Advertisement

ಆನ್‌ಲೈನ್‌ ಔಷಧ ಮಾರಾಟ ಬೇಡವೇ ಬೇಡ

11:43 AM Sep 29, 2018 | |

ದಾವಣಗೆರೆ: ಇ-ಫಾರ್ಮಸಿ (ಆನ್‌ ಲೈನ್‌ನಲ್ಲಿ ಔಷಧ ಮಾರಾಟ) ಕುರಿತಂತೆ ಕೇಂದ್ರ ಸರ್ಕಾರ ಪ್ರಕಟಿಸಿರುವ ಕರಡು ಅಧಿಸೂಚನೆ ರದ್ದತಿಗೆ ಒತ್ತಾಯಿಸಿ ಶುಕ್ರವಾರ ರಾಷ್ಟ್ರವ್ಯಾಪಿ ಔಷಧ ಅಂಗಡಿ ಬಂದ್‌ ಕರೆಗೆ ದಾವಣಗೆರೆಯಲ್ಲೂ ಔಷಧ ಅಂಗಡಿಗಳ ವಹಿವಾಟು ಸ್ಥಗಿತಗೊಳಿಸಿ, ಪ್ರತಿಭಟಿಸಲಾಯಿತು.

Advertisement

ಜಿಲ್ಲಾ ಚಿಗಟೇರಿ ಆಸ್ಪತ್ರೆ, ಬಾಪೂಜಿ ಆಸ್ಪತ್ರೆ, ನರ್ಸಿಂಗ್‌ ಹೋಂಗೆ ಹೊಂದಿಕೊಂಡಿರುವ ಮೆಡ್‌ಪ್ಲಸ್‌, ಮೆಡಿಹೌಸ್‌, ಜನೌಷಧಿ ಮಳಿಗೆ ಹೊರತುಪಡಿಸಿ 455ಕ್ಕೂ ಹೆಚ್ಚು ಔಷಧಿ ಅಂಗಡಿಗಳು ಬಂದ್‌ ಆಗಿದ್ದವು. ಕೆಲವು ಕಡೆ ಔಷಧಕ್ಕಾಗಿ ಜನರು ಅಲೆಯುವಂತಾಯಿತು. ಎಲ್ಲಾ ಅಂಗಡಿಗಳು ಬಂದ್‌ ಆಗಿದ್ದ ಕಾರಣಕ್ಕೆ ಜಿಲ್ಲಾ ಚಿಗಟೇರಿ ಆಸ್ಪತ್ರೆ, ಬಾಪೂಜಿ ಆಸ್ಪತ್ರೆ, ನರ್ಸಿಂಗ್‌ ಹೋಂಗೆ ಹೊಂದಿಕೊಂಡಿರುವ
ಮೆಡ್‌ಪ್ಲಸ್‌, ಮೆಡಿಹೌಸ್‌, ಜನೌಷಧಿ ಮಳಿಗೆಯಲ್ಲಿ ಸಾಮಾನ್ಯ ದಿನಕ್ಕಿಂತಲೂ ಹೆಚ್ಚಿನ ರಷ್‌ ಕಂಡು ಬಂದಿತು. ತುರ್ತು ಔಷಧ ಬೇಕಾದವರಿಗೆ ಸಂಘದಿಂದಲೇ ಔಷಧಿ ಒದಗಿಸುವ ವ್ಯವಸ್ಥೆ ಮಾಡಲಾಗಿತ್ತು. 

ಜಿಲ್ಲಾ ಕೇಂದ್ರ ದಾವಣಗೆರೆಯಲ್ಲಿ 455 ಒಳಗೊಂಡಂತೆ ಜಿಲ್ಲಾದ್ಯಂತ 1,050ಕ್ಕೂ ಹೆಚ್ಚು ಔಷಧಿ ಅಂಗಡಿಗಳು ಮುಚ್ಚಿದ್ದರಿಂದ 10 ಕೋಟಿಗೂ ಅಧಿಕ ವಹಿವಾಟು ನಡೆಯಲಿಲ್ಲ. ನಗರ ಪ್ರದೇಶಗಳಲ್ಲಿ ಅಂತಹ ಸಮಸ್ಯೆ ಆಗದೇ ಇದ್ದರೂ ಗ್ರಾಮೀಣ ಭಾಗದಲ್ಲಿ ಸಮಸ್ಯೆ ಆಯಿತು.

ಇ-ಫಾರ್ಮಸಿ ಕುರಿತಂತೆ ಕೇಂದ್ರ ಸರ್ಕಾರ ಪ್ರಕಟಿಸಿರುವ ಕರಡು ಅಧಿಸೂಚನೆಯನ್ನು ರದ್ದುಪಡಿಸುವಂತೆ ಒತ್ತಾಯಿಸಿ ಗುರುವಾರವೂ ಮನವಿ ಸಲ್ಲಿಸಿದ್ದ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು, ಶುಕ್ರವಾರ ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪರಿಗೆ ಮತ್ತೆ ಮನವಿ ಸಲ್ಲಿಸಿದರು.
 
ಆನ್‌ಲೈನ್‌ ಔಷಧ ಮಾರಾಟಕ್ಕೆ ಅವಕಾಶ ನೀಡುವುದರಿಂದ ಔಷಧ ವ್ಯಾಪಾರಿಗಳಿಗಿಂತಲೂ ಸಮಾಜದ ಮೇಲೆ ಭಾರೀ ದುಷ್ಪರಿಣಾಮ ಉಂಟಾಗುತ್ತದೆ. ಮತ್ತು ಬರಿಸುವ, ಆಮಲುಗೆ ಕಾರಣವಾಗುವ ಕೆಲ ಔಷಧಗಳು ಅತಿ ಸುಲಭ ಮತ್ತು ನೇರವಾಗಿ ಯುವ ಜನಾಂಗಕ್ಕೆ ತಲುಪುತ್ತವೆ. ಅಂತಹ ಔಷಧಗಳ ಬಳಕೆ ಕ್ರಮೇಣ ಚಟ, ದುಶ್ಚಟವಾಗಿ ಬೆಳೆಯುವುದರಿಂದ ಭವಿಷ್ಯದಲ್ಲಿ ಸಾಮಾಜಿಕ ವ್ಯವಸ್ಥೆ ಮೇಲೆ ಭಾರೀ ಕೆಟ್ಟ ಪರಿಣಾಮ ಉಂಟಾಗಲಿದೆ. ಹಾಗಾಗಿ ಆನ್‌ಲೈನ್‌ ಔಷಧ ಮಾರಾಟಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಸಂಘದ ಜಂಟಿ ಕಾರ್ಯದರ್ಶಿ ಎಸ್‌. ರವಿಕುಮಾರ್‌ ತಿಳಿಸಿದರು.

ಕೆಲವು ಔಷಧಗಳ ಸೇವನೆಯಿಂದ ಮತ್ತು ಬರುತ್ತದೆ. ಅಮಲು, ನಿದ್ರೆ ಬರುತ್ತದೆ. ಅಂತಹ ಔಷಧಗಳನ್ನು ನಮ್ಮ ಅಂಗಡಿಗಳಲ್ಲಿ
ಕೊಡುವುದೇ ಇಲ್ಲ. ಡಾಕ್ಟರ್‌ ಶಿಫಾರಸು ಮಾಡಿದ್ದರೂ ಕೆಲವೊಮ್ಮೆ ಕೊಡುವುದಿಲ್ಲ. ಯಾರೋ ಬಳಸಬೇಕಾದ ಔಷಧವನ್ನು ಇನ್ಯಾರೋ ಬಳಸುವುದು ಕೆಟ್ಟ ಪರಿಣಾಮಕ್ಕೆ ದಾರಿ ಆಗುತ್ತದೆ ಎನ್ನುವ ಕಾರಣಕ್ಕೆ ಎಲ್ಲರಿಗೂ ಕೊಡುವುದೇ ಇಲ್ಲ. ರೋಗಿಯ ಪೂರ್ವಾಪರ ಚೆನ್ನಾಗಿ ತಿಳಿದಿದ್ದರೆ ಮಾತ್ರವೇ ಕೆಲವು ಔಷಧಗಳನ್ನು ಕೊಡಲಾಗುತ್ತದೆ. 

Advertisement

ನಾವೊಬ್ಬರೇ ಅಲ್ಲ, ಬಹುತೇಕ ಔಷಧ ವ್ಯಾಪಾರಿಗಳು ಅಘೋಷಿತ ಕಾನೂನಿನಂತೆ ಹೀಗೆ ನಡೆದುಕೊಳ್ಳುತ್ತಾರೆ. ನಮಗೆ ವ್ಯಾಪಾರಕ್ಕಿಂತಲೂ ಸಮಾಜದ ಮೇಲೆ ಆಗುವ ಪರಿಣಾಮ ಮುಖ್ಯ ಆಗುತ್ತದೆ ಎಂದು ತಿಳಿಸಿದರು.

ಆದರೆ, ಆನ್‌ಲೈನ್‌ನಲ್ಲಿ ಔಷಧ ಮಾರಾಟಕ್ಕೆ ಅವಕಾಶ ಮಾಡಿಕೊಡುವುದರಿಂದ ಯಾರು ಬೇಕಾದರೂ ಮತ್ತು, ಅಮಲು, ನಿದ್ರೆಗೆ ಕಾರಣವಾಗುವ ಔಷಧಗಳನ್ನ ಸುಲಭವಾಗಿ, ಎಷ್ಟು ಬೇಕೋ ಅಷ್ಟು ನೇರವಾಗಿ ಪಡೆಯಬಹುದು. ಯಾವುದೇ ನಿಯಂತ್ರಣವೇ ಇರುವುದೇ ಇಲ್ಲ. ಒಮ್ಮೆ ಅಂತಹ ಔಷಧ ಬಳಕೆ ಪ್ರಾರಂಭಿಸಿದರೆ ಅದುವೇ ಮುಂದೆ ಭಾರೀ ಚಟವಾಗಿ ಬೆಳೆಯುತ್ತದೆ. ಕೆಲವಾರು ನಿಷೇಧಿತ ಔಷಧಗಳು ಕೈಗೆ ಸಿಗುವಂತಾಗುತ್ತದೆ. ಹಾಗಾಗಿ ಔಷಧ ಅಂಗಡಿಗಳವರ ಸ್ವಹಿತಕ್ಕಿಂತಲೂ ಸಾಮಾಜಿಕ ಹಿತಾಸಕ್ತಿಯಿಂದ ರಾಷ್ಟ್ರವ್ಯಾಪಿ ಔಷಧ ಆಂಗಡಿ ಬಂದ್‌ ಮಾಡಲಾಗಿದೆ ಎಂದು ತಿಳಿಸಿದರು.

ಆನ್‌ಲೈನ್‌ ಮೂಲಕ ಔಷಧ ಮಾರಾಟಕ್ಕೆ ಅವಕಾಶ ನೀಡುವುದರಿಂದ ಕೆಲವಾರು ಮಾನಸಿಕ ರೋಗಕ್ಕೆ ಬಳಸುವ ಔಷಧಗಳು ಸಹ ಸುಲಭವಾಗಿ ದೊರೆಯುವಂತಾಗುತ್ತದೆ. ಅದು ಮತ್ತೂಂದು ರೀತಿಯ ಸಮಸ್ಯೆಗೆ ಕಾರಣವಾಗುತ್ತದೆ. ಹಲವಾರು ಕಾರಣದಿಂದ ಆನ್‌ಲೈನ್‌ ಔಷಧ ಮಾರಾಟ ಸಮಸ್ಯೆಗೆ ಕಾರಣವಾಗುತ್ತದೆ. ಕೇಂದ್ರ ಸರ್ಕಾರ ಆನ್‌ ಲೈನ್‌ನಲ್ಲಿ ಔಷಧ ಮಾರಾಟ ಕುರಿತಂತೆ ಪ್ರಕಟಿಸಿರುವ ಕರಡು ಅಧಿಸೂಚನೆ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು. ಸಂಘದ ಎನ್‌.ಪಿ. ಪ್ರಸನ್ನಕುಮಾರ್‌, ಸುನೀಲ್‌ ದಾಸಪ, ಕೆ. ನಾಗರಾಜ್‌, ಎಸ್‌. ಗೋಪಾಲಕೃಷ್ಣ, ಲಿಂಗರಾಜ್‌ ವಾಲಿ, ವೆಂಕಟರಾಜ್‌, ನಿತೀಶ್‌ಕುಮಾರ್‌ ಜೈನ್‌, ರವಿಚಂದ್ರನಾಯಕ್‌ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next