Advertisement

ಕಾನೂನು ಉಲ್ಲಂಘನೆಯಾಗದಂತೆ ನೋಡಿಕೊಳ್ಳಿ: ನ್ಯಾ|ಪ್ರೇಮಾವತಿ

11:40 AM Nov 10, 2018 | |

ಬೀದರ: ಕಾನೂನುಗಳು ಮನುಷ್ಯ ಹುಟ್ಟಿನಿಂದ ಮರಣ ಹೊಂದುವವರೆಗೆ ರಕ್ಷಣೆಗಾಗಿ ಇರುತ್ತವೆ. ಹಾಗಾಗಿ ಪ್ರತಿಯೊಬ್ಬರೂ ಕಾನೂನುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಮನಗೂಳಿ ಪ್ರೇಮಾವತಿ ಹೇಳಿದರು.

Advertisement

ನಗರದ ಶಾಹೀನ್‌ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಶಾಹೀನ್‌ ಸಮೂಹ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
 
ವಿದ್ಯಾರ್ಥಿಗಳು ನಿತ್ಯ ಜೀವನಕ್ಕೆ ಅಗತ್ಯವಿರುವ ಎಲ್ಲ ಕಾನೂನುಗಳ ಬಗ್ಗೆ ತಿಳಿದುಕೊಂಡಿರಬೇಕು. ಮೋಟಾರ್‌ ವೆಹಿಕಲ್‌ ಕಾಯ್ದೆಯಡಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸಾರ್ವಜನಿಕ ರಸ್ತೆಗಳಲ್ಲಿ ಯಾವುದೇ ರೀತಿಯ ವಾಹನಗಳನ್ನು ಚಲಾಯಿಸುವಂತಿಲ್ಲ. ಒಂದು ವೇಳೆ ಇವರ ವಾಹನಕ್ಕೆ ಸಣ್ಣ ಅಪಘಾತವಾದರೂ ಕ್ರಿಮಿನಲ್‌ ಪ್ರಕರಣ ದಾಖಲಾಗುತ್ತದೆ. ಅಲ್ಲದೇ ವಿಮೆ ಸೌಲಭ್ಯದಿಂದಲೂ ವಂಚಿತರಾಗುತ್ತಾರೆ ಎಂದು ಹೇಳಿದರು.

14 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಮಕ್ಕಳ ಹಕ್ಕಾಗಿರುತ್ತದೆ. ಶಿಕ್ಷಣದಿಂದ ವಂಚಿತರಾದ ಮಕ್ಕಳು ಕಾನೂನಿನ ಮೊರೆ ಹೋಗಬಹದು. ಬಾಲಕರನ್ನು ಕೆಲಸಕ್ಕೆ ದೂಡುವುದು  ಅಪರಾಧವಾಗಿದ್ದು, ಇಂತಹ ಸಣ್ಣ ಪುಟ್ಟ ಕಾನೂನುಗಳ ಬಗ್ಗೆ ಎಲ್ಲರೂ ಮಾಹಿತಿ ಹೊಂದಿರಬೇಕು ಎಂದರು. 

ಶಾಹೀನ್‌ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ| ಅಬ್ದುಲ್‌ ಖದೀರ್‌ ಮಾತನಾಡಿ, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು ಹಾಗೂ ಉತ್ತಮ ಜೀವನಕ್ಕೆ ಕಾನೂನುಗಳು ಸಹಕಾರಿಯಾಗಿರುತ್ತವೆ. ಹಾಗಾಗಿ ಪ್ರತಿಯೊಬ್ಬರೂ ದೇಶದ ಕಾನೂನನ್ನು ಗೌರವಿಸಬೇಕು. ಭಾರತ ಸಂವಿಧಾನವನ್ನು ಓದಬೇಕು. ಮತ್ತು ಕಾನೂನುಗಳ ಬಗ್ಗೆ ಮಾಹಿತಿ ಪಡೆಯಬೇಕು ಎಂದು ತಿಳಿಸಿದರು.

ಹಿರಿಯ ಸಿವಿಲ್‌ ನ್ಯಾಯಾಧೀಶ ಆರ್‌. ರಾಘವೇಂದ್ರ ಮಾತನಾಡಿ, ಪರಿಶಿಷ್ಟ ಜಾತಿ, ಪಂಗಡ, ಮಹಿಳೆಯರು, ಕೂಲಿ ಕಾರ್ಮಿಕರು, ಅಂಗವಿಕಲರು, ಮಾನಸಿಕ ಅಸ್ವಸ್ಥರು, ನೈಸರ್ಗಿಕ ವಿಕೋಪಗಳ ಸಂತ್ರಸ್ತರು ಹಾಗೂ ಇತರ ದುರ್ಬಲ ವರ್ಗದವರಿಗೆ ಜಿಲ್ಲಾ ಮತ್ತು ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಆಯಾ ತಾಲೂಕಿನ ಕಾನೂನು ಸೇವಾ ಸಮಿತಿಯಿಂದ ಉಚಿತವಾಗಿ ಕಾನೂನು ನೆರವು ನೀಡಲಾಗುತ್ತದೆ ಎಂದು ಹೇಳಿದರು. 

Advertisement

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ನಾಸಿ ಚಂದ್ರಕಾಂತ ಮಾತನಾಡಿದರು. ಉಪಾಧ್ಯಕ್ಷ ಸತೀಶ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಸಂತೋಷ ತರನಳ್ಳಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಿಬ್ಬಂದಿ ಶಂಕ್ರೆಪ್ಪ ಜನಕಟ್ಟಿ, ಅನೀಲ ಮೇತ್ರೆ, ಶಾಹೀನ್‌ ಶಿಕ್ಷಣ ಸಂಸ್ಥೆಯ ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪುರಾತತ್ವ ಇಲಾಖೆ ವತಿಯಿಂದ ನಡೆದ ಐತಿಹಾಸಿಕ ಸ್ಥಳಗಳ ಕುರಿತ ತರಬೇತಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next