ದಾವಣಗೆರೆ: ಒಂದೇ ಒಂದು ದಿನವೂ ಕೆಲಸ ಮಾಡದೇ ಇದ್ದಂಥಹವರ ಕಾಯಮಾತಿಗೆ ಹಣ ಪಡೆದ ಕೆಲವು ಸದಸ್ಯರು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿರುವ ಬಗ್ಗೆ ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗ ನಿಗಾವಹಿಸಬೇಕು ಎಂದು ಒತ್ತಾಯಿಸಿ ರಾಜ್ಯ ಮಹಾನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾ ಸಂಘದವರು ಶುಕ್ರವಾರ ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗ ಅಧ್ಯಕ್ಷ ಎಂ.ಆರ್. ವೆಂಕಟೇಶ್‌ಗೆ ಮನವಿ ಸಲ್ಲಿಸಿದರು.
ಹಲವಾರು ವರ್ಷದಿಂದ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರ ಕಾಯಮಾತಿಗೆ ಒತ್ತಾಯಿಸಿ ಸಂಘ ನಡೆಸಿದ ಸುಧೀರ್ಘ ಹೋರಾಟದ ಪರಿಣಾಮ ಸರ್ಕಾರ ಯಾವಾಗ ಕಾಯಂ ಪ್ರಕ್ರಿಯೆಗೆ ಮುಂದಾಯಿತೋ ಕೆಲವು ಸದಸ್ಯರು ಈಗಾಗಲೇ ಕೆಲಸ ಮಾಡುತ್ತಿರುವರನ್ನು ಕೆಲಸದಿಂದ ಬಿಡಿಸಿ, ಒಂದೇ ಒಂದು ದಿನವೂ ಕೆಲಸ ಮಾಡದೇ ಇದ್ದವರನ್ನು ಹೊರ ಗುತ್ತಿಗೆ ನೌಕರರ ಪಟ್ಟಿಯಲ್ಲಿ ಸೇರಿಸಲು ಅಧಿಕಾರಿಗಳ ಮೇಲೆ ಇನ್ನಿಲ್ಲದ ಒತ್ತಡ ಹೇರುತ್ತಿದ್ದಾರೆ.
ಕೆಲಸ ಖಾಯಂ ಮಾಡಿಸುವುದಾಗಿ 50 ಸಾವಿರದಿಂದ ಲಕ್ಷದವರೆಗೆ ಹಣ ಪಡೆದುಕೊಂಡಿದ್ದಾರೆ ಎಂದು ಜಿಲ್ಲಾ ಅಧ್ಯಕ್ಷ ಎಲ್.ಎಂ. ಹನುಮಂತಪ್ಪ ಆಯೋಗದ ಅಧ್ಯಕ್ಷರ ಗಮನ ಸೆಳೆದರು. ದಾವಣಗೆರೆ ಮಹಾನಗರಪಾಲಿಕೆಯಲ್ಲಿ ಕೆಲಸ ಮಾಡುತ್ತಿರುವ 287 ಹೊರ ಗುತ್ತಿಗೆ ಆಧಾರಿತ ಪೌರ ಕಾರ್ಮಿಕರ ಪೈಕಿ 86 ಜನರನ್ನು ಕೆಲಸದಿಂದ ಬಿಡಿಸಿ, ಅವರ ಜಾಗದಲ್ಲಿ ಬೇರೆಯವರನ್ನು ಸೇರಿಸುವ ಹುನ್ನಾರ ನಡೆಯುತ್ತಿದೆ. ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗ ಇಂಥಹ ಪ್ರಕರಣಗಳ ಬಗ್ಗೆ ಗಮನ ಹರಿಸಿ, ಕೂಲಂಕುಷವಾಗಿ ಪರಿಶೀಲಿಸಿ, ತಡೆಗಟ್ಟಬೇಕು.
ಮೊದಲಿನಿಂದಲೂ ಕೆಲಸ ಮಾಡುತ್ತಿರುವರನ್ನ ಗುರುತಿಸಿ, ಕೆಲಸವನ್ನು ಕಾಯಂಗೊಳಿಸಬೇಕು. 5ನೇ ತಾರೀಖೀನೊಳಗೆ ವೇತನ, ಗುರುತಿನ ಚೀಟಿ, ಆಶ್ರಯಮನೆ, ಉಪಾಹಾರದ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು. ಸಂಘದ ಎಲ್.ಎಚ್. ಸಾಗರ್, ಬಿ. ಲೋಹಿತ್, ಎಂ. ಓಮೇಶ್, ಎಚ್. ರವಿವರ್ಧನ್, ಕೆ.ವಿ. ಚಂದ್ರಶೇಖರ್, ಅರವಿಂದ್ ಕುಮಾರ್, ಮೂರ್ತಿ, ಶಿವರಾಜ್, ಚೇತನ್, ನಿಖೀಲ್, ಮತ್ತೂರಮ್ಮ, ಮಂಜಮ್ಮ, ರೇಣುಕಮ್ಮ ಇತರರು ಇದ್ದರು.