಿದ ನಂತರವೇ ದೀಟೂರಿನ ಜಾಕ್‌ವೆಲ್‌ನಲ್ಲಿ ಅಳವಡಿಸಲಾಗಿರುವ ಮೋಟಾರ್‌ ಪಂಪ್‌ಗಳನ್ನು ಆನ್‌ ಮಾಡಬೇಕು. ಇಲ್ಲವಾದರೆ ಕೋಟಿಗಟ್ಟಲೆ ಹಣ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ತುಪ್ಪದಹಳ್ಳಿ ಕೆರೆಗೆ ನೀರು ಹರಿಸುವ ಡಿಲೆವರಿ ಚೇಂಬರ್‌ (ನೀರು ಚಿಮ್ಮುವ ಕಾರಂಜಿ) ಕಾಮಗಾರಿ ಆರಂಭವಾಗಿಲ್ಲ. ಮಾರ್ಚ್‌ ಅಂತ್ಯಕ್ಕೆ ತುಪ್ಪದಹಳ್ಳಿ ಕೆರೆಗೆ ನೀರು ಹರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಇನ್ನೂ ಆಮೆಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 57 ಕೆರೆಗಳ ಜೊತೆಗೆ ಬಿಟ್ಟು ಹೋಗಿರುವ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು 2ನೇ ಹಂತದಲ್ಲಿ ಕೈಗೆತ್ತಿಕೊಳ್ಳಬೇಕು. ಇಲ್ಲವಾದರೆ ರೈತರಿಗೆ ಅನ್ಯಾಯವಾಗುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸಣ್ಣತಿಪ್ಪೇಸ್ವಾಮಿ, ಬಸವರಾಜ್‌, ನಿವೃತ್ತ ಉಪನ್ಯಾಸಕ ಎನ್‌. ರಾಜಪ್ಪ, ಶಿವಾಜಿ ರಾವ್‌, ಮಾಚಿಕೆರೆ ಪ್ರಭು ಇತರರು ಇದ್ದರು.

ಪ್ರಸ್ತುತ ವರ್ಷಮುಂಗಾರು ಹಂಗಾಮು ಉತ್ತಮವಾಗಿದ್ದು ಏಪ್ರಿಲ್‌ ಅಂತ್ಯ ಅಥವಾ ಮೇ ತಿಂಗಳ ಎರಡನೇ ವಾರದಲ್ಲಿ ಮಳೆ ಬರುವ ನಿರೀಕ್ಷೆಯಿದೆ. ಹೀಗಾಗಿ ಅಪೂರ್ಣಗೊಂಡಿರುವ ಪೈಪ್‌ ಲೈನ್‌ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳು ಗಮನ ನೀಡಬೇಕು. – ಕಲ್ಲೇರುದ್ರೇಶ್‌, ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ

Advertisement
Advertisement

Udayavani is now on Telegram. Click here to join our channel and stay updated with the latest news.

Next