Advertisement

ಮೆಕ್ಕೆಜೋಳಕ್ಕೆ ಅನಗತ್ಯವಾಗಿ ಯೂರಿಯಾ ಬಳಸಬೇಡಿ

01:22 PM Jul 24, 2020 | Suhan S |

ಚಿತ್ರದುರ್ಗ: ರೈತರು ಮೆಕ್ಕೆಜೋಳಕ್ಕೆ ಹೆಚ್ಚಿನ ಪ್ರಮಾಣದ ಯೂರಿಯಾ ಬಳಸುತ್ತಿರುವುದು ಕಂಡುಬಂದಿದ್ದು, ವಿಜ್ಞಾನಿಗಳ ಶಿಫಾರಸಿನಂತೆ ಪ್ರತಿ ಎಕರೆಗೆ ಗರಿಷ್ಠ 43 ಕೆಜಿ ಯೂರಿಯಾ ಬಳಸಬಹುದಾಗಿದೆ ಎಂದು ರೈತರಿಗೆ ಕೃಷಿ ಇಲಾಖೆ ಸೂಚನೆ ನೀಡಿದೆ.

Advertisement

ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಈಗ ಬಿತ್ತನೆಯಾಗಿರುವ ಮೆಕ್ಕೆಜೋಳ ಬೆಳೆಗೆ ಚಿತ್ರದುರ್ಗ, ಹೊಳಲ್ಕೆರೆ ಮತ್ತು ಹೊಸದುರ್ಗ ತಾಲೂಕುಗಳಲ್ಲಿ ಯೂರಿಯಾ ಮೇಲುಗೊಬ್ಬರವಾಗಿ ಹಾಕಲಾಗುತ್ತಿದೆ. ಯೂರಿಯಾ ರಸಗೊಬ್ಬರವನ್ನು ರೈತರು ಮೆಕ್ಕೆಜೋಳದ ಬೆಳೆಗೆ ವೈಜ್ಞಾನಿಕವಾಗಿ ಮಾಡಿರುವ ಶಿಫಾರಸಿಗಿಂತಲೂ ಅಧಿಕವಾಗಿ ಬಳಸುತ್ತಿರುವುದು ಕಂಡು ಬಂದಿದೆ. ರೈತರು ಪ್ರತಿ ಎಕರೆಗೆ ಎರಡು ಚೀಲ ಯೂರಿಯಾವನ್ನು ಅಂದರೆ 100 ಕೆಜಿ ಯೂರಿಯಾವನ್ನು ಮೇಲುಗೊಬ್ಬರವಾಗಿ ಬಳಸುತ್ತಿರುವುದು ಕಂಡು ಬಂದಿದೆ. ಆದರೆ ಬೆಳೆಯ 45 ರಿಂದ 50 ದಿನಗಳ ಹಂತದಲ್ಲಿ ಒಂದು ಬಾರಿ ಮಾತ್ರ ಯೂರಿಯಾ ರಸಗೊಬ್ಬರ ಕೊಡಬೇಕು. ಕೆಲವೆಡೆ ರೈತರು ಅನಗತ್ಯವಾಗಿ ಬೆಳೆಯ ವಿವಿಧ ಹಂತಗಳಲ್ಲಿ ಎರಡರಿಂದ ಮೂರು ಸಾರಿ, ಮಳೆ ಬಂದಂತೆಲ್ಲಾ ಯೂರಿಯಾ ಬಳಸುತ್ತಿರುವುದು ಕಂಡು ಬಂದಿದ್ದು, ಇದು ಅವೈಜ್ಞಾನಿಕವಾಗಿದೆ. ಯೂರಿಯಾ ಅಧಿಕ ಬಳಕೆಯಿಂದ ಮೆಕ್ಕೆಜೋಳದ ಬೆಳೆ ಹುಲುಸಾಗಿ ಬೆಳೆದು ಕೀಟ ಮತ್ತು ರೋಗ ಬಾಧೆಗಳಿಗೆ ಸುಲಭವಾಗಿ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಯೂರಿಯಾ ನೀರಿನಲ್ಲಿ ಬೇಗನೆ ಕರಗಿ, ಭೂಮಿಯಲ್ಲಿ ಇಂಗಿ ಮತ್ತು ಗಾಳಿಯಲ್ಲಿ ಆವಿಯಾಗಿ ಪೋಷಕಾಂಶಗಳು ನಷ್ಟವಾಗಿ ರೈತರಿಗೆ ಆರ್ಥಿಕವಾಗಿ ನಷ್ಟವಾಗುತ್ತದೆ. ಯೂರಿಯಾ ಅಧಿಕ ಬಳಕೆಯಿಂದ ಮಣ್ಣಿನ ರಚನೆ ಹಾಳಾಗಿ ಭೂ ಫಲವತ್ತತೆ ಕಡಿಮೆಯಾಗುವ ಸಂಭವವಿದೆ. ರೈತರು ಯೂರಿಯಾ ರಸಗೊಬ್ಬರವನ್ನು ಅಗತ್ಯಕ್ಕಿಂತ ಹೆಚ್ಚಾಗಿ ಬಳಸದೆ ಮಣ್ಣು ಪರೀಕ್ಷೆ ಫಲಿತಾಂಶದ ಶಿಫಾರಸಿನ ಆಧಾರದ ಮೇಲೆ ಅಥವಾ ಗರಿಷ್ಠ ಎಕರೆಗೆ ಒಂದು ಚೀಲ ಮಾತ್ರ (45 ಕೆಜಿ), ಬೆಳೆಯ 45 ರಿಂದ 50 ದಿನಗಳ ಹಂತದಲ್ಲಿ ಒಂದು ಬಾರಿ ಮಾತ್ರ ಮೇಲ್ಗೊಬ್ಬರವಾಗಿ ಬಳಸಲು ರೈತರಿಗೆ ಮನವಿ ಮಾಡಲಾಗಿದೆ. ಹೆಚ್ಚಿನ ಮಾಹಿತಿಗೆ ತಾಲೂಕಿನ ರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳನ್ನು ಅಥವಾ ಸಹಾಯಕ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next